WTC 2025 Final: ಐಪಿಎಲ್ ವಿಜೇತರಿಗಿಂತ ಹೆಚ್ಚು; ಡಬ್ಲ್ಯೂಟಿಸಿ ಗೆದ್ದ ತಂಡಕ್ಕೆ ಎಷ್ಟು ಕೋಟಿ ಸಿಗಲಿದೆ?
WTC 2025 Final Prize Money: 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜೂನ್ 11 ರಿಂದ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ವಿಜೇತ ತಂಡಕ್ಕೆ $3.6 ಮಿಲಿಯನ್ ಬಹುಮಾನ, ಸೋತ ತಂಡಕ್ಕೆ $2.16 ಮಿಲಿಯನ್ ಬಹುಮಾನ ಸಿಗಲಿದೆ. ಈ ಪಂದ್ಯವು ಆಸ್ಟ್ರೇಲಿಯಾಕ್ಕೆ ಸತತ ಎರಡನೇ ಗೆಲುವು ಮತ್ತು ದಕ್ಷಿಣ ಆಫ್ರಿಕಾಕ್ಕೆ ಮೊದಲ ಗೆಲುವನ್ನು ತಂದುಕೊಡಲಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ರ ಫೈನಲ್‌ಗೆ (WTC Final 2025) ಕ್ಷಣಗಣನೆ ಆರಂಭವಾಗಿದೆ. ಈ ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ (AUS vs SA) ನಡುವೆ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೂನ್ 11 ರಿಂದ ಅಂತಿಮ ಪಂದ್ಯ ಪ್ರಾರಂಭವಾಗುತ್ತಿದೆ. ಈ ಫೈನಲ್ ಪಂದ್ಯದಲ್ಲಿ, ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಿದ್ದರೆ, ಇತ್ತ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ಟೆಂಬಾ ಬವುಮಾ ಅವರ ಕೈಯಲ್ಲಿದೆ. ಈ ಇಬ್ಬರೂ ನಾಯಕರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆಲ್ಲುವತ್ತ ಕಣ್ಣು ಹಾಕಿದ್ದಾರೆ. ಆದರೆ ಈ ಫೈನಲ್ ಪಂದ್ಯಕ್ಕೂ ಮುನ್ನ ವಿಜೇತ ತಂಡಕ್ಕೆ ಎಷ್ಟು ಬಹುಮಾನ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಫೈನಲ್ ವಿಜೇತರಿಗೆ ಭರ್ಜರಿ ಬಹುಮಾನ
ಇದು ಐಸಿಸಿ ಡಬ್ಲ್ಯೂಟಿಸಿ ಫೈನಲ್‌ನ ಮೂರನೇ ಆವೃತ್ತಿಯಾಗಿದ್ದು, ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಒಟ್ಟು 3.6 ಮಿಲಿಯನ್ ಡಾಲರ್ ಬಹುಮಾನ ದೊರೆಯಲಿದೆ. ಅಂದರೆ, ವಿಜೇತ ತಂಡಕ್ಕೆ ಸುಮಾರು 30.88 ಕೋಟಿ ರೂ. ಬಹುಮಾನ ಸಿಗಲಿದೆ. ಈ ಬಹುಮಾನದ ಹಣವು ಕಳೆದ ಎರಡು ಆವೃತ್ತಿಗಳಾದ 2021 ಮತ್ತು 2023 ಗಿಂತ ಹೆಚ್ಚಾಗಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಒಟ್ಟು ಬಹುಮಾನದ ಹಣ 1.6 ಮಿಲಿಯನ್ ಡಾಲರ್ ಆಗಿತ್ತು. ಇನ್ನು ಫೈನಲ್‌ನಲ್ಲಿ ಸೋತ ತಂಡಕ್ಕೆ 2.16 ಮಿಲಿಯನ್ ಡಾಲರ್ ಅಂದರೆ ಸುಮಾರು 18.50 ಕೋಟಿ ರೂ. ಸಿಗಲಿದೆ. ಟೆಸ್ಟ್ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಐಸಿಸಿ ಬಹುಮಾನದ ಗಾತ್ರವನ್ನು ಹೆಚ್ಚಿಸಿದೆ. ಅಂದರೆ ಈ ಬಹುಮಾನದ ಮೊತ್ತ ಐಪಿಎಲ್ ಬಹುಮಾನದ ಗಾತ್ರಕ್ಕೂ ಹೆಚ್ಚಿದೆ. ಐಪಿಎಲ್ 2025ರ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ 20 ಕೋಟಿ ರೂ. ಬಹುಮಾನ ನೀಡಲಾಗಿದೆ.
2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಯಾವ ತಂಡ ಗೆದ್ದರೂ ಅದು ಇತಿಹಾಸ ಸೃಷ್ಟಿಸುತ್ತದೆ. ಏಕೆಂದರೆ ಆಸ್ಟ್ರೇಲಿಯಾ ಈ ಪ್ರಶಸ್ತಿಯನ್ನು ಗೆದ್ದರೆ, ಸತತ ಎರಡನೇ ಬಾರಿಗೆ ಈ ಟ್ರೋಫಿಯನ್ನು ಗೆದ್ದ ದಾಖಲೆ ಬರೆಯಲಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆಲ್ಲುವ ಇರಾದೆಯಲ್ಲಿದೆ.
WTC Final 2025: ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ತಂಡವನ್ನು ಹೆಸರಿಸಿದ ಡಿವಿಲಿಯರ್ಸ್- ಫಿಂಚ್
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಫೈನಲ್
ದಕ್ಷಿಣ ಆಫ್ರಿಕಾ WTC ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಲಾರ್ಡ್ಸ್‌ನಲ್ಲಿ ನಡೆಯಲಿರುವ ಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾ ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸರಣಿಯನ್ನು ಗೆಲ್ಲುವ ಮೂಲಕ ಮತ್ತು ಭಾರತದ ವಿರುದ್ಧದ ತವರು ಸರಣಿಯನ್ನು ಡ್ರಾ ಮಾಡಿಕೊಳ್ಳುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ. ಇತ್ತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ 3-1 ಅಂತರದ ಜಯದೊಂದಿಗೆ ಆಸ್ಟ್ರೇಲಿಯಾ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Sun, 8 June 25
