Big news: ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪ..!

Robin Uthappa: ಭಾರತ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಅನುಭವಿ ಬ್ಯಾಟ್ಸ್‌ಮನ್, ಕನ್ನಡಿಗ ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

Big news: ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪ..!
robin uthappa
Follow us
TV9 Web
| Updated By: ಪೃಥ್ವಿಶಂಕರ

Updated on:Sep 15, 2022 | 7:44 PM

ಟಿ20 ವಿಶ್ವಕಪ್‌ಗೆ ಭಾರತ ಕ್ರಿಕೆಟ್ ತಂಡವನ್ನು ಘೋಷಿಸಿದಾಗಿನಿಂದ, ಅನೇಕ ಆಟಗಾರರ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳ ನಡುವೆ, ಭಾರತ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಅನುಭವಿ ಬ್ಯಾಟ್ಸ್‌ಮನ್, ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಉತ್ತಪ್ಪ ಸೆಪ್ಟೆಂಬರ್ 14 ಬುಧವಾರದಂದು ಹೇಳಿಕೆ ನೀಡುವ ಮೂಲಕ ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತರಾಗಿದ್ದಾರೆ. ಉತ್ತಪ್ಪ 2006ರಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಟ್ವಿಟರ್‌ನಲ್ಲಿ ನಿವೃತ್ತಿ ಘೋಷಿಸಿದ ಉತ್ತಪ್ಪ, ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಗೌರವವಾಗಿದೆ. ಆದರೆ, ಪ್ರತಿಯೊಂದು ಒಳ್ಳೆಯ ವಿಷಯಕ್ಕೂ ಅಂತ್ಯವೆನ್ನುವುದು ಇದ್ದೆ ಇರುತ್ತದೆ. ಹಾಗಾಗಿ ನಾನು ಇಂದು ಭಾರತ ಕ್ರಿಕೆಟ್​ನ ಎಲ್ಲಾ ಮಾದರಿಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

2006 ರಲ್ಲಿ ಇಂದೋರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮೂಲಕ ಉತ್ತಪ್ಪ, ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದ ಉತ್ತಪ್ಪ 96 ಎಸೆತಗಳಲ್ಲಿ 86 ರನ್ ಗಳಿಸಿ ಔಟಾಗಿದ್ದರು. ಆ ಸಮಯದಲ್ಲಿ, ಇದು ಏಕದಿನದಲ್ಲಿ ಭಾರತಕ್ಕೆ ಚೊಚ್ಚಲ ಪಂದ್ಯದ ಅತಿದೊಡ್ಡ ಇನ್ನಿಂಗ್ಸ್‌ನ ದಾಖಲೆಯಾಗಿತ್ತು. ಉತ್ತಪ್ಪ ಅವರ ಈ ಇನ್ನಿಂಗ್ಸ್ ನೆರವಿನಿಂದ ಭಾರತ ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿತ್ತು.

2007 ರ ಟಿ20 ವಿಶ್ವಕಪ್ ಹೀರೋ

ಆದಾಗ್ಯೂ, ಉತ್ತಪ್ಪ ಅವರ ವೃತ್ತಿಜೀವನದ ಅತಿದೊಡ್ಡ ಕ್ಷಣವೆಂದರೆ 2007 ರ ಟಿ20 ವಿಶ್ವಕಪ್. ಆ ಮೊದಲ ವಿಶ್ವಕಪ್‌ನಲ್ಲಿ, ಪಾಕಿಸ್ತಾನದ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ, ಟೀಮ್ ಇಂಡಿಯಾ ಅತ್ಯಂತ ಕಳಪೆ ಆರಂಭ ಮಾಡಿದ ನಂತರ ಸಮಯೋಜಿತ ಇನ್ನಿಂಗ್ಸ್‌ ಆಡಿದ್ದ ಉತ್ತಪ್ಪ 39 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಇದರ ಆಧಾರದ ಮೇಲೆ ಭಾರತ 141 ರನ್ ಗಳಿಸಿತ್ತು. ಆದರೆ ಈ ಪಂದ್ಯ ಟೈ ಆಗಿದ್ದು, ನಂತರ ಭಾರತ ‘ಬಾಲ್ ಔಟ್’ ಮೂಲಕ ಗೆಲುವು ಸಾಧಿಸಿತ್ತು.

2007ರ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಬಾಲ್ ಔಟ್ ನಿಯಮವನ್ನು ಜಾರಿಗೊಳಿಸಲಾಗಿತ್ತು. ಇದರಡಿಯಲ್ಲಿ ಭಾರತದ ಮೂವರು ಆಟಗಾರರು ಬೌಲಿಂಗ್ ಮಾಡುವ ಮೂಲಕ ಚೆಂಡನ್ನು ವಿಕೆಟ್‌ಗೆ ಹೊಡೆಯುವಲ್ಲಿ ಯಶಸ್ವಿಯಾಗಿದ್ದರು. ಅವರಲ್ಲಿ ಒಬ್ಬರು ಉತ್ತಪ್ಪ. ಪ್ರಾಸಂಗಿಕವಾಗಿ, ಈ ವಿಜಯದ 15 ನೇ ವಾರ್ಷಿಕೋತ್ಸವದಂದು ಉತ್ತಪ್ಪ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

46 ಏಕದಿನ ಪಂದ್ಯಗಳಲ್ಲಿ 934 ರನ್

2004 ರ ಅಂಡರ್-19 ವಿಶ್ವಕಪ್‌ನಲ್ಲಿ ಶಿಖರ್ ಧವನ್ ಅವರೊಂದಿಗೆ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯೆಂದು ಎಲ್ಲರ ಗಮನ ಸೆಳೆದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಉತ್ತಪ್ಪ, ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರು. ಇದರಿಂದ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಕೂಡ ಸಿಕ್ಕಿತ್ತು. ಉತ್ತಪ್ಪ ಭಾರತದ ಪರ ಒಟ್ಟು 46 ಏಕದಿನ ಪಂದ್ಯಗಳಲ್ಲಿ 934 ರನ್ ಗಳಿಸಿದ್ದರೆ, 13 ಟಿ20 ಪಂದ್ಯಗಳಲ್ಲಿ 249 ರನ್ ಗಳಿಸಿದ್ದಾರೆ.

ಈ ನಿರ್ಧಾರದ ನಂತರ ಉತ್ತಪ್ಪ ಇನ್ನು ಮುಂದೆ ಐಪಿಎಲ್‌ನಲ್ಲೂ ಆಡುವಂತಿಲ್ಲ. ಉತ್ತಪ್ಪ ಐಪಿಎಲ್‌ನಲ್ಲಿ ಎರಡು ಬಾರಿ ಚಾಂಪಿಯನ್ ತಂಡಗಳ ಭಾಗವಾಗಿದ್ದರು ಮತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಶಸ್ತಿಯನ್ನು ಗೆದ್ದಾಗ, ಉತ್ತಪ್ಪ ಆ ಸೀಸನ್​ನಲ್ಲಿ ಅತ್ಯಧಿಕ ರನ್ (660) ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಅಲ್ಲದೆ ಪಂದ್ಯಾವಳಿಯ ಆಟಗಾರ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು. ನಂತರ 2021 ರಲ್ಲಿ, ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿಗೆ ಚಾಂಪಿಯನ್ ಮಾಡುವಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ 63 ರನ್ ಸಿಡಿಸಿದ್ದ ಉತ್ತಪ್ಪ ನಂತರ ಫೈನಲ್‌ನಲ್ಲಿ ಕೇವಲ 15 ಎಸೆತಗಳಲ್ಲಿ 31 ರನ್ ಸಿಡಿಸಿದ್ದರು. ಉತ್ತಪ್ಪ ಐಪಿಎಲ್‌ನ ಎಲ್ಲಾ 15 ಸೀಸನ್‌ಗಳಲ್ಲಿ ಭಾಗವಹಿಸಿದ್ದು, 6 ತಂಡಗಳ ಪರ ಒಟ್ಟು 205 ಪಂದ್ಯಗಳಲ್ಲಿ 4952 ರನ್ ಗಳಿಸಿದ್ದಾರೆ.

Published On - 7:59 pm, Wed, 14 September 22