ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿ (U19 Women’s T20 World Cup) ಸತತ ಎರಡು ಗೆಲುವು ದಾಖಲಿಸುವುದರೊಂದಿಗೆ ಭಾರತ ವನಿತಾ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಶಫಾಲಿ (Shafali Verma) ಬಳಗ ಇದೀಗ ಎರಡನೇ ಪಂದ್ಯದಲ್ಲೂ ಯುಎಇ ತಂಡವನ್ನು (India vs UAE) 122 ರನ್‌ಗಳ ಅಂತರದಿಂದ ಮಣಿಸಿದೆ. ಇದರೊಂದಿಗೆ ಭಾರತ ತಂಡ ಡಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. 220 ರನ್‌ಗಳ ಗುರಿ ಬೆನ್ನತ್ತಿದ ಯುಎಇ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಶಫಾಲಿ ವರ್ಮಾ ಹಾಗೂ ಉಪನಾಯಕಿ ಶ್ವೇತಾ ಶೆಹ್ರಾವತ್ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಈ ಇಬ್ಬರು ಮೊದಲ ವಿಕೆಟ್ಗೆ ಬರೋಬ್ಬರಿ 111 ರನ್‌ಗಳ ಜೊತೆಯಾಟ ಕೂಡ ಹಂಚಿಕೊಂಡರು. ಈ ನಡುವೆ ನಾಯಕಿ ಶಫಾಲಿ ವರ್ಮಾ ಕೇವಲ 34 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 78 ರನ್ ಸಿಡಿಸಿದರೆ, ಮತ್ತೊಬ್ಬ ಆರಂಭಿಕ ಆಟಗಾರ್ತಿ ಶ್ವೇತಾ 49 ಎಸೆತಗಳಲ್ಲಿ 10 ಬೌಂಡರಿ ಸಹಿತ ಅಜೇಯ 74 ರನ್ ಸಿಡಿಸಿದರು. ಇದೇ ಶ್ವೇತಾ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ 20 ಬೌಂಡರಿ ಸಿಡಿಸಿ ದಾಖಲೆ ಬರೆದಿದ್ದರು.
IND vs SL: ಶೆಫಾಲಿ- ಮಂಧಾನ 174 ರನ್‌ಗಳ ಜೊತೆಯಾಟ; ಸರಣಿಯೊಂದಿಗೆ ಭಾರತಕ್ಕೆ 10 ವಿಕೆಟ್ ಜಯ
ಇನ್ನುಳಿದಂತೆ ಶಫಾಲಿ ವಿಕೆಟ್ ಬಳಿಕ ಮೈದಾನಕ್ಕೆ ಎಂಟ್ರಿಕೊಟ್ಟ ರಿಚಾ ಘೋಷ್ ಕೂಡ ಸ್ಫೋಟಕ ಇನ್ನಿಂಗ್ಸ್ ಆಡಿ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 49 ರನ್ ಗಳಿಸಿ ಔಟಾದರು. ಈ ಮೂವರ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದಾಗಿ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 219 ರನ್ಗಳಿಸಿತು.
ಈ ಗುರಿ ಬೆನ್ನಟ್ಟಿದ ಯುಎಇ ತಂಡ ಸ್ಫೋಟಕ ಆರಂಭ ಪಡೆಯಿತ್ತಾದರೂ ಮೊದಲ ಓವರ್ನಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡದ ಪರ ಮಹಿಕಾ ಗೌರ್ ಗರಿಷ್ಠ 26 ರನ್ ಗಳಿಸಿದರೆ, ಆರಂಭಿಕ ಆಟಗಾರ್ತಿ ಲಾವಣ್ಯ 24 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರನ್ನು ಬಿಟ್ಟರೆ ಮತ್ತ್ಯಾರು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ಯುಎಇ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಶಬ್ನಮ್ ಹಾಗೂ ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಪಡೆದರೆ, ಸೋನಿಯಾ ಮೆಂಧಿಯಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಜನವರಿ 18ರಂದು ಸ್ಕಾಟ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯ ಸಂಜೆ 5.15ಕ್ಕೆ ಆರಂಭವಾಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Mon, 16 January 23