ದಿ ಹಂಡ್ರೆಡ್ ಲೀಗ್ನತ್ತ ಮುಖ ಮಾಡಿದ LSG
The Hundred: ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಇದೀಗ ಇಂಗ್ಲೆಂಡ್ ಕ್ರಿಕೆಟ್ ಲೀಗ್ನತ್ತ ಮುಖ ಮಾಡಿದೆ. ಈಗಾಗಲೇ ಐಪಿಎಲ್ ಮತ್ತು ಸೌತ್ ಆಫ್ರಿಕಾ ಟಿ20 ಲೀಗ್ಗಳಲ್ಲಿ ತಂಡಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಇದೀಗ ದಿ ಹಂಡ್ರೆಡ್ ಲೀಗ್ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ದಿ ಹಂಡ್ರೆಡ್ ಲೀಗ್ನಲ್ಲಿ ತಂಡ ಖರೀದಿಸಲು ಮುಂದಾಗಿದ್ದಾರೆ. ಈ ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯ ಶೇ.49 ರಷ್ಟು ಪಾಲನ್ನು ಖರೀದಿಸಲು ಗೋಯೆಂಕಾ ಅವರ ಆರ್‌ಪಿಎಸ್‌ಜಿ ಗ್ರೂಪ್ ಅತ್ಯಧಿಕ ಬಿಡ್ ಸಲ್ಲಿಸಿದೆ.
ಶುಕ್ರವಾರ ನಡೆದ ಬಿಡ್ಡಿಂಗ್ನಲ್ಲಿ ಆರ್‌ಪಿಎಸ್‌ಜಿ ಗ್ರೂಪ್ ಲಂಡನ್ ಸ್ಪಿರಿಟ್ ಫ್ರಾಂಚೈಸಿಯನ್ನು ಖರೀದಿಸುವ ಪ್ರಯತ್ನ ಮಾಡಿತ್ತು. ಆದರೆ ಈ ಪ್ರಯತ್ನದಲ್ಲಿ ವಿಫಲರಾದ ಬೆನ್ನಲ್ಲೇ ಇದೀಗ ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯ ಬಹುಪಾಲನ್ನು ಖರೀದಿಸಲು ಅತ್ಯಧಿಕ ಬಿಡ್ ಸಲ್ಲಿಸಿದೆ.
ಸದ್ಯ ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯು ಲಂಕಾಷೈರ್ ಕೌಂಟಿ ಕ್ಲಬ್ ಒಡೆತನದಲ್ಲಿದ್ದು, ಇದೀಗ ಸಂಜೀವ್ ಗೋಯೆಂಕಾ ಈ ಫ್ರಾಂಚೈಸಿಯ ಶೇ. 49 ರಷ್ಟು ಪಾಲನ್ನು ಖರೀದಿಸಲು ಮುಂದಾಗಿದ್ದಾರೆ. ಅತ್ತ ಸಾಲದ ಸುಳಿಯಲ್ಲಿರುವ ಲಂಕಾಷೈರ್ ಈ ಹಿಂದೆ ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯ ಶೇ.51 ರಷ್ಟು ಷೇರು ಮಾರಾಟ ಮಾಡುವುದಾಗಿ ತಿಳಿಸಿದ್ದರು.
ಇದೀಗ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರು ದಿ ಹಂಡ್ರೆಡ್ ಲೀಗ್ನತ್ತ ಮುಖ ಮಾಡಿರುವುದರಿಂದ ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯು ಸಂಜೀವ್ ಗೋಯೆಂಕಾ ಪಾಲಾಗುವ ಸಾಧ್ಯತೆ ಹೆಚ್ಚಿದೆ.
ಒಂದು ವೇಳೆ ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯು ಸಂಜೀವ್ ಗೋಯೆಂಕಾ ಪಾಲಾದರೆ, ಇದು ಆರ್‌ಪಿಎಸ್‌ಜಿ ಗ್ರೂಪ್‌ನ ಮೂರನೇ ತಂಡವಾಗಲಿದೆ. ಇದಕ್ಕೂ ಮುನ್ನ ಆರ್‌ಪಿಎಸ್‌ಜಿ ಗ್ರೂಪ್ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡಗಳನ್ನು ಖರೀದಿಸಿದೆ.
ಇದೀಗ ಮೂರನೇ ತಂಡದ ಖರೀದಿಗಾಗಿ ಸಂಜೀವ್ ಗೋಯೆಂಕಾ ಮುಂದಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯ ಪಾಲು ಖರೀದಿಗಾಗಿ ಅತ್ಯಧಿಕ ಮೊತ್ತವನ್ನು ಬಿಡ್ ಮಾಡಿದೆ.
MI ಓವಲ್-ಮುಂಬೈ ಇಂಡಿಯನ್ಸ್:
ಮುಂಬೈ ಇಂಡಿಯನ್ಸ್ (ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್) ಈಗಾಗಲೇ ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟಿದೆ. ಈ ಬಾರಿ ನಡೆದ ತಂಡಗಳ ಬಿಡ್ಡಿಂಗ್ನಲ್ಲಿ ಓವಲ್ ಇನ್ವಿನ್ಸಿಬಲ್ ತಂಡದ ಶೇ. 49 ರಷ್ಟು ಪಾಲನ್ನು ಖರೀದಿಸುವಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.
ಈ ಮೂಲಕ ಇಂಗ್ಲೆಂಡ್ನ ಕ್ರಿಕೆಟ್ ಟೂರ್ನಿಗೆ ಕಾಲಿಟ್ಟಿರುವ ಮುಂಬೈ ಇಂಡಿಯನ್ಸ್, ಮುಂಬರುವ ದಿ ಹಂಡ್ರೆಡ್ ಲೀಗ್ನಲ್ಲಿ ಓವಲ್ ಇನ್ವಿನ್ಸಿಬಲ್ ತಂಡವನ್ನು MI ಓವಲ್ ಹೆಸರಿನಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಆ್ಯಂಡ್ರೆ ರಸೆಲ್ ಆರ್ಭಟಕ್ಕೆ ಮ್ಯಾಕ್ಸ್ವೆಲ್ ವಿಶ್ವ ದಾಖಲೆ ಉಡೀಸ್
ಇದರ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೂಡ ದಿ ಹಂಡ್ರೆಡ್ ಲೀಗ್ನತ್ತ ಮುಖ ಮಾಡಿದ್ದು, ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡದ ಪಾಲನ್ನು ಖರೀದಿಸುವ ಪ್ರಯತ್ನದಲ್ಲಿದೆ. ಹೀಗಾಗಿ ಮುಂಬರುವ ದಿ ಹಂಡ್ರೆಡ್ ಲೀಗ್ನಲ್ಲಿ MI ಓವಲ್, ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಹೆಸರಿನ ತಂಡಗಳು ಕಾಣಿಸಿಕೊಂಡರೆ ಅಚ್ಚರಿಪಡಬೇಕಿಲ್ಲ.