ಸತತ 2 ಜೀವದಾನ ಸಿಕ್ಕರೂ ಪಾಕ್ ವಿರುದ್ಧ ಮುಗ್ಗರಿಸಿದ ವೈಭವ್ ಸೂರ್ಯವಂಶಿ

India vs Pakistan U19: ಅಂಡರ್-19 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಎರಡು ಜೀವದಾನಗಳು ಸಿಕ್ಕರೂ, 30 ರನ್‌ಗಳಿಗೆ ಔಟಾದರು. ಪಾಕ್ ವಿರುದ್ಧ ಸತತ ವೈಫಲ್ಯವನ್ನು ಎದುರಿಸುತ್ತಿರುವ ವೈಭವ್, ಈ ಹಿಂದೆ ಏಷ್ಯಾಕಪ್‌ನಲ್ಲೂ ಉತ್ತಮ ಇನ್ನಿಂಗ್ಸ್ ಆಡಿರಲಿಲ್ಲ. ಅವರ ವಿಕೆಟ್ ಬಳಿಕ ಭಾರತ ತಂಡವೂ ಕುಸಿಯಿತು.

ಸತತ 2 ಜೀವದಾನ ಸಿಕ್ಕರೂ ಪಾಕ್ ವಿರುದ್ಧ ಮುಗ್ಗರಿಸಿದ ವೈಭವ್ ಸೂರ್ಯವಂಶಿ
Vaibhav Suryavanshi

Updated on: Feb 01, 2026 | 4:32 PM

ಅಂಡರ್-19 ವಿಶ್ವಕಪ್​ನಲ್ಲಿ (U19 World Cup) ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಎಲ್ಲರ ದೃಷ್ಟಿ ವೈಭವ್ ಸೂರ್ಯವಂಶಿ (Vaibhav Suryavanshi) ಮೇಲಿದ್ದವು. ಆದರೆ ಈ ಪಂದ್ಯದಲ್ಲಿ ವೈಭವ್​ಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ. ಪಾಕ್ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸತತ ಎರಡು ಎಸೆತಗಳಲ್ಲಿ ಮೂರು ಜೀವದಾನ ಸಿಕ್ಕರೂ ಅದನ್ನು ಸದುಪಯೋಗಪಡಿಸಿಕೊಳ್ಳಲಾಗದೆ 30 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ವಿಶ್ವದ ಬಲಿಷ್ಠ ತಂಡಗಳೆದುರು ಅಬ್ಬರಿಸಿರುವ ವೈಭವ್​ಗೆ ಪಾಕಿಸ್ತಾನದ ವಿರುದ್ಧ ಮಾತ್ರ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ನಡೆದಿದ್ದ ಅಂಡರ್ 19 ಏಷ್ಯಾಕಪ್ ಫೈನಲ್​ನಲ್ಲೂ ವೈಭವ್​ ಬ್ಯಾಟ್ ಅಬ್ಬರಿಸಿರಲಿಲ್ಲ. ಇದೀಗ ವಿಶ್ವಕಪ್​ನಲ್ಲೂ ಅದೇ ಸಂಭವಿಸಿದೆ.

ಸತತ 2 ಜೀವದಾನ

ಈ ಪಂದ್ಯದಲ್ಲಿ ವೈಭವ್ ಮತ್ತು ಆರನ್ ಜಾರ್ಜ್ ಮೊದಲ ಎರಡು ಅಥವಾ ಮೂರು ಓವರ್‌ಗಳಲ್ಲಿ ಎಚ್ಚರಿಕೆಯಿಂದ ಆಡಿದರಾದರೂ ಬೇಗನೇ ವಿಕೆಟ್ ಕಳೆದುಕೊಂಡರು. ವಿಶೇಷವಾಗಿ ಆಕ್ರಮಣಕಾರಿ ಆಟಕ್ಕೆ ಮುಂದಾದ ವೈಭವ್ ನಾಲ್ಕನೇ ಓವರ್‌ನಲ್ಲಿ ಎರಡು ಬೌಂಡರಿ ನಂತರ ಏಳನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಆದರೆ 8ನೇ ಓವರ್‌ನಲ್ಲಿ ಎಲ್ಲವೂ ಇದ್ದಕ್ಕಿದ್ದಂತೆ ಬದಲಾಯಿತು. ಎಡಗೈ ವೇಗದ ಬೌಲರ್ ಮೊಹಮ್ಮದ್ ಸಯಾಮ್ ಎಸೆದ ಈ ಓವರ್‌ನಲ್ಲಿ, ವೈಭವ್ ಸತತ ಎರಡು ಎಸೆತಗಳಲ್ಲಿ ಮೂರು ಬಾರಿ ಪಾಕಿಸ್ತಾನಕ್ಕೆ ವಿಕೆಟ್ ಪಡೆಯುವ ಅವಕಾಶ ನೀಡಿದರು.

ಹೌದು, ವೈಭವ್ ಎರಡು ಎಸೆತಗಳಲ್ಲಿ ಪಾಕಿಸ್ತಾನಕ್ಕೆ ಮೂರು ಅವಕಾಶಗಳನ್ನು ಸೃಷ್ಟಿಸಿದರು. ಓವರ್‌ನ ಮೂರನೇ ಎಸೆತದಲ್ಲಿ, ವೈಭವ್ ಪುಲ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ಮಿಡ್‌ವಿಕೆಟ್‌ನಲ್ಲಿ ಗಾಳಿಯಲ್ಲಿ ಎತ್ತರಕ್ಕೆ ಹಾರಿಹೋಯಿತು. ಫೀಲ್ಡರ್ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಆದಾಗ್ಯೂ, ಈ ಸಮಯದಲ್ಲಿ, ಇಬ್ಬರು ಭಾರತೀಯ ಬ್ಯಾಟ್ಸ್‌ಮನ್‌ಗಳ ನಡುವೆ ರನ್ ಓಡುವ ಬಗ್ಗೆ ಗೊಂದಲ ಉಂಟಾದ್ದರಿಂದ ವೈಭವ್ ರನೌಟ್​ಗೆ ಬಲಿಯಾಗಬೇಕಿತ್ತು. ಆದರೆ ಕ್ಯಾಚ್ ಬಿಟ್ಟ ಫೀಲ್ಡರ್ ಚೆಂಡನ್ನು ವಿಕೆಟ್​ನತ್ತ ಎಸೆದರು, ಅಲ್ಲಿ ಕೀಪರ್ ಇರದ ಕಾರಣ ರನೌಟ್​ನಿಂದಲೂ ಪಾರಾದರು.

30 ರನ್ ಗಳಿಸಿ ಔಟಾದ ವೈಭವ್

ಒಂದೇ ಚೆಂಡಿನಲ್ಲಿ ಎರಡು ಬಾರಿ ಔಟ್ ಆಗುವುದನ್ನು ತಪ್ಪಿಸಿಕೊಂಡ ನಂತರ ವೈಭವ್ ಮತ್ತು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಮುಂದಿನ ಎಸೆತದಲ್ಲಿಯೇ ವೈಭವ್ ಮತ್ತೆ ಅದೇ ಹೊಡೆತವನ್ನು ಆಡಲು ಯತ್ನಿಸಿ ವಿಕೆಟ್ ಕೀಪರ್​ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಅಂತಿಮವಾಗಿ ವೈಭವ್ 22 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು. ಪಾಕಿಸ್ತಾನ ವಿರುದ್ಧ ಇದು ಸತತ ಮೂರನೇ ಪಂದ್ಯವಾಗಿದ್ದು, ಇದಕ್ಕೂ ಮೊದಲು ಅವರು ಏಷ್ಯಾಕಪ್‌ನ ಎರಡು ಪಂದ್ಯಗಳಲ್ಲಿ 5 ಮತ್ತು 26 ರನ್ ಬಾರಿಸಿದ್ದರು.

U19 World Cup 2026: ಅತಿ ವೇಗದ, ಅತಿ ಕಿರಿಯ; ವಿಶ್ವದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ

ಕ್ಯಾಪ್ಟನ್ ಮ್ಹಾತ್ರೆ ಮತ್ತೆ ವಿಫಲ

ವೈಭವ್ ಔಟಾದ ನಂತರ ಭಾರತ ಕೇವಲ ನಾಲ್ಕು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಎಂಟನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವೈಭವ್ ಔಟಾದರೆ, ಎರಡು ಎಸೆತಗಳ ನಂತರ, ಹೊಸ ಬ್ಯಾಟ್ಸ್‌ಮನ್ ಮತ್ತು ನಾಯಕ ಆಯುಷ್ ಮ್ಹಾತ್ರೆ ರನ್ ಗಳಿಸದೆ ಅದೇ ಬೌಲರ್‌ಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ, ಮ್ಹಾತ್ರೆ ಅವರ ಕಳಪೆ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರೆಯಿತು. ಮುಂದಿನ ಓವರ್‌ನ ಮೊದಲ ಎಸೆತದಲ್ಲಿಯೇ, ಆರಂಭಿಕ ಆಟಗಾರ ಆರನ್ ಜಾರ್ಜ್ (16) ಕ್ಲೀನ್ ಬೌಲ್ಡ್ ಆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Sun, 1 February 26