Sandeep Lamichhane: ಸ್ಟಾರ್ ಕ್ರಿಕೆಟಿಗನ ವಿರುದ್ಧ ಅತ್ಯಾಚಾರದ ಆರೋಪ: ಕೇಸ್ ದಾಖಲು
Sandeep Lamichhane: ನೇಪಾಳ ಪರ 30 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿರುವ ಸಂದೀಪ್ ಲಾಮಿಚಾನೆ ಕ್ರಮವಾಗಿ 69 ಮತ್ತು 85 ವಿಕೆಟ್ಗಳನ್ನು ಪಡೆದಿದ್ದಾರೆ.
ನೇಪಾಳ ತಂಡದ ನಾಯಕ ಸಂದೀಪ್ ಲಾಮಿಚಾನೆ (Sandeep Lamichhane) ವಿರುದ್ದ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಟಿ20 ಕ್ರಿಕೆಟ್ನಲ್ಲಿ ಸ್ಟಾರ್ ಆಟಗಾರನಾಗಿ ಮಿಂಚುತ್ತಿರುವ ಲಾಮಿಚಾನೆ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. 17 ವರ್ಷ ವಯಸ್ಸಿನ ಸಂತ್ರಸ್ತೆ ಕ್ರಿಕೆಟಿಗನ ವಿರುದ್ಧ ಕಠ್ಮಂಡು ಪೊಲೀಸರಿಗೆ ದೂರು ನೀಡಿದ್ದರಿಂದ ಈ ವಿಚಾರ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಸಂದೀಪ್ ಲಾಮಿಚಾನೆ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಆಡುತ್ತಿದ್ದು, ಹೀಗಾಗಿ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
onlinekhabar.com ವರದಿಯ ಪ್ರಕಾರ, ಅಪ್ರಾಪ್ತೆಯನ್ನು ಆರೋಗ್ಯ ತಪಾಸಣೆಗಾಗಿ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಕಠ್ಮಂಡು ವ್ಯಾಲಿ ಪೊಲೀಸ್ ಕಚೇರಿ ಮುಖ್ಯಸ್ಥ ರವೀಂದ್ರ ಪ್ರಸಾದ್ ಧನುಕ್ ತಿಳಿಸಿದ್ದಾರೆ. ಹದಿಹರೆಯದ ಹುಡುಗಿ ತಾನು ಲಮಿಚಾನೆ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾಳೆ.
ಅಷ್ಟೇ ಅಲ್ಲದೆ ಸೆಪ್ಟೆಂಬರ್ 22 ರಂದು ನೇಪಾಳ ಕ್ರಿಕೆಟ್ ತಂಡದ ಕೀನ್ಯಾಗೆ ತೆರಳುವ ಮುನ್ನ ಸಂದೀಪ್ ಲಮಿಚಾನೆ ನನ್ನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ರಾತ್ರಿ 8 ಗಂಟೆಗೆ ಗೇಟ್‌ಗಳನ್ನು ಮುಚ್ಚಿದ್ದರಿಂದ ಹಾಸ್ಟೆಲ್ಗೆ ಹಿಂತಿರುಗಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ನನ್ನನ್ನು ಕಠ್ಮಂಡುವಿನ ಹೋಟೆಲ್ನಲ್ಲಿ ಉಳಿಸಿಕೊಂಡಿದ್ದರು. ಅಲ್ಲದೆ ಈ ವೇಳೆ ತನ್ನ ಮೇಲೆ ಅತ್ಯಾಚಾರ ಎಸೆಗಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ದೂರು ದಾಖಲಿಸಿರುವ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
ಆದರೆ ಮತ್ತೊಂದೆಡೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ತೊಡಗಿಸಿಕೊಂಡಿರುವ ಸಂದೀಪ್ ಲಾಮಿಚಾನೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಅರ್ಧದಲ್ಲೇ ಟೂರ್ನಿಯನ್ನು ತೊರೆದು ನೇಪಾಳಕ್ಕೆ ಹಿಂತಿರುಗುವ ಸಾಧ್ಯತೆಯಿದೆ. ನೇಪಾಳ ಪರ 30 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿರುವ 22 ರ ಹರೆಯದ ಸಂದೀಪ್ ಲಾಮಿಚಾನೆ ಕ್ರಮವಾಗಿ 69 ಮತ್ತು 85 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 9 ಪಂದ್ಯಗಳಿಂದ 13 ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದರು.
Published On - 2:05 pm, Wed, 7 September 22