AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಕೆಎಲ್ ರಾಹುಲ್- ಆಥಿಯಾ ಶೆಟ್ಟಿ ಮದುವೆ ಸದ್ಯಕ್ಕಿಲ್ಲ ಎಂದ ಕುಟುಂಬ; ಫ್ಯಾನ್ಸ್ ಮನದಲ್ಲಿ ಮೂಡಿದೆ ಹಲವು ಪ್ರಶ್ನೆ

Athiya Shetty | Ahan Shetty: ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಸಹೋದರಿ ಆಥಿಯಾರ ಕಲ್ಯಾಣದ ಬಗ್ಗೆ ಗುಟ್ಟುಬಿಟ್ಟುಕೊಟ್ಟಿದ್ದಾರೆ. ಮದುವೆಯ ವರದಿಗಳನ್ನು ತಳ್ಳಿಹಾಕಿರುವ ಅವರು, ನಿಶ್ಚಿತಾರ್ಥವೂ ಸದ್ಯಕ್ಕಿಲ್ಲ ಎಂದಿದ್ದಾರೆ. ಆದರೆ ಫ್ಯಾನ್ಸ್ ಮನದಲ್ಲಿ ಹಲವು ಅನುಮಾನಗಳು ಮೂಡಿವೆ? ಏನದು?

KL Rahul: ಕೆಎಲ್ ರಾಹುಲ್- ಆಥಿಯಾ ಶೆಟ್ಟಿ ಮದುವೆ ಸದ್ಯಕ್ಕಿಲ್ಲ ಎಂದ ಕುಟುಂಬ; ಫ್ಯಾನ್ಸ್ ಮನದಲ್ಲಿ ಮೂಡಿದೆ ಹಲವು ಪ್ರಶ್ನೆ
ಆಥಿಯಾ-ರಾಹುಲ್
TV9 Web
| Updated By: shivaprasad.hs|

Updated on: May 04, 2022 | 4:08 PM

Share

ಸದ್ಯ ತಾರಾ ಲೋಕದಲ್ಲಿ ಕೆ.ಎಲ್ ರಾಹುಲ್ (KL Rahul) ಹಾಗೂ ಆಥಿಯಾ ಶೆಟ್ಟಿ (Athiya Shetty) ವಿವಾಹದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆಲವು ವರದಿಗಳು ಈ ಜೋಡಿ ಡಿಸೆಂಬರ್​ನಲ್ಲಿ ವಿವಾಹವಾಗಲಿದ್ದಾರೆ ಎಂದು ಹೇಳಿದ್ದವು. ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ರಾಹುಲ್ ಹಾಗೂ ಬಾಲಿವುಡ್ ಬೆಡಗಿ ಆಥಿಯಾ ಅವರ ಮದುವೆಯ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದರು. ಆದರೆ ಇದೀಗ ಮದುವೆಯ ಬಗ್ಗೆ ಮೌನಮುರಿದಿದ್ದಾರೆ ಅಹಾನ್ ಶೆಟ್ಟಿ. ಅಹಾನ್ ಆಥಿಯಾರ ಸಹೋದರ. ಬಾಲಿವುಡ್​ಗೆ ಇತ್ತೀಚೆಗಷ್ಟೇ ‘ತಡಪ್’ ಚಿತ್ರದ ಮೂಲಕ ಪದಾರ್ಪಣೆ ಮಾಡಿರುವ ಸುನೀಲ್ ಶೆಟ್ಟಿ ಪುತ್ರ, ಸಹೋದರಿ ಆಥಿಯಾರ ಕಲ್ಯಾಣದ ಬಗ್ಗೆ ಗುಟ್ಟುಬಿಟ್ಟುಕೊಟ್ಟಿದ್ದಾರೆ. ‘ದೈನಿಕ್ ಭಾಸ್ಕರ್’ ಜತೆ ಮಾತನಾಡಿರುವ ಅಹಾನ್, ಮದುವೆಯ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಇದಲ್ಲದೇ ನಿಶ್ಚಿತಾರ್ಥವನ್ನೂ ಸದ್ಯದಲ್ಲಿ ಆಯೋಜಿಸಲಾಗಿಲ್ಲ ಎನ್ನುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಕಳೆದ ಕೆಲವು ಸಮಯದ ಹಿಂದೆ ಅಹಾನ್ ಶೆಟ್ಟಿ ನಟನೆಯ ‘ತಡಪ್’ ಚಿತ್ರದ ಪ್ರೀಮಿಯರ್​ ಶೋನಲ್ಲಿ ಕೆಎಲ್ ಹಾಗೂ ಆಥಿಯಾ ಜತೆಯಾಗಿ ಕಾಣಿಸಿಕೊಂಡಿದ್ದರು. ಅವರೀರ್ವರ ಸಂಬಂಧದ ಬಗ್ಗೆ ಅಂದು ಅಧಿಕೃತವಾಗಿತ್ತು. ಮೊದಲ ಬಾರಿಗೆ ಜತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಜೋಡಿ, ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆಹಾಕಿದ್ದರು. ನಂತರದಲ್ಲಿ ರಾಹುಲ್, ಆಥಿಯಾಗೆ ಪ್ರೇಮಿಗಳ ದಿನದಂದು ಶುಭ ಕೋರಿ, ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಹೀಗಾಗಿಯೇ ಈರ್ವರ ವಿವಾಹದ ಬಗ್ಗೆ ಗಾಸಿಪ್​ಗಳು ಹುಟ್ಟಿಕೊಂಡಿದ್ದವು. ಇದೀಗ ಈ ವಿಚಾರಗಳಿಗೆ ಅಹಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಈದ್ ಸಂದರ್ಭದಲ್ಲಿ ಅಹಾನ್ ಅವರ ಅಜ್ಜನ ಮನೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಭಾಗಿಯಾಗಿದ್ದ ನಟ ಪ್ರತಿಕ್ರಿಯಿಸಿ, ‘‘ಪ್ರತೀ ವರ್ಷ ಅಜ್ಜನ ಮನೆಯಲ್ಲಿ ಈದ್ ಆಚರಿಸುತ್ತೇವೆ. ಎಲ್ಲರೂ ಒಟ್ಟಾಗಿ ಕುಳಿತು ಔತಣ ಸವಿಯುತ್ತೇವೆ. ಆದರೆ ವಿವಾಹದ ಕುರಿತ ವರದಿಗಳು ಸುಳ್ಳು. ಮದುವೆಯೇ ನಿಶ್ಚಯವಾಗದಿರುವಾಗ ಇನ್ನು ದಿನಾಂಕದ ಬಗ್ಗೆ ಏನು ಹೇಳಲಿ?’’ ಎಂದಿದ್ದಾರೆ.

ಇದನ್ನೂ ಓದಿ
Image
ರಾಕಿ ಭಾಯ್​ಗೆ ಈದ್​ ಗಿಫ್ಟ್​; ಹಬ್ಬದ ದಿನವೇ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 9.57 ಕೋಟಿ ರೂ. ಬಾಚಿದ ‘ಕೆಜಿಎಫ್​ 2’
Image
Head Bush Movie: ‘ಹೆಡ್​ಬುಷ್’ ಸಿನಿಮಾಗೆ ವಿರೋಧ; ತಂದೆಯ ಸಿನಿಮಾ ಮಾಡದಂತೆ ಫಿಲ್ಮ್​ ಚೇಂಬರ್​ಗೆ ದೂರು ನೀಡಿದ ಅಜಿತ್ ಜಯರಾಜ್
Image
ಚಳಿಗಾಲದಲ್ಲಿ ಆಥಿಯಾ-ರಾಹುಲ್ ಮದುವೆ? ಈ ಬಗ್ಗೆ ಆಪ್ತರು ಹೇಳೋದೇನು?
Image
Athiya Shetty: ಗೆಳತಿ ಆಥಿಯಾ ಜತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್; ತಾರಾ ಜೋಡಿಯ ಫೋಟೋಗಳು ಇಲ್ಲಿವೆ

ನಿಶ್ಚಿತಾರ್ಥವೂ ನಿಗದಿಯಾಗಿಲ್ಲ ಎಂದಿರುವ ಅಹಾನ್, ಆ ಕಾರ್ಯಕ್ರಮವೂ ಮುಂದಿನ ಕೆಲವು ತಿಂಗಳುಗಳಲ್ಲಿ ಏರ್ಪಾಡಾಗಿಲ್ಲ ಎಂದಿದ್ದಾರೆ. ಅಹಾನ್ ಮಾತಿನಿಂದ ಅಭಿಮಾನಿಗಳಿಗೆ ತುಸು ನಿರಾಸೆಯಾಗಿದೆ. ಆದರೆ ಈ ಬಗ್ಗೆ ಮತ್ತೊಂದು ಅನುಮಾನವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಬರೆದುಕೊಳ್ಳುತ್ತಿದ್ದಾರೆ.

ಫ್ಯಾನ್ಸ್ ಮನದಲ್ಲಿ ಮೂಡಿರೋ ಪ್ರಶ್ನೆಯಾದ್ರೂ ಏನು? ಹೊಸ ಟ್ರೆಂಡ್ ಫಾಲೋ ಮಾಡ್ತಾರಾ ರಾಹುಲ್- ಆಥಿಯಾ?

ಬಾಲಿವುಡ್​ನಲ್ಲಿ ಸದ್ಯ ನಡೆಯುತ್ತಿರುವ ವಿವಾಹ ಸಮಾರಂಭಗಳನ್ನು ಆದಷ್ಟು ಗುಪ್ತವಾಗಿ ನಡೆಸಲಾಗುತ್ತಿದೆ. ಇದಕ್ಕೆ ಕತ್ರಿನಾ ಕೈಫ್- ವಿಕ್ಕಿ ಕೌಶಲ್, ರಣಬೀರ್ ಕಪೂರ್- ಆಲಿಯಾ ಭಟ್ ವಿವಾಹಗಳೇ ಉದಾಹರಣೆ. ಅಭಿಮಾನಿಗಳನ್ನು ನಿಯಂತ್ರಿಸಲು ಮತ್ತು ಗೌಜು ಗದ್ದಲಗಳಿಗೆ ಎಡೆಮಾಡಿಕೊಡದಿರಲು ಆಪ್ತ ವರ್ಗದವರನ್ನು ಮಾತ್ರ ಆಹ್ವಾನಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಚ್ಚರಿಯ ವಿಚಾರವೆಂದರೆ ಈ ಮೇಲಿನ ಎರಡೂ ಸಂದರ್ಭಗಳಲ್ಲಿ ಮದುವೆಯ ದಿನದವರೆಗೂ ಯಾರೂ ವಿಚಾರವನ್ನು ಬಾಯ್ಬಿಟ್ಟಿರಲಿಲ್ಲ. ಮದುವೆ ಸದ್ಯಕ್ಕಿಲ್ಲ ಎನ್ನುತ್ತಲೇ ಸಿದ್ಧತೆ ನಡೆಸಿ, ತಾರಾ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಎಷ್ಟೇ ಗಾಸಿಪ್​ಗಳು ಹರಿದಾಡಿದರೂ ಮದುವೆಯ ನಂತರವೇ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ವಿಷಯ ತಿಳಿಸಲಾಗಿತ್ತು.

ರಾಹುಲ್ ಹಾಗೂ ಆಥಿಯಾ ಕೂಡ ಇದೇ ಮಾರ್ಗ ಆರಿಸಿಕೊಳ್ಳಲಿದ್ದಾರಾ ಎನ್ನುವುದು ಸದ್ಯ ಫ್ಯಾನ್ಸ್ ಮನದಲ್ಲಿ ಮೂಡಿರುವ ಪ್ರಶ್ನೆ. ಹೀಗಾಗಿ ಕುಟುಂಬದವರು ಎಷ್ಟೇ ಸ್ಪಷ್ಟನೆ ನೀಡಿದರೂ ಯಾರೂ ಅದನ್ನು ಒಪ್ಪಿಕೊಳ್ಳೋಕೆ ಸಿದ್ಧರಿಲ್ಲ. ಹೀಗಾಗಿ ಬಾಲಿವುಡ್- ಕ್ರಿಕೆಟ್ ಕ್ಷೇತ್ರದ ಮತ್ತೊಂದು ತಾರಾ ಜೋಡಿಯ ಮುಂದಿನ ನಡೆಯ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ