AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಇತಿಹಾಸ… ಬಾಂಗ್ಲಾ ಪಡೆಯನ್ನು ಬಗ್ಗು ಬಡಿದ ಯುಎಇ

United Arab Emirates vs Bangladesh: ಬಾಂಗ್ಲಾದೇಶ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಯುಎಇ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 20 ಓವರ್​ಗಳಲ್ಲಿ 205 ರನ್ ಕಲೆಹಾಕಿದರೆ, ಈ ಗುರಿಯನ್ನು 19.5 ಓವರ್​ಗಳಲ್ಲಿ ಚೇಸ್ ಮಾಡಿ ಯುಎಇ ತಂಡವು ರೋಚಕ ಗೆಲುವು ದಾಖಲಿಸಿದೆ.

ಹೊಸ ಇತಿಹಾಸ... ಬಾಂಗ್ಲಾ ಪಡೆಯನ್ನು ಬಗ್ಗು ಬಡಿದ ಯುಎಇ
Uae T20 Team
ಝಾಹಿರ್ ಯೂಸುಫ್
|

Updated on: May 20, 2025 | 7:55 AM

Share

ಟಿ20 ಕ್ರಿಕೆಟ್​ನಲ್ಲಿ ಯುಎಇ (UAE) ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಬಾಂಗ್ಲಾದೇಶ್ (Bangladesh) ತಂಡವನ್ನು ಸೋಲಿಸುವ ಮೂಲಕ ಎಂಬುದು ವಿಶೇಷ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡದ ನಾಯಕ ಮೊಹಮ್ಮದ್ ವಸೀಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕರಾದ ತಂಝಿದ್ ಹಸನ್ (59) ಹಾಗೂ ಲಿಟ್ಟನ್ ದಾಸ್ (40) ಉತ್ತಮ ಆರಂಭ ಒದಗಿಸಿದರು.

ಆ ಬಳಿಕ ಬಂದ ನಜ್ಮುಲ್ ಹೊಸೈನ್ ಶಾಂತೊ 27 ರನ್​ಗಳ ಕೊಡುಗೆ ನೀಡಿದರೆ, ತೌಹಿದ್ ಹೃದೋಯ್ 45 ರನ್ ಬಾರಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್​ ಕಲೆಹಾಕಿತು.

ಯುಎಇ ಭರ್ಜರಿ ಚೇಸಿಂಗ್:

206 ರನ್​ಗಳ ಕಠಿಣ ಗುರಿ ಪಡೆದ ಯುಎಇ ತಂಡಕ್ಕೆ ನಾಯಕ ಮೊಹಮ್ಮದ್ ವಸೀಮ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊಹಮ್ಮದ್ ಝೊಹೈಬ್ ಜೊತೆ ಇನಿಂಗ್ಸ್ ಆರಂಭಿಸಿದ ವಸೀಮ್ ಮೊದಲ ಓವರ್​ನಿಂದಲೇ ಸಿಡಿಲಬ್ಬರ ಶುರು ಮಾಡಿದ್ದರು. ಪರಿಣಾಮ 10 ಓವರ್​ಗಳಲ್ಲಿ ತಂಡದ ಮೊತ್ತ 100ರ ಗಡಿದಾಟಿತು.

ಅಲ್ಲದೆ 42 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 82 ರನ್ ಬಾರಿಸಿ ಮೊಹಮ್ಮದ್ ವಸೀಮ್ ಔಟಾದರು. ಇನ್ನು ಮೊಹಮ್ಮದ್ ಝೊಹೈಬ್ 38 ರನ್​ಗಳ ಕೊಡುಗೆ ನೀಡಿದರು.

ಆ ಬಳಿಕ ಬಂದ ಆಸೀಫ್ ಖಾನ್ 19 ರನ್​ ಬಾರಿಸಿದರೆ, ಹೈದರ್ ಅಲಿ 15 ರನ್​ಗಳಿಸಿದರು. ಇದಾಗ್ಯೂ ಕೊನೆಯ ಓವರ್​ನಲ್ಲಿ ಯುಎಇ ತಂಡಕ್ಕೆ ಗೆಲ್ಲಲು 12 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ದಾಳಿಗಿಳಿದ ತಂಝಿಮ್ ಹಸನ್ ಸಾಕಿಬ್ ಮೊದಲ ಎಸೆತದಲ್ಲೇ ವೈಡ್ ಎಸೆದರು. ಮರು ಎಸೆತದಲ್ಲಿ ಒಂದು ರನ್. ಎರಡನೇ ಎಸೆತದಲ್ಲಿ ಧ್ರುವ್ ಪರಾಶರ್ ಭರ್ಜರಿ ಸಿಕ್ಸ್ ಸಿಡಿಸಿದರು. ಮೂರನೇ ಎಸೆತದಲ್ಲಿ ಧ್ರುವ್ (11) ಬೌಲ್ಡ್ ಆದರು. ನಾಲ್ಕನೇ ಎಸತದಲ್ಲಿ ಒಂದು ರನ್.

ಐದನೇ ಎಸೆತವನ್ನು ನೋಬಾಲ್ ಮಾಡಿದರು. ಮರು ಎಸೆತದಲ್ಲಿ 2 ರನ್​ ಕಲೆಹಾಕುವ ಮೂಲಕ ಯುಎಇ ತಂಡವು ಗೆಲುವಿನ ಗುರಿ ಮುಟ್ಟಿತು. ಈ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವು 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಕೊನೆಯ ಓವರ್ ವಿಡಿಯೋ:

ಹೊಸ ಇತಿಹಾಸ:

ಬಾಂಗ್ಲಾದೇಶ್ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಇದು ಯುಎಇ ತಂಡದ ಮೊದಲ ಜಯ. ಅದರಲ್ಲೂ ಟೆಸ್ಟ್ ಆಡುವ ದೇಶದ ವಿರುದ್ಧ ಯುಎಇ ತಂಡವು ಇದೇ ಮೊದಲ ಬಾರಿಗೆ ಗೆಲುವು ದಾಖಲಿಸಿದೆ.

ಇದನ್ನೂ ಓದಿ: 18 ವರ್ಷಗಳಲ್ಲಿ 18 ನಾಯಕರನ್ನು ಕಣಕ್ಕಿಳಿಸಿದ ಪಂಜಾಬ್ ಕಿಂಗ್ಸ್

ಹಾಗೆಯೇ ಐಸಿಸಿ ಶ್ರೇಯಾಂಕದ ಟಾಪ್-10 ನಲ್ಲಿರುವ ತಂಡವೊಂದರ ವಿರುದ್ಧ ಯುಎಇ ಇದೇ ಮೊದಲ ಬಾರಿಗೆ 200+ ಸ್ಕೋರ್​ ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ.