ಹೀಗೂ ಉಂಟೇ… ಒಂದೇ ಎಸೆತದಲ್ಲಿ 3 ರನೌಟ್ ಮಿಸ್
TNPL 2025: ತಮಿಳುನಾಡು ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧುರೈ ಪ್ಯಾಂಥರ್ಸ್ ತಂಡವು 20 ಓವರ್ಗಳಲ್ಲಿ 150 ರನ್ ಕಲೆಹಾಕಿತು.ಈ ಗುರಿಯನ್ನು 12.3 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ದಿಂಡಿಗಲ್ ಡ್ರಾಗನ್ಸ್ 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.

ಒಂದೇ ಎಸೆತದಲ್ಲಿ ಮೂರು ರನೌಟ್ ಚಾನ್ಸ್ ಮಿಸ್… ಇಂತಹದೊಂದು ಅಪರೂಪದ ಆಟಕ್ಕೆ ಸಾಕ್ಷಿಯಾಗಿದ್ದು ತಮಿಳುನಾಡು ಪ್ರೀಮಿಯರ್ ಲೀಗ್ (TNPL 2025). ಈ ಲೀಗ್ನ 11ನೇ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ಮತ್ತು ಮಧುರೈ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಸೇಲಂನ ಎಸ್ಸಿಎಫ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಮಧುರೈ ಪ್ಯಾಂಥರ್ಸ್ 19 ಓವರ್ಗಳಲ್ಲಿ ಕೇವಲ 131 ರನ್ ಕಲೆಹಾಕಿತ್ತು. ಆದರೆ ಕೊನೆಯ ಓವರ್ನಲ್ಲಿ ದಿಂಡಿಗಲ್ ಡ್ರಾಗನ್ಸ್ ಫೀಲ್ಡರ್ಗಳು ಮಾಡಿದ ಎಡವಟ್ಟಿನಿಂದಾಗಿ 18 ರನ್ಗಳು ಮೂಡಿಬಂದವು. ಗಣೇಶ್ ಪೆರಿಯಸ್ವಾಮಿ ಎಸೆದ ಈ ಓವರ್ನ 5ನೇ ಎಸೆತದಲ್ಲಿ ಗುಜರ್ಪ್ನೀತ್ ಸಿಂಗ್ ಒಂದು ರನ್ ಕಲೆಹಾಕಿದರು.
ಆದರೆ ಈ ಒಂದು ರನ್ ಕಲೆಹಾಕುವ ಮುನ್ನ ಡೈರೆಕ್ಟ್ ಹಿಟ್ ಮೂಲಕ ಗುಜರ್ಪ್ನೀತ್ ಸಿಂಗ್ ಅವರನ್ನು ರನೌಟ್ ಮಾಡುವ ಅವಕಾಶ ಅಶ್ವಿನ್ ಅವರ ಮುಂದಿತ್ತು. ಆದರೆ ಅಶ್ವಿನ್ ಎಸೆದ ಚೆಂಡು ವಿಕೆಟ್ಗೆ ತಾಗಲಿಲ್ಲ. ಅತ್ತ ಬೌಲರ್ ಕೂಡ ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಲಿಲ್ಲ.
ಚೆಂಡು ವಿಕೆಟ್ ದಾಟಿ ಹೋಗುತ್ತಿದ್ದಂತೆ ಗುಜರ್ಪ್ನೀತ್ ಸಿಂಗ್ ಹಾಗೂ ರಾಜಲಿಂಗಂ 2ನೇ ರನ್ ಓಡಿದರು. ಈ ವೇಳೆ ಮತ್ತೊಮ್ಮೆ ರನೌಟ್ ಮಾಡುವ ಅವಕಾಶ ಒದಗಿತ್ತು. ಆದರೆ ವಿಕೆಟ್ ಕೀಪರ್ ಬರುವ ಮುನ್ನವೇ ಚೆಂಡು ವಿಕೆಟ್ ದಾಟಿಯಾಗಿತ್ತು.
ಚೆಂಡು ಬೌಂಡರಿಯತ್ತ ಸಾಗುತ್ತಿದ್ದಂತೆ ಗುಜರ್ಪ್ನೀತ್ ಸಿಂಗ್ ಹಾಗೂ ರಾಜಲಿಂಗಂ 3ನೇ ರನ್ ಓಡಲಾರಂಭಿಸಿದರು. ಬೌಂಡರಿ ಲೈನ್ನಿಂದ ಚೆಂಡು ನೇರವಾಗಿ ಬೌಲರ್ನತ್ತ ತೂರಿ ಬಂತು. ಈ ವೇಳೆಯೂ ರನೌಟ್ ಮಾಡುವ ಅವಕಾಶವಿತ್ತು. ಆದರೆ ಬೌಲರ್ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು.
ಈ ಮೂಲಕ ಗುಜರ್ಪ್ನೀತ್ ಸಿಂಗ್ ಹಾಗೂ ರಾಜಲಿಂಗಂ ಒಂದೇ ಎಸೆತದಲ್ಲಿ ಮೂರು ರನ್ ಓಡುವ ಮೂಲಕ 20 ಓವರ್ಗಳಲ್ಲಿ ಮಧುರೈ ಪ್ಯಾಂಥರ್ಸ್ ತಂಡದ ಮೊತ್ತವನ್ನು 150 ಕ್ಕೆ ತಂದು ನಿಲ್ಲಿಸಿದರು.
ರನೌಟ್ ಚಾನ್ಸ್ ಮಿಸ್ ವಿಡಿಯೋ:
Run out ❌ Dodge ball ✅@TNCACricket #TNPL #NammaOoruNammaGethu #TNPL2025 pic.twitter.com/eKA9jM2VgL
— TNPL (@TNPremierLeague) June 14, 2025
ಗೆದ್ದು ಬೀಗಿದ ಅಶ್ವಿನ್ ಪಡೆ:
ಒಂದೇ ಎಸೆತದಲ್ಲಿ ಮೂರು ಬಾರಿ ರನೌಟ್ ಮಿಸ್ ಮಾಡಿ ನಗೆಪಾಟಲಿಗೀಡಾಗಿದ್ದ ದಿಂಡಿಗಲ್ ಡ್ರಾಗನ್ಸ್ ತಂಡವು ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಮಧುರೈ ಪ್ಯಾಂಥರ್ಸ್ ನೀಡಿದ 150 ರನ್ಗಳ ಗುರಿಯನ್ನು 12.3 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ
ದಿಂಡಿಗಲ್ ಡ್ರಾಗನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ರವಿಚಂದ್ರನ್ ಅಶ್ವಿನ್ 29 ಎಸೆತಗಳಲ್ಲಿ 49 ರನ್ ಬಾರಿಸಿದರೆ, ಶಿವಂ ಸಿಂಗ್ 41 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 86 ರನ್ ಚಚ್ಚಿ ಮಿಂಚಿದರು.
