ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿದ ನೇಪಾಳ

|

Updated on: Dec 17, 2024 | 11:07 AM

U19 Asia Cup 2024: ಪಾಕಿಸ್ತಾನ್ ಅಂಡರ್-19 ಮಹಿಳಾ ತಂಡವು ತನ್ನ ಮೊದಲ ಮ್ಯಾಚ್​ನಲ್ಲಿ ಭಾರತದ ವಿರುದ್ಧ ಪರಾಜಯಗೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ್ ತಂಡವನ್ನು ಕೇವಲ 67 ರನ್​ಗಳಿಗೆ ನಿಯಂತ್ರಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಅಲ್ಲದೆ 7.5 ಓವರ್​​ಗಳಲ್ಲಿ 68 ರನ್ ಬಾರಿಸಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದೀಗ ನೇಪಾಳ ಕೂಡ ಪಾಕ್ ವಿರುದ್ಧ ಗೆಲುವು ದಾಖಲಿಸಿದೆ.

ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿದ ನೇಪಾಳ
NEP vs PAK
Follow us on

ಮಲೇಷ್ಯಾದ ಕೌಲಲಂಪುರ್​ನಲ್ಲಿ ನಡೆಯುತ್ತುರುವ ಅಂಡರ್-19 ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಮಹಿಳಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತ್ತು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ಪರ ಆರಂಭಿಕ ಆಟಗಾರ್ತಿ ಕೋಮಲ್ ಖಾನ್ 38 ರನ್ ಬಾರಿಸಿದರು.

ಆದರೆ ಉಳಿದ ಬ್ಯಾಟರ್​​ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಮ್ ಅನೀಸ್ 29 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಪಾಕಿಸ್ತಾನ್ ಮಹಿಳಾ ತಂಡವು 20 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ.

105 ರನ್​​ಗಳ ಗುರಿ ಬೆನ್ನಲ್ಲೇ ನೇಪಾಳ ಮಹಿಳಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ಸನಾ ಪ್ರವೀಣ್ 10 ರನ್​ಗಳಿಸಿ ಔಟಾದರೆ, ಸಾಬಿತ್ರಿ ಧಮಿ 8 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ನಾಯಕಿ ಪುಜಾ ಮಹತೊ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ರಕ್ಷಣಾತ್ಮಕ ಆಟದೊಂದಿಗೆ ರನ್ ಕಲೆಹಾಕುತ್ತಾ ಸಾಗಿದ ಪೂಜಾ 47 ಎಸೆತಗಳಲ್ಲಿ 3 ಫೋರ್​​ಗಳೊಂದಿಗೆ ಅಜೇಯ 47 ರನ್ ಬಾರಿಸಿದರು.

ಈ ಮೂಲಕ 19 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ನೇಪಾಳ ತಂಡವು 105 ರನ್ ಬಾರಿಸಿ 6 ವಿಕೆಟ್​ಗಳ ಜಯ ಸಾಧಿಸಿದೆ. ಇದು ಪೂರ್ಣ ಸದಸ್ಯ ರಾಷ್ಟ್ರ ವಿರುದ್ಧದ ನೇಪಾಳ ತಂಡದ ಮೊದಲ ಗೆಲುವು ಎಂಬುದು ವಿಶೇಷ. ಈ ಮೂಲಕ ಅಂಡರ್-19 ನೇಪಾಳ ಮಹಿಳಾ ತಂಡವು ಐತಿಹಾಸಿಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಪಾಕ್ ಪಡೆಗೆ ಬ್ಯಾಕ್ ಟು ಬ್ಯಾಕ್ ಸೋಲು:

ಪಾಕಿಸ್ತಾನ್ ಅಂಡರ್-19 ಮಹಿಳಾ ತಂಡವು ತನ್ನ ಮೊದಲ ಮ್ಯಾಚ್​ನಲ್ಲಿ ಭಾರತದ ವಿರುದ್ಧ ಪರಾಜಯಗೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ್ ತಂಡವನ್ನು ಕೇವಲ 67 ರನ್​ಗಳಿಗೆ ನಿಯಂತ್ರಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಅಲ್ಲದೆ 7.5 ಓವರ್​​ಗಳಲ್ಲಿ 68 ರನ್ ಬಾರಿಸಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇದೀಗ ಎರಡನೇ ಪಂದ್ಯದಲ್ಲಿ ಪಾಕ್ ಪಡೆ ನೇಪಾಳ ವಿರುದ್ಧ ಮುಗ್ಗರಿಸಿದೆ.