ಅಹಮದಾಬಾದ್‌ ವಿಮಾನ ದುರಂತ; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು

Gujarat Plane Crash: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಜನರು ಮೃತಪಟ್ಟಿದ್ದಾರೆ. ಲಂಡನ್‌ಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು. ಈ ದುರಂತದಿಂದಾಗಿ ಇಡೀ ದೇಶ ಶೋಕ ಸಾಗರದಲ್ಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಸಂತಾಪ ಸೂಚಿಸಿದ್ದಾರೆ. ಈ ಭಯಾನಕ ಘಟನೆಯಿಂದಾಗಿ ಭಾರತ ದೇಶವೇ ಆಘಾತಕ್ಕೀಡಾಗಿದೆ.

ಅಹಮದಾಬಾದ್‌ ವಿಮಾನ ದುರಂತ; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು
ಅಹಮದಾಬಾದ್‌ ವಿಮಾನ ದುರಂತ

Updated on: Jun 12, 2025 | 8:04 PM

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ (Ahmedabad plane crash) ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಜೂನ್ 12, ಗುರುವಾರ, ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ 5 ನಿಮಿಷಗಳಲ್ಲಿ ಭೂಮಿಗಪ್ಪಳಿಸಿತು. ಈ ದುರಂತದಲ್ಲಿ 241 ಪ್ರಯಾಣಿಕರು ಸಾವನ್ನಪ್ಪಿದ್ದು, ಏಕೈಕ ಪ್ರಯಾಣಿಕ ಬದುಕುಳಿದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದಾಗ್ಯೂ 200 ಕ್ಕೂ ಅಧಿಕ ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ಈ ಭಯಾನಕ ಘಟನೆ ಇಡೀ ಭಾರತವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಇತ್ತ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಸೇರಿದಂತೆ ಕ್ರಿಕೆಟ್ ಜಗತ್ತು ಕೂಡ ಈ ಅವಘಡದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದೆ.

ಏರ್ ಇಂಡಿಯಾ ವಿಮಾನ AI171 ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೋಗುತ್ತಿತ್ತು. ಈ ಬೋಯಿಂಗ್-787 ಡ್ರೀಮ್‌ಲೈನರ್ ವಿಮಾನವು ಮಧ್ಯಾಹ್ನ 1:38 ಕ್ಕೆ ವಿಮಾನ ನಿಲ್ದಾಣದಿಂದ ಹೊರಟಿತು. ಆದರೆ ಟೇಕ್ ಆಫ್ ಆದ ಕೇವಲ 5 ನಿಮಿಷಗಳಲ್ಲಿ, ಈ ವಿಮಾನವು ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಅಪಘಾತಕ್ಕೀಡಾಯಿತು. ವಿಮಾನದ ಒಂದು ಭಾಗವು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ಬಿದ್ದಿದ್ದು, ಹಾಸ್ಟೆಲ್‌ನಲ್ಲಿದ್ದ ಅನೇಕ ವಿದ್ಯಾರ್ಥಿಗಳೂ ಸಹ ಸಾವನ್ನಪ್ಪಿರುವ ಸಾಧ್ಯತೆಗಳಿವೆ.

ಸಂತಾಪ ಸೂಚಿಸಿದ ಕೊಹ್ಲಿ-ರೋಹಿತ್

ಈ ದುರಂತ ಇಡೀ ಭಾರತವನ್ನು ಬೆಚ್ಚಿಬೀಳಿಸಿದ್ದು, ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಈ ಅಪಘಾತಕ್ಕೆ ಕಂಬನಿ ಮಿಡಿದಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಏಕದಿನ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಈ ಘಟನೆಯನ್ನು ಹೃದಯವಿದ್ರಾವಕ ಎಂದು ಬಣ್ಣಿಸಿದ್ದಾರೆ.

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಈ ದುರಂತದಿಂದ ತುಂಬಾ ದುಃಖಿತರಾಗಿದ್ದು, ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಅಪಘಾತದಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಅದೇ ಸಮಯದಲ್ಲಿ, ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಈ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಮತ್ತು ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಇವರ ಜೊತೆಗೆ ಸ್ಟಾರ್ ವೇಗಿ ಇಶಾಂತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಐಪಿಎಲ್ ಫ್ರಾಂಚೈಸ್ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ಕೂಡ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ