
ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ (RR vs SRH) ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಪರ ಆರಂಭಿಕ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವೈಭವ್ ತಮ್ಮ ಅರ್ಧಶತಕದ ಇನ್ನಿಂಗ್ಸ್ನಲ್ಲಿ 8 ಸಿಕ್ಸರ್ಗಳು ಹಾಗೂ 1 ಬೌಂಡರಿ ಬಾರಿಸಿದರು. ಅಂದರೆ ವೈಭವ್ ಕೇವಲ ಬೌಂಡರಿ ಹಾಗೂ ಸಿಕ್ಸರ್ಗಳಿಂದಲೇ ತಮ್ಮ ಅರ್ಧಶತಕ ಪೂರೈಸಿದರು. ವೈಭವ್ ಅವರ ಈ ಆರ್ಭಟದಿಂದಾಗಿ ರಾಜಸ್ಥಾನ್ 3.2 ಓವರ್ಗಳಲ್ಲಿಯೇ 50 ರನ್‌ಗಳ ಗಡಿ ದಾಟಿತು.
ವೈಭವ್ ಸೂರ್ಯವಂಶಿ ಪ್ಲೇಆಫ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೈದರಾಬಾದ್ ವಿರುದ್ಧ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೈಭವ್, ಈ ಮೂಲಕ 2014 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಸುರೇಶ್ ರೈನಾ ಅವರ ದಾಖಲೆ ಮುರಿದರು.
ಹಾಗೆಯೇ ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ವೈಭವ್, ಈ ಐಪಿಎಲ್‌ನಲ್ಲಿ 600 ರನ್‌ಗಳ ಗಡಿ ದಾಟಿದರು. ಈ ಮೂಲಕ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 600 ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಇದರ ಜೊತೆಗೆ ಐಪಿಎಲ್ ಸೀಸನ್ವೊಂದರಲ್ಲಿ 650 ಕ್ಕೂ ಹೆಚ್ಚು ರನ್ ಕಲೆಹಾಕಿದ ಅನ್ಕ್ಯಾಪ್ಡ್ ಆಟಗಾರ ಎಂಬ ದಾಖಲೆಯೂ ವೈಭವ್ ಪಾಲಾಗಿದೆ.
ಆರಂಭದಿಂದಲೂ ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್, ಸನ್‌ರೈಸರ್ಸ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲ್ ಮಾಡಿದ ಮೂರನೇ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಈ ಮೂಲಕ ಈ ಓವರ್‌ನಲ್ಲಿ 25 ರನ್ ಕಲೆಹಾಕಿದರು. ಪ್ರಸ್ತುತ ಇನ್ನಿಂಗ್ಸ್ನಲ್ಲಿ 80 ರನ್‌ಗಳ ಗಡಿ ದಾಟಿರುವ ವೈಭವ್, ಈ ಸೀಸನ್ನಲ್ಲಿ 660 ರನ್‌ಗಳ ಗಡಿ ದಾಟುವ ಮೂಲಕ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
IPL 2026 Eliminator SRH vs RR Live: ಶತಕ ವಂಚಿತ ವೈಭವ್
ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಐದನೇ ಬಾರಿಗೆ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ನಿಕೋಲಸ್ ಪೂರನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಭಿಷೇಕ್ ಶರ್ಮಾ ಈ ಸಾಧನೆಯನ್ನು ಅತಿ ಹೆಚ್ಚು ಬಾರಿ ಅಂದರೆ 6 ಬಾರಿ ಮಾಡಿದ್ದಾರೆ. ಹಾಗೆಯೇ ವೈಭವ್ ಸೂರ್ಯವಂಶಿ ಪವರ್‌ಪ್ಲೇನಲ್ಲಿಯೇ ಐದನೇ ಬಾರಿಗೆ ತಮ್ಮ ಅರ್ಧಶತಕದ ಗಡಿ ದಾಟಿರುವುದು ಮತ್ತೊಂದು ದಾಖಲೆಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Wed, 27 May 26