ವಿರಾಟ್ ಕೊಹ್ಲಿಗೆ ಇಂಗ್ಲೆಂಡ್​ನಲ್ಲಿ ಫಿಟ್​ನೆಸ್ ಟೆಸ್ಟ್..!

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಉಭಯ ತಂಡಗಳು ಮೂರು ಪಂದ್ಯಗಳನ್ನಾಡಲಿದೆ. ಈ ಸರಣಿಯ ಬಳಿಕ ಉಭಯ ತಂಡಗಳು 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಗೂ ಮುನ್ನ ಎಲ್ಲಾ ಆಟಗಾರರು ಫಿಟ್​ನೆಸ್ ಟೆಸ್ಟ್​ಗೆ ಒಳಗಾಗಲಿದ್ದಾರೆ.

ವಿರಾಟ್ ಕೊಹ್ಲಿಗೆ ಇಂಗ್ಲೆಂಡ್​ನಲ್ಲಿ ಫಿಟ್​ನೆಸ್ ಟೆಸ್ಟ್..!
Virat Kohli

Updated on: Sep 03, 2025 | 1:31 PM

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಇದೀಗ ಫಿಟ್​ನೆಸ್ ಟೆಸ್ಟ್​ ಪೂರೈಸಿದ್ದಾರೆ. ಅದು ಕೂಡ ಲಂಡನ್​ನಲ್ಲಿ ಎಂಬುದು ವಿಶೇಷ. ಮುಂಬರುವ ಸರಣಿಗೂ ಮುನ್ನ ಎಲ್ಲಾ ಆಟಗಾರರು ಫಿಟ್​ನೆಸ್​ ಟೆಸ್ಟ್​ನಲ್ಲಿ ಪಾಲ್ಗೊಳ್ಳುವಂತೆ ಬಿಸಿಸಿಐ ನಿರ್ದೇಶಿಸಿತ್ತು.

ಅದರಂತೆ ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ಫಿಟ್​ನೆಸ್ ಟೆಸ್ಟ್​ನಲ್ಲಿ ಪಾಲ್ಗೊಂಡಿದ್ದರು. ಆದರೆ ವಿರಾಟ್ ಕೊಹ್ಲಿ ಮಾತ್ರ ಲಂಡನ್​ನಲ್ಲಿ ಫಿಟ್​ನೆಸ್​ ಟೆಸ್ಟ್ ನೀಡಿದ್ದಾರೆ.

ದೈನಿಕ್ ಜಾಗರಣ್ ವರದಿ ಪ್ರಕಾರ, ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಫಿಟ್‌ನೆಸ್ ಟೆಸ್ಟ್​ನಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಈ ಟೆಸ್ಟ್​ನಲ್ಲಿ ಪಾಸಾಗಿದ್ದಾರೆ.  ವಿರಾಟ್ ಕೊಹ್ಲಿ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿದ್ದಾರೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ಫಿಟ್‌ನೆಸ್ ಪರೀಕ್ಷೆ ನಡೆಸಲು ಅವರು ಭಾರತೀಯ ಕ್ರಿಕೆಟ್ ಮಂಡಳಿಯಿಂದ ಪೂರ್ವಾನುಮತಿ ಪಡೆದಿದ್ದರು.

ಅದರಂತೆ ಮಂಡಳಿಯ ಮೇಲ್ವಿಚಾರಣೆಯಲ್ಲಿ ಇದೀಗ ಲಂಡನ್​ನಲ್ಲಿ ಫಿಟ್​ನೆಸ್ ಟೆಸ್ಟ್​ ಅನ್ನು ಪೂರ್ಣಗೊಳಿಸಿದ್ದು, ಈ ವರದಿಯಲ್ಲಿ ಬಿಸಿಸಿಐಗೆ ಸಲ್ಲಿಸಲಾಗಿದೆ. ಅಲ್ಲದೆ ಎಲ್ಲಾ ದೈಹಿಕ ಪರೀಕ್ಷೆಯಲ್ಲೂ ಪಾಸ್ ಆಗಿರುವ ಕಾರಣ ಕೊಹ್ಲಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫಿಟ್​ನೆಸ್ ಟೆಸ್ಟ್​ನಲ್ಲಿ ಪಾಸ್ ಆದವರು:

ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ಫಿಟ್​ನೆಸ್ ಟೆಸ್ಟ್​ನಲ್ಲಿ ಪಾಲ್ಗೊಂಡಿದ್ದ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್, ಶುಭ್​ಮನ್ ಗಿಲ್, ಜಿತೇಶ್ ಶರ್ಮಾ, ಪ್ರಸಿದ್ಧ್ ಕೃಷ್ಣ, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ಹರ್ಷಿತ್ ರಾಣಾ, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಅಕ್ಷರ್ ಪಟೇಲ್, ರಜತ್ ಪಾಟಿದಾರ್, ರವಿ ಬಿಷ್ಣೋಯ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಮುಖೇಶ್ ಕುಮಾರ್, ಸರ್ಫರಾಝ್ ಖಾನ್, ತಿಲಕ್ ವರ್ಮಾ, ಅಭಿಮನ್ಯು ಈಶ್ವರನ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಧ್ರುವ್ ಜುರೆಲ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್ ಮತ್ತು ಯಶಸ್ವಿ ಜೈಸ್ವಾಲ್ ಫಿಟ್​ನೆಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!

ಇನ್ನು ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರಿಷಭ್ ಪಂತ್, ಆಕಾಶ್ ದೀಪ್ ಮತ್ತು ನಿತೀಶ್ ರೆಡ್ಡಿ ಈ ತಿಂಗಳು ಫಿಟ್‌ನೆಸ್ ಟೆಸ್ಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.