
ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ (Team India), ಈ ಪ್ರವಾಸದೊಂದಿಗೆ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 4ನೇ ಆವೃತ್ತಿಯ (WTC 2025-27) ಅಭಿಯಾನವನ್ನು ಶುರು ಮಾಡಿತ್ತು. ಭಾರತ ಮಾತ್ರವಲ್ಲ, ಇಂಗ್ಲೆಂಡ್ಗೂ ಕೂಡ ಈ ಸರಣಿ ಡಬ್ಲ್ಯೂಟಿಸಿ 4ನೇ ಆವೃತ್ತಿಯ ಆರಂಭವಾಗಿತ್ತು. ಹೀಗಾಗಿ ಉಭಯ ತಂಡಗಳು ಈ ಸರಣಿ ಗೆಲುವಿನೊಂದಿಗೆ ಈ ಆವೃತ್ತಿಯನ್ನು ಶುರು ಮಾಡಬೇಕೆಂದು ಬಯಸಿದ್ದವು. ಆದರೆ ಇಡೀ ಸರಣಿಯಲ್ಲಿ ಯಾವ ತಂಡಕ್ಕೂ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸರಣಿ 2-2 ರಿಂದ ಅಂತ್ಯವಾಯಿತು.
ಇನ್ನು 2025-27ರ ಟೆಸ್ಟ್ ಚಾಂಪಿಯನ್‌ಶಿಪ್ 4ನೇ ಆವೃತ್ತಿಯಲ್ಲಿ ಟೀಂ ಇಂಡಿಯಾ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ಪಂದ್ಯಗಳನ್ನು ಗೆದ್ದಿದ್ದು, ಎರಡರಲ್ಲಿ ಸೋತಿದೆ. ಉಳಿದಂತೆ ಒಂದು ಪಂದ್ಯ ಡ್ರಾ ಆಗಿದೆ. ಈ ಮೂಲಕ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈಗ ಈ ಆವೃತ್ತಿಯಲ್ಲಿ ಟೀಂ ಇಂಡಿಯಾ ಇನ್ನೂ ಐದು ತಂಡಗಳ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಮೂರನೇ ಬಾರಿಗೆ ಫೈನಲ್ ಆಡಬೇಕೆಂದರೆ ಟೀಂ ಇಂಡಿಯಾ ಈ ಐದು ತಂಡಗಳ ವಿರುದ್ಧ ಗೆಲ್ಲುವುದು ಬಹಳ ಮುಖ್ಯವಾಗಿದೆ.
ಭಾರತ ತಂಡ ಈಗ ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ 2025 ರ ಏಷ್ಯಾಕಪ್‌ನಲ್ಲಿ ಭಾಗವಹಿಸಲ್ಲಿದ್ದು, ಇದರ ಅಂತಿಮ ಪಂದ್ಯ ಸೆಪ್ಟೆಂಬರ್ 29 ರಂದು ನಡೆಯಲಿದೆ. ಈ ಪಂದ್ಯಾವಳಿಯ ಅಂತ್ಯದ ನಂತರ, ಭಾರತೀಯ ಕ್ರಿಕೆಟ್ ತಂಡವು ಅಕ್ಟೋಬರ್ 2025 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದೆ. ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 2 ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯವು ಅಕ್ಟೋಬರ್ 10 ರಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಟೆಸ್ಟ್ ಸರಣಿಯ ನಂತರ, ಶುಭ್ಮನ್ ಗಿಲ್ ಪಡೆ ನವೆಂಬರ್ ತಿಂಗಳಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ನವೆಂಬರ್ 14 ರಿಂದ ಮತ್ತು ಎರಡನೇ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ನಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದ ನಂತರ, ಭಾರತ ತಂಡವು ಆಗಸ್ಟ್ 2026 ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ, ಈ ಎರಡೂ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದರ ನಡುವೆ, ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಮತ್ತು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಬೇಕಾಗಿದೆ.
WTC 2025 Final: ಐಪಿಎಲ್ ವಿಜೇತರಿಗಿಂತ ಹೆಚ್ಚು; ಡಬ್ಲ್ಯೂಟಿಸಿ ಗೆದ್ದ ತಂಡಕ್ಕೆ ಎಷ್ಟು ಕೋಟಿ ಸಿಗಲಿದೆ?
ಆ ಬಳಿಕ ಭಾರತ ತಂಡವು ನವೆಂಬರ್ 2026 ರಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಇದರಲ್ಲಿ ತಂಡವು ಎರಡು ಟೆಸ್ಟ್ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಟೀಂ ಇಂಡಿಯಾ 2025-27 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯ ಕೊನೆಯ ಟೆಸ್ಟ್ ಸರಣಿಯನ್ನು 2027 ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಮಾಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Wed, 6 August 25