Asia Cup 2022: ಏಷ್ಯಾಕಪ್ 2022 ರ ಟೂರ್ನಿಯಿಂದ ಟೀಮ್ ಇಂಡಿಯಾ (Team India) ಬಹುತೇಕ ಹೊರಬಿದ್ದಿದೆ. ಇನ್ನೇನಿದ್ದರೂ ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ರೂಪಿಸಬೇಕಿದೆ. ಅದರಲ್ಲೂ ಏಷ್ಯಾಕಪ್ ಸೋಲಿಗೆ ಟೀಮ್ ಇಂಡಿಯಾ ಕಳಪೆ ತಂಡವನ್ನು ಆಯ್ಕೆ ಮಾಡಿದ್ದು ಕಾರಣ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನೀಡಿರುವ ಹೇಳಿಕೆಯೊಂದು ಮಹತ್ವ ಪಡೆದುಕೊಂಡಿದೆ. ಶ್ರೀಲಂಕಾ ವಿರುದ್ದದ ಸೋಲಿನ ಬಳಿಕ ಮಾತನಾಡಿದ ರೋಹಿತ್ ಶರ್ಮಾ ಟೀಮ್ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ಗಾಗಿ ಸಿದ್ಧತೆಗಳನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಏಷ್ಯಾಕಪ್ನಲ್ಲಿ ಆಡಿದ ಬಳಗವೇ T20 ವಿಶ್ವಕಪ್ನಲ್ಲೂ ಕಾಣಿಸಿಕೊಳ್ಳಲಿದೆ ಎಂದಿದ್ದಾರೆ.
ಅಕ್ಟೋಬರ್ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ನಾವು ಈಗಾಗಲೇ ತಂಡವನ್ನು ಸಿದ್ಧಪಡಿಸುವಲ್ಲಿ ತೊಡಗಿಸಿಕೊಂಡಿದ್ದೇವೆ. ಅದಕ್ಕಾಗಿಯೇ ಕೆಲ ಆಟಗಾರರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಇನ್ನೂ ಕೆಲವು ಆಟಗಾರರಿಗೆ ಅವಕಾಶ ನೀಡಲಾಗುವುದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಇನ್ನೂ ಕೆಲವು ಆಟಗಾರರಿಗೆ ಅವಕಾಶ ನೀಡುತ್ತೇವೆ. ಆ ಬಳಿಕ ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಸದ್ಯ ಇರುವ ತಂಡವು ಟಿ20 ವಿಶ್ವಕಪ್‌ಗೆ ಶೇ 95ರಷ್ಟು ಫಿಕ್ಸ್ ಆಗಿದೆ ಎಂದಿದ್ದಾರೆ. ಅಂದರೆ ಏಷ್ಯಾಕಪ್ನಲ್ಲಿ ಆಡಿದ ಬಹುತೇಕ ಆಟಗಾರರು ಟಿ20 ವಿಶ್ವಕಪ್ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬದಲಾವಣೆಯಾದರೆ ಕೆಲ ಆಟಗಾರರ ಬದಲಾವಣೆಯಾಗಬಹುದು ಎಂದು ತಿಳಿಸಿದ್ದಾರೆ.
ಇದೀಗ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿದ್ದು, ಹೀಗಾಗಿ ಕೆಲ ಆಟಗಾರರನ್ನು ತಂಡದಿಂದ ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬರುತ್ತಿದೆ. ಇದಾಗ್ಯೂ ಮುಂದಿನ ಟಿ20 ವಿಶ್ವಕಪ್‌ಗೆ ನಮ್ಮ ತಂಡ ಶೇ.95 ರಷ್ಟು ಫಿಕ್ಸ್ ಆಗಿದೆ ಎನ್ನುವ ಮೂಲಕ ರೋಹಿತ್ ಶರ್ಮಾ ಅಚ್ಚರಿ ಮೂಡಿಸಿದ್ದಾರೆ.
ರೋಹಿತ್ ಶರ್ಮಾ ಅವರ ಈ ಹೇಳಿಕೆಯಂತೆ ಏಷ್ಯಾಕಪ್ನಲ್ಲಿ ಆಡಿದ ಬಹುತೇಕ ಆಟಗಾರರು ಟಿ20 ವಿಶ್ವಕಪ್ನಲ್ಲೂ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದಾಗ್ಯೂ ಒಂದೆರೆಡು ಆಟಗಾರರನ್ನು ಮಾತ್ರ ತಂಡದಿಂದ ಕೈ ಬಿಡಲಾಗುತ್ತೆ ಎಂಬ ಸುಳಿವನ್ನು ಕೂಡ ರೋಹಿತ್ ಶರ್ಮಾ ನೀಡಿದ್ದಾರೆ.
ಒಟ್ಟಿನಲ್ಲಿ 15 ಸದಸ್ಯರ ಕಳಪೆ ಬಳಗವನ್ನು ಆಯ್ಕೆ ಮಾಡುವ ಮೂಲಕ ಈ ಬಾರಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದೆ. ಇದರ ಬೆನ್ನಲ್ಲೇ ಇದೇ ಬಳಗವನ್ನೇ ಟಿ20 ವಿಶ್ವಕಪ್ಗೂ ಮುಂದುವರೆಸಲಾಗುತ್ತದೆ ಎಂದು ಟೀಮ್ ಇಂಡಿಯಾ ನಾಯಕ ನೀಡಿರುವ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ.
ಏಷ್ಯಾಕಪ್ಗೆ ಆಯ್ಕೆಯಾದ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ರವೀಂದ್ರ ಜಡೇಜಾ
ಮೀಸಲು ಆಟಗಾರರು: ದೀಪಕ್ ಚಹರ್, ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅಯ್ಯರ್.