IPL 2022: ಐಪಿಎಲ್​ನಲ್ಲಿ ಕನ್ನಡಿಗ ಮನೀಷ್ ಪಾಂಡೆ ನಾಯಕನಾಗುವ ಸಾಧ್ಯತೆ

Manish Pandey: ಐಪಿಎಲ್​ನಲ್ಲಿ ಉಪನಾಯಕನಾಗಿ ಹಾಗೂ ನಾಯಕನ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಮನೀಷ್ ಪಾಂಡೆಗಿದೆ.

IPL 2022: ಐಪಿಎಲ್​ನಲ್ಲಿ ಕನ್ನಡಿಗ ಮನೀಷ್ ಪಾಂಡೆ ನಾಯಕನಾಗುವ ಸಾಧ್ಯತೆ
Manish Pandey

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 (IPL 2022) ಸಿದ್ದತೆಗಳು ಶುರುವಾದ ಬೆನ್ನಲ್ಲೇ, ಯಾವ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಚರ್ಚೆಗಳು ಆರಂಭವಾಗಿದೆ. ಅತ್ತ ಈ ಬಾರಿ 2 ಹೊಸ ತಂಡಗಳು ಸೇರ್ಪಡೆಯಿಂದಾಗಿ ಆಟಗಾರರ ಬೇಡಿಕೆ ಕೂಡ ಹೆಚ್ಚಾಗಲಿದೆ. ಹೀಗಾಗಿ ಬಹುತೇಕ ತಂಡಗಳ ಸ್ಟಾರ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ತಮ್ಮ ತಂಡಗಳಿಂದ ಹೊರಬರುವುದು ಬಹುತೇಕ ಖಚಿತವಾಗಿದೆ. ಇತ್ತ ಬಹುತೇಕ ತಂಡಗಳು ಕೂಡ ನಾಯಕನ ಹುಡುಕಾಟದಲ್ಲಿದೆ. ಏಕೆಂದರೆ ಪಂಜಾಬ್ ತಂಡದಿಂದ ರಾಹುಲ್ ಹೊರಬಂದರೆ ಪಂಜಾಬ್ ಕಿಂಗ್ಸ್​ ಹೊಸ ನಾಯಕನ ಆಯ್ಕೆ ಮಾಡಬೇಕಿದೆ. ಇನ್ನೊಂದೆಡೆ ಹೊಸ ಎರಡು ತಂಡಗಳೂ ಕೂಡ ನಾಯಕತ್ವ ಗುಣಗಳಿರುವ ಆಟಗಾರರನ್ನು ಮೊದಲು ಆರಿಸಿಕೊಳ್ಳಲಿದೆ. ಇನ್ನು ಆರ್​ಸಿಬಿ ಕೂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ಈ ಬಾರಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಇರುವ ಆಟಗಾರರ ಖರೀದಿಗೆ ಪೈಪೋಟಿ ಕಂಡು ಬರಲಿದೆ.

ಇಲ್ಲಿ ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಅವರಂತ ಸ್ಟಾರ್ ಆಟಗಾರರು ಹೊಸ ಫ್ರಾಂಚೈಸಿಗಳ ಮೊದಲ ಆಯ್ಕೆಯಾದರೆ, ಉಳಿದ ತಂಡಗಳ ಆಯ್ಕೆ ಯಾರಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಮನೀಷ್ ಪಾಂಡೆ. ಹೌದು, ಮನೀಷ್ ಪಾಂಡೆ ಐಪಿಎಲ್​ನ ಬೆಸ್ಟ್ ಪ್ಲೇಯರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಇದಾಗ್ಯೂ ಕಳೆದ ಸೀಸನ್​ನಲ್ಲಿ ಪಾಂಡೆ ಫಾರ್ಮ್​ ಕಳೆದುಕೊಂಡಿದ್ದರು. ಹೀಗಾಗಿ ಅವರನ್ನು ಸನ್​ರೈಸರ್ಸ್​ ಹೈದರಾಬಾದ್ (SRH ) ತಂಡ ಕೇವಲ 8 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಿದ್ದರು. ಇದಾಗ್ಯೂ ಪಾಂಡೆ 292 ರನ್ ಬಾರಿಸಿದ್ದರು ಎಂಬುದು ವಿಶೇಷ. ಆದರೆ ಮುಂದಿನ ಸೀಸನ್​ನಲ್ಲಿ ಪಾಂಡೆಯನ್ನು ಎಸ್​ಆರ್​ಹೆಚ್​ ಫ್ರಾಂಚೈಸಿ ಉಳಿಸಿಕೊಳ್ಳುವುದು ಅನುಮಾನ.

ಹೀಗಾಗಿ ಮನೀಷ್ ಪಾಂಡೆ ಹೆಸರು ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು. ಇತ್ತ ಐಪಿಎಲ್​ನಲ್ಲಿ ಉಪನಾಯಕನಾಗಿ ಹಾಗೂ ನಾಯಕನ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಮನೀಷ್ ಪಾಂಡೆಗಿದೆ. ಅಷ್ಟೇ ಅಲ್ಲದೆ ಕರ್ನಾಟಕ ತಂಡದ ನಾಯಕನಾಗಿ ಹಲವು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅದರಲ್ಲೂ ಈ ಬಾರಿ ಮನೀಷ್ ಪಾಂಡೆ ಸಾರಥ್ಯದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು ಎಂಬುದು ವಿಶೇಷ. ಅಷ್ಟೇ ಅಲ್ಲದೆ ಈ ಬಾರಿ ಕರ್ನಾಟಕ ಪರ ಅತೀ ಹೆಚ್ಚು ರನ್ ಕಲೆಹಾಕಿದ್ದು ನಾಯಕ ಮನೀಷ್ ಪಾಂಡೆ. 9 ಪಂದ್ಯಗಳನ್ನಾಡಿದ ಪಾಂಡೆ 272 ರನ್ ಕಲೆಹಾಕಿದ್ದರು. ಈ ಇನಿಂಗ್ಸ್​ನಲ್ಲಿ 3 ಅರ್ಧಶತಕ ಮೂಡಿಬಂದಿತ್ತು. ಅಂದರೆ ನಾಯಕನಾಗಿ ಪಾಂಡೆ ಜವಾಬ್ದಾರಿಯುತ ಆಟವನ್ನಾಡಿದ್ದರು.

ಇಲ್ಲಿ ಹೊಸ ಫ್ರಾಂಚೈಸಿಗಳು ಭಾರತೀಯ ಆಟಗಾರನನ್ನು ನಾಯಕನಾಗಿ ನೇಮಿಸಿಕೊಳ್ಳಲು ಬಯಸಿದರೆ, ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಅತ್ತ ಕೆಕೆಆರ್​, ಪಂಜಾಬ್ ಕಿಂಗ್ಸ್​, ರಾಜಸ್ಥಾನ್ ರಾಯಲ್ಸ್ ಹಾಗೂ ಆರ್​ಸಿಬಿ ಫ್ರಾಂಚೈಸಿಗಳು ಕೂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ಉಳಿದ ತಂಡಗಳು ಮನೀಷ್ ಪಾಂಡೆ ಅವರ ಖರೀದಿಗಾಗಿ ಹೆಚ್ಚಿನ ಆಸಕ್ತಿ ಹೊಂದಿದೆ . ಅದರಂತೆ ಮುಂದಿನ ಸೀಸನ್​ನಲ್ಲಿ ಮನೀಷ್ ಪಾಂಡೆ ಯಾವುದಾದರೂ ತಂಡದ ನಾಯಕನಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

 

ಇದನ್ನೂ ಓದಿ: ಹಲಾಲ್ ಮಾಂಸ ಅಥವಾ ಹಲಾಲ್ ಕಟ್ ಎಂದರೇನು?

ಇದನ್ನೂ ಓದಿ: IPL 2022: ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ​ ಜೆರ್ಸಿ ಫೋಟೋ ವೈರಲ್

Click on your DTH Provider to Add TV9 Kannada