The Hundred: 10 ಸಿಕ್ಸರ್, 3 ವಿಕೆಟ್​, ಅಜೇಯ 92 ರನ್: ಐಪಿಎಲ್​ಗೂ ಮುನ್ನ ಸ್ಟಾರ್ ಆಟಗಾರನ ಅಬ್ಬರ

| Updated By: ಝಾಹಿರ್ ಯೂಸುಫ್

Updated on: Aug 18, 2021 | 7:44 PM

Liam Livingstone: ಲೀಗ್​ ಹಂತದ ಕೊನೆಯ ಪಂದ್ಯವಾಗಿದ್ದರಿಂದ ಗ್ರೂಪ್​ನಲ್ಲಿ ಅಗ್ರಸ್ಥಾನದಲ್ಲಿರಲು ಬರ್ಮಿಂಗ್​ಹ್ಯಾಮ್​ಗೆ ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಟೈ ಮಾಡಬೇಕಿತ್ತು.

The Hundred: 10 ಸಿಕ್ಸರ್, 3 ವಿಕೆಟ್​, ಅಜೇಯ 92 ರನ್: ಐಪಿಎಲ್​ಗೂ ಮುನ್ನ ಸ್ಟಾರ್ ಆಟಗಾರನ ಅಬ್ಬರ
Liam Livingstone
Follow us on

ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021)​ ಆರಂಭಕ್ಕೆ ದಿನಗಣನೆ ಶುರುವಾಗಿದ್ದರೆ, ಇನ್ನೊಂದೆಡೆ ದಿ ಹಂಡ್ರೆಡ್ ಲೀಗ್ (The Hundred) ಮೂಲಕ ಸ್ಟಾರ್ ಆಟಗಾರರು ಚುಟುಕು ಕದನಕ್ಕೆ ಸಜ್ಜಾಗುತ್ತಿದ್ದಾರೆ. ಇಂಗ್ಲೆಂಡ್ (England) ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ (Liam Livingstone) ಹಂಡ್ರೆಡ್ ಲೀಗ್​ನಲ್ಲಿ ಅಬ್ಬರಿಸುವ ಮೂಲಕ ಐಪಿಎಲ್​ಗೆ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ (Rajastan Royals) ತಂಡದ ಆಟಗಾರನಾಗಿರುವ ಲಿವಿಂಗ್​ಸ್ಟೋನ್ ವೈಯುಕ್ತಿಕ ಕಾರಣಗಳಿಂದ ಪ್ರಥಮಾರ್ಧದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಕ್ರಿಕೆಟ್ ಅಂಗಳಕ್ಕೆ ಮರಳಿಯುವ ಇಂಗ್ಲೆಂಡ್ ಆಲ್​ರೌಂಡರ್ ದಿ ಹಂಡ್ರೆಡ್ ಲೀಗ್​ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ.

ಮಂಗಳವಾರ ಲೀಡ್ಸ್​ನಲ್ಲಿ ನಡೆದ ಟೂರ್ನಿಯ 31 ನೇ ಪಂದ್ಯದಲ್ಲಿ ಬರ್ಮಿಂಗ್​ಹ್ಯಾಮ್​ ಫೀನಿಕ್ಸ್ ಪರ ಕಣಕ್ಕಿಳಿದ ಲಿವಿಂಗ್​ಸ್ಟೋನ್ ಅತ್ಯುತ್ತಮ ಆಲ್​ರೌಂಡರ್ ಪ್ರದರ್ಶನ ನೀಡಿದರು. ಸೂಪರ್ ಚಾರ್ಜರ್ಸ್​ ವಿರುದ್ದದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬರ್ಮಿಂಗ್​ಹ್ಯಾಮ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಲೀಗ್​ ಹಂತದ ಕೊನೆಯ ಪಂದ್ಯವಾಗಿದ್ದರಿಂದ ಗ್ರೂಪ್​ನಲ್ಲಿ ಅಗ್ರಸ್ಥಾನದಲ್ಲಿರಲು ಬರ್ಮಿಂಗ್​ಹ್ಯಾಮ್​ಗೆ ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಟೈ ಮಾಡಬೇಕಿತ್ತು. ಹೀಗೆ ಮಾಡುವುದರಿಂದ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆಗಿಟ್ಟಿಸಲಿದೆ.

ಹೀಗಾಗಿ ಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಸೂಪರ್ ಚಾರ್ಜರ್ಸ್ ಆರಂಭಿಕರಾದ ಕ್ರಿಸ್ ಲಿನ್ ಮತ್ತು ಟಾಮ್ ಕೊಹ್ಲರ್ ಮೊದಲ 25 ಎಸೆತಗಳಲ್ಲಿ 65 ರನ್ ಬಾರಿಸಿ ಬರ್ಮಿಂಗ್​ಹ್ಯಾಮ್ ಆಸೆಗೆ ತಣ್ಣೀರೆಚಿದ್ದರು. ಅಲ್ಲದೆ ಈ ಜೋಡಿ ಮೊದಲ ವಿಕೆಟ್​ಗೆ 95 ರನ್ ಸೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಆದರೆ ಆ ಬಳಿಕ ದಾಳಿಗಿಳಿದ ನಾಯಕ ಲಿವಿಂಗ್​ಸ್ಟೋನ್, ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಮತ್ತು ಬೆನ್ನಿ ಹೊವೆಲ್ ಬ್ಯಾಕ್ ಟು ಬ್ಯಾಕ್ ವಿಕೆಟ್​ ಉರುಳಿಸಿ ಸೂಪರ್ ಚಾರ್ಜರ್ಸ್ ತಂಡವನ್ನು ಕಟ್ಟಿಹಾಕಿದರು. ಇನ್ನು ಡೆತ್ ಓವರ್‌ಗಳಲ್ಲಿ ಆಡಮ್ ಮಿಲ್ನೆ ಅವರ ಬಿಗಿಯಾದ ಬೌಲಿಂಗ್ ದಾಳಿಯಿಂದ ಸೂಪರ್‌ಚಾರ್ಜರ್ಸ್​ ಅಂತಿಮವಾಗಿ ಕೇವಲ 143 ರನ್ ಗಳಿಸಲಷ್ಟೇ ಶಕ್ತರಾದರು. ಇತ್ತ 20 ಎಸೆತಗಳಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್ 3 ವಿಕೆಟ್ ಉರುಳಿಸಿ ಮಿಂಚಿದರು.

144 ರನ್ ಗಳ ಗುರಿಯನ್ನು ಬೆನ್ನಟ್ಟಿದ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ಗೆ ಉತ್ತಮ ಆರಂಭ ದೊರಕಿರಲಿಲ್ಲ. ವಿಲ್ ಸ್ಮಿಡ್ ಖಾತೆ ತೆರೆಯದೆ ಪೆವಿಲಿಯನ್​ಗೆ ಮರಳಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ನಾಯಕ ಲಿವಿಂಗ್‌ಸ್ಟೋನ್, ಸೂಪರ್‌ಚಾರ್ಜರ್ಸ್ ಬೌಲರ್‌ಗಳ ಬೆಂಡೆತ್ತಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಿ ಹಂಡ್ರೆಡ್ ಲೀಗ್​ನಲ್ಲಿ ದಾಖಲೆ ಬರೆದರು.

ಅಷ್ಟೇ ಅಲ್ಲದೆ ಕೇವಲ 40 ಎಸೆತಗಳಲ್ಲಿ ಅಜೇಯ 92 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಸ್ಪೋಟಕ ಇನಿಂಗ್ಸ್​ನಲ್ಲಿ ಲಿವಿಂಗ್​ಸ್ಟೋನ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 10 ಸಿಕ್ಸರ್ ಮತ್ತು 3 ಬೌಂಡರಿಗಳು. ಇದರೊಂದಿಗೆ ಈ ಟೂರ್ನಿಯಲ್ಲಿ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿದ ದಾಖಲೆ ಕೂಡ ಲಿವಿಂಗ್​ಸ್ಟೋನ್ ಪಾಲಾಯಿತು. ಈ ಭರ್ಜರಿ ಗೆಲುವಿನೊಂದಿಗೆ ಇದೀಗ ದಿ ಹಂಡ್ರೆಡ್ ಲೀಗ್​ನಲ್ಲಿ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡವು ಫೈನಲ್ ಪ್ರವೇಶಿಸಿದೆ.

ಇದನ್ನೂ ಓದಿ: ICC Test Rankings: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌: ಟಾಪ್​ 10 ರಲ್ಲಿ ಮೂವರು ಭಾರತೀಯರು

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

(The Hundred: Liam Livingstone blew 10 sixes and 3 fours, also took 3 wickets)