ಟೀಮ್ ಇಂಡಿಯಾಗೆ ಹೊಸ ಕೋಚ್ ನೇಮಕ?
India tour of England, 2025: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ಈ ಸರಣಿಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಭಾರತಕ್ಕೆ ಮರಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸುವಲ್ಲಿ ನಿರತವಾಗಿದೆ. ಹೊಸ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ ತಂಡ ಲಂಡನ್ನಲ್ಲಿ ಅಭ್ಯಾಸ ನಡೆಸುತ್ತಿದೆ. ಆದರೆ ಈ ಅಭ್ಯಾಸದ ವೇಳೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕಾಣಿಸಿಕೊಂಡಿಲ್ಲ.
ಗಂಭೀರ್ ಅವರ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆ ಗೌತಮ್ ಗಂಭೀರ್ ಭಾರತಕ್ಕೆ ಮರಳಿದ್ದಾರೆ. ಭಾರತ ತಂಡದ ಮುಖ್ಯ ಕೋಚ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಅಭ್ಯಾಸ ಮುಂದುವರೆಸಿದ್ದು, ಈ ವಾರ ಗೌತಮ್ ಗಂಭೀರ್ ಇಂಗ್ಲೆಂಡ್ಗೆ ಮರಳದಿದ್ದರೆ ಹಂಗಾಮಿ ಕೋಚ್ನ ನೇಮಕ ಮಾಡಲಿದ್ದಾರೆ.
ಹೊಸ ಕೋಚ್ ಯಾರು?
ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಭಾರತಕ್ಕೆ ಹಿಂತಿರುಗುತ್ತಿದ್ದಂತೆ, ಬಿಸಿಸಿಐ ವಿವಿಎಸ್ ಲಕ್ಷ್ಮಣ್ ಅವರನ್ನು ಇಂಗ್ಲೆಂಡ್ಗೆ ಕಳುಹಿಸಿದ್ದಾರೆ. ಅಲ್ಲದೆ ಜೂನ್ 20 ರೊಳಗೆ ಗಂಭೀರ್ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಪರಿಸ್ಥಿತಿ ಇರದಿದ್ದರೆ, ಭಾರತ ತಂಡವು ಲಕ್ಷ್ಮನ್ ಮುಂದಾಳತ್ವದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ತಂತ್ರಗಳನ್ನು ರೂಪಿಸಲಿದೆ.
ಈಗಾಗಲೇ ವಿವಿಎಸ್ ಲಕ್ಷ್ಮಣ್ ಅವರು ಇಂಗ್ಲೆಂಡ್ನಲ್ಲಿರುವ ಟೀಮ್ ಇಂಡಿಯಾವನ್ನು ಕೂಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ಮತ್ತು ಭಾರತ ಎ ತಂಡಗಳ ನಡುವಣ ಅಭ್ಯಾಸ ಪಂದ್ಯದ ವೇಳೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರೊಂದಿಗೆ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಂಡಿದ್ದಾರೆ.
ಹೀಗಾಗಿ ಗೌತಮ್ ಗಂಭೀರ್ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ಕೋಚಿಂಗ್ ಜವಾಬ್ದಾರಿ ಲಕ್ಷ್ಮಣ್ ಅವರ ಹೆಗಲೇರುವುದು ಖಚಿತ ಎನ್ನಬಹುದು. ಏಕೆಂದರೆ ಈ ಹಿಂದೆ ಟೀಮ್ ಇಂಡಿಯಾದ ಮಾಜಿ ಕೊಚ್ ರಾಹುಲ್ ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡದ ಕೋಚ್ ಆಗಿ ಲಕ್ಷ್ಮಣ್ ಕಾಣಿಸಿಕೊಂಡಿದ್ದರು.
ಹಾಗಾಗಿ ಜೂನ್ 20 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
- 2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್
- 3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
- 4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
- 5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್.
