Head Bush Movie: ‘ಹೆಡ್ಬುಷ್’ ಸಿನಿಮಾಗೆ ವಿರೋಧ; ತಂದೆಯ ಸಿನಿಮಾ ಮಾಡದಂತೆ ಫಿಲ್ಮ್ ಚೇಂಬರ್ಗೆ ದೂರು ನೀಡಿದ ಅಜಿತ್ ಜಯರಾಜ್
Dhananjay | Head Bush Movie | Ajith Jayaraj: ಧನಂಜಯ ನಟನೆಯ ‘ಹೆಡ್ಬುಷ್’ ಸಿನಿಮಾ ಬೆಂಗಳೂರು ಭೂಗತ ಲೋಕದ ಮೊದಲ ಡಾನ್ ಎನ್ನಲಾಗುವ ಜಯರಾಜ್ ಕತೆಯನ್ನು ಒಳಗೊಂಡಿದೆ. ಇದೀಗ ಚಿತ್ರಕ್ಕೆ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ತಂದೆಯ ಕತೆಯನ್ನಿಟ್ಟು ಸಿನಿಮಾ ಮಾಡಬಾರದು ಎಂದು ಅವರು ಕರ್ನಾಟಕ ಫಿಲ್ಮ್ ಛೇಂಬರ್ಗೆ ದೂರು ನೀಡಿದ್ದಾರೆ.
ಧನಂಜಯ (Dhananjay) ನಟನೆಯ ‘ಹೆಡ್ ಬುಷ್’ (Head Bush Movie) ಸಿನಿಮಾ ಕಳೆದ ಕೆಲವು ಸಮಯದ ಹಿಂದೆ ಅನೌನ್ಸ್ ಆಗಿತ್ತು. ಇತ್ತೀಚೆಗೆ ಚಿತ್ರತಂಡ ಶೂಟಿಂಗ್ ಪೂರ್ಣಗೊಳಿಸಿದೆ. ಇದೀಗ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಡಾನ್ ಜಯರಾಜ್ ಕತೆಯ ಸಿನಿಮಾಗೆ ಅವರ ಪುತ್ರ ಅಜಿತ್ ಜಯರಾಜ್ (Ajith Jayraj) ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ತಂದೆಯ ಕತೆಯನ್ನಿಟ್ಟು ಸಿನಿಮಾ ಮಾಡಬಾರದು ಎಂದು ಅವರು ಕರ್ನಾಟಕ ಫಿಲ್ಮ್ ಛೇಂಬರ್ಗೆ ದೂರು ನೀಡಿದ್ದಾರೆ. ‘‘ಈಗ ನಮ್ಮ ತಂದೆ ಕಥೆಯನ್ನು ಯಾರೂ ಸಿನಿಮಾ ಮಾಡಬಾರದು’’ ಎಂದಿರುವ ಅಜಿತ್ ಜಯರಾಜ್, ‘‘ಹೀಗೆಯೇ ಆದರೆ ಕಾನೂನು ಹೋರಾಟಕ್ಕೂ ಸಜ್ಜಾಗುತ್ತೇನೆ. ಕಾನೂನು ಪ್ರಕಾರವೇ ಪ್ರಕರಣವನ್ನು ಎದುರಿಸುತ್ತೇನೆ’’ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಜಿತ್ ಜಯರಾಜ್, ‘‘ಹೆಡ್ ಬುಷ್ ಸಂಪೂರ್ಣವಾಗಿ ನಮ್ಮ ತಂದೆಯವರ ಕತೆಯನ್ನು ಆಧರಿಸಿದೆ ಎಂದು ತಿಳಿದುಬಂದಿದೆ. ಚಿತ್ರೀಕರಣಕ್ಕೂ ಮುನ್ನ ತಂಡದೊಂದಿಗೆ ಮಾತನಾಡಿದ್ದೆ. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಇಂದು ಚೇಂಬರ್ಗೆ ಲೆಟರ್ ನೀಡಿದ್ದೇನೆ. ವೈಯಕ್ತಿಕ ಜೀವನಕ್ಕೆ ನೋವಾಗುವಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ನನ್ನ ವೈಯಕ್ತಿಕ ಹಕ್ಕುಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಹೀಗಾಗಿ ಕಾನೂನು ಮೂಲಕ ಎಲ್ಲವನ್ನೂ ಎದುರಿಸುವ ನಿರ್ಧಾರ ಮಾಡಿದ್ದೇನೆ’’ ಎಂದಿದ್ದಾರೆ.
ಅಜಿತ್ ಜಯರಾಜ್ ಮಾತುಗಳು ಇಲ್ಲಿವೆ:
ಇತ್ತೀಚೆಗೆ ಚಿತ್ರೀಕರಣ ಮುಗಿಸಿರುವ ‘ಹೆಡ್ ಬುಷ್’ ಚಿತ್ರತಂಡ:
ಇತ್ತ ‘ಹೆಡ್ ಬುಷ’ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಳಿಸಿದೆ. ಶೂನ್ಯ ಆಕ್ಷನ್ ಕಟ್ ಹೇಳುತ್ತಿರುವ ‘ಹೆಡ್ ಬುಷ್‘ ಚಿತ್ರಕ್ಕೆ ಅಗ್ನಿ ಶ್ರೀಧರ್ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇದರಲ್ಲಿ ಧನಂಜಯ ಅವರೊಂದಿಗೆ ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಹಿರಿಯ ನಟ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಹಲವು ತಾರೆಯರು ಬಣ್ಣ ಹಚ್ಚುತ್ತಿದ್ದಾರೆ.
ಹಲವು ಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿದ್ದು, ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. 1970ರ ಕಾಲದ ಬೆಂಗಳೂರಿನಲ್ಲಿ ನಡೆದ ಭೂಗತ ಲೋಕದ ಕತೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಜಯರಾಜ್ ಪಾತ್ರದಲ್ಲಿ ಧನಂಜಯ ನಟಿಸುತ್ತಿದ್ದಾರೆ.
ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ, ಸುನೊಜ್ ವೇಲಾಯಧನ್ ಅವರ ಛಾಯಾಗ್ರಹಣವಿದೆ. ಬಾದಲ್ ನಂಜುಂಡಸ್ವಾಮಿ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Wed, 4 May 22