ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty and KL Rahul ) ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಪ್ರಣಯ ಪಕ್ಷಿಗಳು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಆಗಾಗ್ಗೆ ಬಿತ್ತರಿಸುತ್ತಲೆ ಇದ್ದವು. ಆದರೀಗ ಈ ಜೋಡಿಗಳ ಮದುವೆಯ ಬಗ್ಗೆ ಸ್ವತಃ ಅಥಿಯಾ ಶೆಟ್ಟಿ ತಂದೆ ಸುನೀಲ್ ಶೆಟ್ಟಿ (Sunil Shetty) ಮಾಹಿತಿ ನೀಡಿದ್ದು, ಮದುವೆಯ ತಯಾರಿಯಲ್ಲಿ ತೊಡುಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ವರ್ಷ ಅಥವಾ ಮುಂದಿನ ವರ್ಷ ಮದುವೆಯಾಗಲಿದ್ದು, ಸೂಕ್ತ ವ್ಯವಸ್ಥೆ ಮಾಡುತ್ತಿರುವುದಾಗಿ ವಿಡಿಯೋದಲ್ಲಿ ಸುನೀಲ್ ಶೆಟ್ಟಿ ತಿಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಕುಟುಂಬಗಳು ತಮ್ಮ ಹಿಂದಿನ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ ಬದಲಿಗೆ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆ ನೆರವೇರಿಸಲು ಯೋಜಿಸುತ್ತಿದ್ದಾರೆ. ಜೊತೆಗೆ ರಾಹುಲ್ ಮತ್ತು ಅಥಿಯಾ ಮದುವೆ ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆಯಲಿದೆ ಎನ್ನಲಾಗಿದೆ.
ಮದುವೆಯ ನಂತರ ಹೊಸ ಮನೆ..
ಕೆಎಲ್ ರಾಹುಲ್ ಮತ್ತು ಅಥಿಯಾ ಮದುವೆಯ ನಂತರ ಹೊಸ ಮನೆಗೆ ಹೋಗಲಿದ್ದಾರೆ. ವರದಿಗಳ ಪ್ರಕಾರ, ದಂಪತಿಗಳು ಮುಂಬೈನ ಪಾಲಿ ಹಿಲ್‌ನಲ್ಲಿರುವ ಸಂಧು ಪ್ಯಾಲೇಸ್‌ನಲ್ಲಿರುವ ಐಷಾರಾಮಿ ಮನೆಗೆ ತೆರಳಲಿದ್ದಾರೆ.
ದಕ್ಷಿಣ ಭಾರತೀಯ ಶೈಲಿಯಲ್ಲಿ ಮದುವೆ..
ಈ ಜೋಡಿ ದಕ್ಷಿಣ ಭಾರತದ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಸುನೀಲ್ ಶೆಟ್ಟಿ ಮಂಗಳೂರಿನ ಮೂಲ್ಕಿಯ ಕುಟುಂಬದಲ್ಲಿ ಜನಿಸಿದ್ದು, ಅವರಿಗೆ ದಕ್ಷಿಣ ಭಾರತದ ನಂಟು ತುಂಬಾ ಹಿಂದಿನಿಂದ ಬಂದತ್ತದಾಗಿದೆ. ಅಲ್ಲದೆ, ರಾಹುಲ್ ಕೂಡ ಮಂಗಳೂರು ಕುಟುಂಬಕ್ಕೆ ಸೇರಿದವರಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆಯಂತೆ.
ಮೂರು ವರ್ಷಗಳಿಂದ ಡೇಟಿಂಗ್..
ಕೆಎಲ್ ರಾಹುಲ್ ಮತ್ತು ಅಥಿಯಾ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು. ಈ ಇಬ್ಬರೂ ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ರಹಸ್ಯವಾಗಿಟ್ಟಿದ್ದರು.
2015 ರಲ್ಲಿ ತನ್ನ ವೃತ್ತಿಜೀವನ ಪ್ರಾರಂಭಿಸಿದ ಅಥಿಯಾ
ಅಥಿಯಾ 2015 ರಲ್ಲಿ ಸೂರಜ್ ಪಾಂಚೋಲಿ ಜೊತೆಗಿನ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಲ್ಲದೇ ‘ಮುಬಾರಕನ್’ ಮತ್ತು ‘ಮೋತಿಚೂರ್ ಚಕ್ನಾಚೂರ್’ ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಏಷ್ಯಾಕಪ್‌ನಲ್ಲಿ ರಾಹುಲ್ ಬಿಜಿ..
ಟೀಂ ಇಂಡಿಯಾ ಉಪನಾಯಕ, ಗಾಯದ ನಂತರ ಭಾರತ ತಂಡಕ್ಕೆ ಮರಳಿದ್ದು, ಜಿಂಬಾಬ್ವೆ ಪ್ರವಾಸದಲ್ಲಿ ತಂಡದ ಸಾರಥ್ಯವಹಿಸಿದ್ದರು. ಆದರೆ ಟೀಂ ಇಂಡಿಯಾ ಸರಣಿ ಗೆದ್ದಿತ್ತಾದರೂ ನಾಯಕ ರಾಹುಲ್ ಬ್ಯಾಟಿಂಗ್ನಲ್ಲಿ ವಿಶೇಷವಾಗಿ ಏನನ್ನು ಮಾಡಲಾಗಲಿಲ್ಲ. ಹೀಗಾಗಿ ಶನಿವಾರದಿಂದ ಆರಂಭವಾಗಲಿರುವ ಏಷ್ಯಾಕಪ್‌ನಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ರಾಹುಲ್ ಸಜ್ಜಾಗಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ.
Published On - 2:22 pm, Wed, 24 August 22