ಕೊಯಮತ್ತೂರಿನ ಎಸ್ಎನ್ಆರ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ (TNPL 2022) ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಲೈಕಾ ತಂಡದ ನಾಯಕ ಶಾರೂಖ್ ಖಾನ್ (Sharukh Khan) ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ನೆಲ್ಲೈ ರಾಯಲ್ ಕಿಂಗ್ಸ್ ತಂಡವು ಸ್ಪೋಟಕ ಆರಂಭ ಪಡೆಯಿತು.
ತಂಡದ ಪರ ಬಾಬಾ ಅಪರಜಿತ್ ಮತ್ತು ಸಂಜಯ್ ಯಾದವ್ ಮತ್ತೊಮ್ಮೆ ಅಬ್ಬರಿಸಿದರು. ಪರಿಣಾಮ 16 ಓವರ್ ಮುಕ್ತಾಯದ ವೇಳೆ ನೆಲ್ಲೈ ತಂಡದ ಸ್ಕೋರ್ 160 ರ ಗಡಿದಾಟಿತು. ಈ ಹಂತದಲ್ಲಿ ಅಪರಜಿತ್ 44 ರನ್ಗಳಿಸಿ ಔಟಾದರು. ಮತ್ತೊಂದೆಡೆ ಸಂಜಯ್ ಯಾದವ್ ಅಬ್ಬರ ಮುಂದುವರೆಯಿತು. ಪರಿಣಾಮ 7 ಸಿಕ್ಸ್ನೊಂದಿಗೆ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಬಳಿಕ ಬಂದ ಅಜಿತೇಶ್ ಕೇವಲ 13 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ನೊಂದಿಗೆ ಸಿಡಿಲಬ್ಬರದ 38 ರನ್ ಬಾರಿಸಿದರು. ಪರಿಣಾಮ ನೆಲ್ಲೈ ರಾಯಲ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲೈಕಾ ಕೋವೈ ಕಿಂಗ್ಸ್ ತಂಡ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ 10 ಓವರ್ಗಳಲ್ಲಿ ಲೈಕಾ ತಂಡ ಕಲೆಹಾಕಿದ್ದು ಕೇವಲ 73 ರನ್ ಮಾತ್ರ. ಅದಾಗಲೇ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾಗಿದ್ದು ಸಾಯಿ ಸುದರ್ಶನ್. 33 ಎಸೆತಗಳನ್ನು ಎದುರಿಸಿದ ಸುದರ್ಶನ್ 2 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 53 ರನ್ ಬಾರಿಸಿದರು. ಅದರಂತೆ 15 ಓವರ್ಗಳಲ್ಲಿ ತಂಡವು 5 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಶಾರೂಖ್ ಕೊನೆಯ 4 ಓವರ್ಗಳಲ್ಲಿ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ಕಣಕ್ಕಿಳಿಯುತ್ತಿದ್ದಂತೆ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ ಶಾರೂಖ್ ರಾಯಲ್ ಕಿಂಗ್ಸ್ ತಂಡದ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಶಾರೂಖ್ ಖಾನ್ ಬ್ಯಾಟ್ನಿಂದ ಸಿಕ್ಸ್ -ಫೋರ್ಗಳ ಸುರಿಮಳೆಯಾಯಿತು. ಅದರಂತೆ ಕೊನೆಯ ಓವರ್ನಲ್ಲಿ ಕೋವೈ ಕಿಂಗ್ಸ್ ತಂಡಕ್ಕೆ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು.
ಶ್ರೀ ನಿರಂಜನ್ ಎಸೆತದ ಅಂತಿಮ ಓವರ್ನ ಮೊದಲ ಎಸೆತದಲ್ಲೇ ಶಾರೂಖ್ ಖಾನ್ ಭರ್ಜರಿ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮೂರನೇ ಎಸೆತದಲ್ಲಿ ಮತ್ತೊಂದು ಫೋರ್ ಸಿಡಿಸಿದರು. 4ನೇ ಎಸೆತದಲ್ಲಿ ಶಾರೂಖ್ ಖಾನ್ ಸಿಂಗಲ್ ಓಡಿದರು.
ಕೊನೆಯ 2 ಎಸೆತಗಳಲ್ಲಿ 1 ರನ್ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮನೀಷ್ ರವಿ ಬೌಲ್ಡ್ ಮಾಡಿ ನಿರಂಜನ್ ಪಂದ್ಯವನ್ನು ಅಂತಿಮ ಎಸೆತಕ್ಕೆ ಕೊಂಡೊಯ್ದರು. ಕೊನೆಯ ಎಸೆತದಲ್ಲಿ 1 ರನ್ ಬೇಕಿತ್ತು. ಕ್ರೀಸ್ಗೆ ಆಗಮಿಸಿದ ಅಜಿತ್ ರಾಮ್ 1 ರನ್ ಕಲೆಹಾಕವುದರೊಂದಿಗೆ ಲೈಕಾ ಕೋವೈ ಕಿಂಗ್ಸ್ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಕೇವಲ 24 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 58 ರನ್ ಬಾರಿಸಿದ ಶಾರೂಖ್ ಖಾನ್ ಗೆಲುವಿನ ರುವಾರಿ ಎನಿಸಿಕೊಂಡರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಗೆಲುವಿನೊಂದಿಗೆ ಲೈಕಾ ಕೋವೈ ಕಿಂಗ್ಸ್ ತಂಡವು ತಮಿಳುನಾಡು ಪ್ರೀಮಿಯರ್ ಲೀಗ್ನ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆಪಕ್ ಸೂಪರ್ ಗಿಲ್ಲೀಸ್ ಹಾಗೂ ಲೈಕಾ ಕೋವೈ ಕಿಂಗ್ಸ್ ಮುಖಾಮುಖಿಯಾಗಲಿದೆ.