INDU19 vs AUSU19: ಇಂದು ಆಸೀಸ್ ವಿರುದ್ಧ U19 ವಿಶ್ವಕಪ್ ಫೈನಲ್: ಇದು ಸೇಡಿನ ಪಂದ್ಯವಲ್ಲ ಎಂದ ಭಾರತದ ನಾಯಕ

|

Updated on: Feb 11, 2024 | 7:21 AM

Under 19 World Cup Final, India vs Australia: ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಇಂದು ಭಾರತ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇಡೀ ದೇಶವೇ ಈ ಪಂದ್ಯಕ್ಕಾಗು ಕಾದುಕುಳಿತಿದೆ. ಯಾಕೆಂದರೆ ಟೀಮ್ ಇಂಡಿಯಾಕ್ಕೆ ಇದೊಂದು ಸೇಡಿನ ಪಂದ್ಯ ಆಗಿದೆ. ಭಾರತ ಆರನೇ ಬಾರಿ ವಿಶ್ವಕಪ್ ಗೆಲ್ಲುತ್ತದೆಯೇ? ಎಂಬ ಕುತೂಹಲವಿದೆ. U19 ವಿಶ್ವಕಪ್‌ನಲ್ಲಿ ಭಾರತ ಎರಡು ಬಾರಿ ಆಸ್ಟ್ರೇಲಿಯಾವನ್ನು ಸೋಲಿಸಿದೆ.

INDU19 vs AUSU19: ಇಂದು ಆಸೀಸ್ ವಿರುದ್ಧ U19 ವಿಶ್ವಕಪ್ ಫೈನಲ್: ಇದು ಸೇಡಿನ ಪಂದ್ಯವಲ್ಲ ಎಂದ ಭಾರತದ ನಾಯಕ
IND vs AUS U19 World Cup Final
Follow us on

ಐಸಿಸಿ ಅಂಡರ್-19 ವಿಶ್ವಕಪ್‌ನ (U19 World Cup Final) ಅಂತಿಮ ಸುತ್ತಿನ ಫೈನಲ್ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಭಾರತಕ್ಕೆ ಇದು ಆರನೇ ಹಾಗೂ ಆಸ್ಟ್ರೇಲಿಯಾ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶವಿದೆ. ನವೆಂಬರ್​ನಲ್ಲಿ ಐಸಿಸಿ ಪುರುಷರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್​ನಲ್ಲಿ ಕೂಡ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಿದವು. ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಇದರಿಂದ ಕೋಟ್ಯಂತರ ಭಾರತೀಯ ಕ್ರೀಡಾ ಪ್ರೇಮಿಗಳ ಕನಸು ಭಗ್ನವಾಯಿತು. ಹೀಗಾಗಿ ಭಾರತಕ್ಕೆ ಇದೊಂದು ಸೇಡಿನ ಪಂದ್ಯ ಎಂದು ನಂಬಲಾಗಿದೆ. ಆದರೆ, ಈ ಬಗ್ಗೆ ಭಾರತ ತಂಡದ ನಾಯಕ ಉದಯ್ ಸಹರಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಅಂಥದ್ದೇನೂ ಇಲ್ಲ. ಸೇಡು ತೀರಿಸಿಕೊಳ್ಳುವ ಉದ್ದೇಶ ನಮಗಿಲ್ಲ. ನಾವು ವರ್ತಮಾನದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಹಿಂದಿನ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ. ಈಗ ನಾವು ಮುಂದಿನ ಗುರಿಯನ್ನು ತಲುಪಬೇಕಾಗಿದೆ,” ಎಂದು ಉದಯ್ ಸಹರಾನ್ ಅವರು ಪಿಟಿಐ ಜೊತೆ ಮಾತನಾಡುತ್ತಾ ಹೇಳಿದರು. 2012 ಮತ್ತು 2018ರಲ್ಲಿ ನಡೆದ U-19 ವಿಶ್ವಕಪ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿತ್ತು. U19 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಮೂರು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಎರಡು ಪಂದ್ಯಗಳನ್ನು ಗೆದ್ದಿದೆ ಮತ್ತು ಆಸ್ಟ್ರೇಲಿಯಾ ಒಂದು ಪಂದ್ಯವನ್ನು ಗೆದ್ದಿದೆ.

‘ಕಥೆ ಮುಗಿದಿದೆ ಎಂದರ್ಥವಲ್ಲ’.. ಟೀಂ ಇಂಡಿಯಾದಲ್ಲಿ ಕಡೆಗಣನೆ; ಬೇಸರ ಹೊರಹಾಕಿದ ಅನುಭವಿ ವೇಗಿ

ನಾಯಕ ಉದಯ್ ಸಹರನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಲೀಗ್ ಸುತ್ತಿನಲ್ಲಿ ಸತತ 3 ಪಂದ್ಯಗಳನ್ನು ಗೆದ್ದು ಸೂಪರ್ ಸಿಕ್ಸ್ ಸುತ್ತಿನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗಿ ಬಲಿಷ್ಠವಾಗಿದೆ. ನಂತರ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಕೂಡ ಸೋಲಿಸಿತು. ಈಗ ಫೈನಲ್ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಫೈನಲ್‌ಗೆ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಸೆಮಿಫೈನಲ್‌ವರೆಗೆ ಆಡಿದ ತಂಡವೇ ಫೈನಲ್‌ನಲ್ಲಿ ಆಡಲಿದೆ. ಮತ್ತೊಂದೆಡೆ, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿತ್ತು. ಆದ್ದರಿಂದ ಅಂತಿಮ ಸುತ್ತಿನಲ್ಲಿ ಖಚಿತವಾಗಿ ಕೆಲವು ಬದಲಾವಣೆಗಳಿರಬಹುದು.

ಪಿಚ್ ವರದಿ

ದಕ್ಷಿಣ ಆಫ್ರಿಕಾದ ವಿಲೋಮೂರ್ ಪಾರ್ಕ್ ಮೈದಾನ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಈ ಪಿಚ್‌ನಲ್ಲಿ ವೇಗದ ಬೌಲರ್‌ಗಳು ಮೇಲುಗೈ ಕಂಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲೂ ಕಡಿಮೆ ಸ್ಕೋರ್ ಕಂಡು ಬಂತು. ಇಲ್ಲಿ ಇದುವರೆಗೆ 27 ಏಕದಿನ ಪಂದ್ಯಗಳು ನಡೆದಿವೆ. ಮೊದಲ ಬಾರಿಗೆ ಬೌಲಿಂಗ್ ಮಾಡಿದ ತಂಡ 17 ಪಂದ್ಯಗಳನ್ನು ಗೆದ್ದರೆ, ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡ 8 ಪಂದ್ಯಗಳನ್ನು ಗೆದ್ದಿವೆಯಷ್ಟೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಶೇ. 40 ರಷ್ಟು ಮಳೆಯಾಗುವ ಸಾಧ್ಯತೆ ಕೂಡ ಇದೆ. ಗರಿಷ್ಠ ತಾಪಮಾನ 23 ಡಿಗ್ರಿ ಮತ್ತು ಕನಿಷ್ಠ ತಾಪಮಾನ 15 ಡಿಗ್ರಿ ಇರುತ್ತದೆ.

ಟೀಂ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನಾಡುವ ರಹಾನೆ ಕನಸು ನುಚ್ಚು ನೂರು..!

ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

ಭಾರತ ಅಂಡರ್-19: ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಪ್ರಿಯಾಂಶು ಮೊಲಿಯಾ, ಸಚಿನ್ ದಾಸ್, ಅರವೇಲಿ ಅವನೀಶ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ ಮತ್ತು ಸೌಮ್ಯಾ ಪಾಂಡೆ.

ಆಸ್ಟ್ರೇಲಿಯಾ ಅಂಡರ್ 19: ಹ್ಯಾರಿ ಡಿಕ್ಸನ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೆಬ್‌ಗೆನ್ (ನಾಯಕ), ಹರ್ಜಸ್ ಸಿಂಗ್, ರಿಯಾನ್ ಹಿಕ್ಸ್ (ವಿಕೆಟ್ ಕೀಪರ್), ಟಾಮ್ ಕ್ಯಾಂಪ್‌ಬೆಲ್, ಆಲಿವರ್ ಪೀಕ್, ರಾಫ್ ಮೆಕ್‌ಮಿಲನ್, ಟಾಮ್ ಸ್ಟ್ರಾಕರ್, ಮಾಹ್ಲಿ ಬಿಯರ್ಡ್‌ಮನ್ ಮತ್ತು ಕ್ಯಾಲಮ್ ವಿಡ್ಲರ್.

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30 ಕ್ಕೆ ಪಂದ್ಯ ಆರಂಭವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ