
2026 ರ ಟಿ20 ವಿಶ್ವಕಪ್ (T20 World Cup) ಗೆದ್ದ ಟೀಂ ಇಂಡಿಯಾಗೆ (Team India) ಬಿಸಿಸಿಐನಿಂದ ಭರ್ಜರಿ ಬಹುಮಾನ ಘೋಷಣೆಯಾಗಿದೆ. ಐಸಿಸಿ ನೀಡಿದ 27.48 ಕೋಟಿ ರೂಗಳ ಜೊತೆಗೆ ಬಿಸಿಸಿಐನಿಂದ 131 ಕೋಟಿ ರೂ. ಬಹುಮಾನ ಸಿಕ್ಕಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಪಾಳದಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ತಂಡವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮಖ ಪಾತ್ರವಹಿಸಿದ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ (T. Dilip) ಅವರನ್ನು ಈ ಹುದ್ದೆಯಿಂದ ತೆಗೆದುಹಾಕಬಹುದು ಎಂದು ಹೇಳಲಾಗಲುತ್ತಿದೆ. 2021 ರಿಂದ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್ ಇಷ್ಟರಲ್ಲೇ ಈ ಹುದ್ದೆಯಿಂದ ಕೆಳಗಿಳಿಯಬಹುದು
ವಾಸ್ತವವಾಗಿ, ಟೀಂ ಇಂಡಿಯಾ ಪ್ರಶಸ್ತಿ ಗೆದ್ದರೂ, ತಂಡದ ಫೀಲ್ಡಿಂಗ್ ಮಾತ್ರ ಕಳಪೆಯಾಗಿತ್ತು. ಹಲವಾರು ಪಂದ್ಯಗಳಲ್ಲಿ ತಂಡವು ಸಾಕಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿತ್ತು. ಹೀಗಾಗಿ ಇಡೀ ಪಂದ್ಯಾವಳಿಯಲ್ಲಿ ತಂಡದ ಫೀಲ್ಡಿಂಗ್‌ನಲ್ಲಿನ ಲೋಪಗಳು ಸಾಕಷ್ಟು ಚರ್ಚೆಯಾಗಿದ್ದವು. ಅಲ್ಲದೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡ ಎಂಬ ಬೇಡದ ದಾಖಲೆ ಕೂಡ ಟೀಂ ಇಂಡಿಯಾ ಪಾಲಾಗಿದೆ ಅಂತಹ ಪರಿಸ್ಥಿತಿಯಲ್ಲಿ, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಭವಿಷ್ಯದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಇದಕ್ಕೆ ಇನ್ನೊಂದು ದೊಡ್ಡ ಕಾರಣವೆಂದರೆ ಟಿ. ದಿಲೀಪ್ ಅವರ ಒಪ್ಪಂದವು ಜೂನ್ 2026 ರಲ್ಲಿ ಮುಕ್ತಾಯಗೊಳ್ಳುತ್ತಿದೆ. ಪ್ರಸ್ತುತ ಸನ್ನಿವೇಶವನ್ನು ನೋಡಿದರೆ, ಬಿಸಿಸಿಐ ದಿಲೀಪ್ ಅವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸುವ ಸಾಧ್ಯತೆಗಳಿಲ್ಲ. ಹೀಗಾಗಿ ಅವರ ಬದಲಿಯಾಗಿ ವಿದೇಶಿ ಫೀಲ್ಡಿಂಗ್ ಕೋಚ್ ನೇಮಕಕ್ಕೆ ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿದೆ.
ಮೇಲೆ ಹೇಳಿದಂತೆ 2021 ರಿಂದ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿರುವ ದಿಲೀಪ್, ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಈ ಹುದ್ದೆಗೇರಿದ್ದರು. 2024 ರ ಟಿ 20 ವಿಶ್ವಕಪ್ ನಂತರ ಅವರ ಅಧಿಕಾರಾವಧಿ ಕೊನೆಗೊಂಡಿತ್ತಾದರೂ ಅವರ ಒಪ್ಪಂದವನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಯಿತು. ಆದಾಗ್ಯೂ, ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಲಾಗಿತ್ತು.
ಆದರೆ ರೋಹಿತ್ ಶರ್ಮಾ ಮತ್ತೆ ದಿಲೀಪ್ ಅವರನ್ನೇ ಈ ಹುದ್ದೆಯಲ್ಲಿ ಮುಂದುವರೆಸುವಂತೆ ಬಿಸಿಸಿಐ ಬಳಿ ವಿನಂತಿಸಿಕೊಂಡಿದ್ದರು. ರೋಹಿತ್ ಅವರ ಹಸ್ತಕ್ಷೇಪದಿಂದಾಗಿ, ದಿಲೀಪ್ ಒಂದು ವರ್ಷದ ವಿಸ್ತರಣೆಯನ್ನು ಪಡೆದು ಇಂಗ್ಲೆಂಡ್ ಪ್ರವಾಸಕ್ಕಾಗಿ ತಂಡವನ್ನು ಸೇರಿಕೊಂಡಿದ್ದರು. ಆ ಬಳಿಕ ಟಿ20 ವಿಶ್ವಕಪ್ನಲ್ಲಿಯೂ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆದಾಗ್ಯೂ, ಭವಿಷ್ಯದಲ್ಲಿ ಅವರು ತಂಡದ ಭಾಗವಾಗುತ್ತಾರೆಯೇ ಎಂಬುದು ಈಗ ಬಿಸಿಸಿಐ ಕೈಯಲ್ಲಿದೆ.
ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೂರ್ನಮೆಂಟ್ ತಂಡ ಪ್ರಕಟಿಸಿದ ಐಸಿಸಿ
ಕಳೆದ ವರ್ಷ ಟಿ. ದಿಲೀಪ್ ತಂಡಕ್ಕೆ ಮರು ಪ್ರವೇಶ ಪಡೆಯಲು ಪ್ರಮುಖ ಕಾರಣವೆಂದರೆ ಅವರ ಬದಲಿಯಾಗಿ ಸೂಕ್ತ ಫೀಲ್ಡಿಂಗ್ ಕೋಚ್ ಸಿಗದೆ ಇದ್ದದ್ದು. ವರದಿಗಳ ಪ್ರಕಾರ, ಬಿಸಿಸಿಐ ವಿದೇಶಿ ಫೀಲ್ಡಿಂಗ್ ಕೋಚ್ ಅನ್ನು ಹುಡುಕುತ್ತಿತ್ತು, ಆದರೆ ಅಭ್ಯರ್ಥಿ ಸಿಗದಿದ್ದಾಗ, ದಿಲೀಪ್ ಅವರನ್ನು ಮುಂದುವರೆಸಲಾಯಿತು. ಇದೀಗ ದಿಲೀಪ್ ಅವರನ್ನು ಬದಲಿಸಲು ಬಿಸಿಸಿಐಗೆ ಸಾಕಷ್ಟು ಸಮಯವಿದ್ದು, ಅವರ ಸ್ಥಾನಕ್ಕೆ ಬೇರೋಬ್ಬ ಫೀಲ್ಡಿಂಗ್ ಕೋಚ್ ಬರುವ ಸಾಧ್ಯತೆಗಳು ಹೆಚ್ಚಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Tue, 10 March 26