
ವೈಭವ್ ಸೂರ್ಯವಂಶಿ (Vaibhav Sooryavanshi).. ತಾನು ಕ್ರೀಸ್ನಲ್ಲಿ ಇರುವವರೆಗೂ ಎದುರಾಳಿಗಳ ಗುಂಡಿಗೆಯ ಬಡಿತ ಹೆಚ್ಚಿಸುವ ಹದಿನೈದೇ ವರ್ಷದ ಹಾಲ್ಗೆನ್ನೆಯ ಯುವಕ. ಬರೀ ಹೊಡಿಬಡಿ ಆಟವನ್ನೇ ಕೇಳುವ ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರನೆನಿಸಿಕೊಂಡಿರುವ ವೈಭವ್, ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯದಲ್ಲೂ ಅದೇ ಆಟವನ್ನು ಪ್ರದರ್ಶಿಸಿದರು. ಈ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಸನ್‌ರೈಸರ್ಸ್, ಪಂದ್ಯ ಆರಂಭಕ್ಕೂ ಮುನ್ನವೇ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ನಾನಾ ರಣತಂತ್ರವನ್ನು ಹೆಣೆದುಕೊಂಡು ಮೈದಾನಕ್ಕಿಳಿದಿತ್ತು. ಆದರೆ ವೈಭವ್ ಸೂರ್ಯವಂಶಿ ಎಂಬ ಸುನಾಮಿಯ ಮುಂದೆ ಸನ್‌ರೈಸರ್ಸ್ ಬೌಲರ್ಗಳು ಅಕ್ಷರಶಃ ನಲುಗಿ ಹೋದರು.
ತಂತ್ರಗಾರಿಕೆಯಲ್ಲಿ ನಿಸ್ಸೀಮನೆನಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ನ ದುಃಸ್ವಪ್ನದಂತೆ ಕಾಡಿದ ವೈಭವ್, ಹ್ಯಾಟ್ರಿಕ್ ಸಿಕ್ಸರ್ಗಳನ್ನು ಬಾರಿಸುವುದರ ಜೊತೆಗೆ ಅವರ ಓವರ್‌ನಲ್ಲಿ ಬರೋಬ್ಬರಿ 25 ರನ್ ಕಲೆಹಾಕಿದರು. ವೈಭವ್ ಹೊಡೆದ ಒಂದೊಂದು ಹೊಡೆತವೂ ಎಸ್‌ಆರ್‌ಎಚ್ ಆಟಗಾರರನ್ನು ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿತು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ. ಬೌಲರ್ಗಳನ್ನು ದಂಡಿಸುವುದಕ್ಕೆ ನಾನು ಕ್ರೀಸ್ನಲ್ಲಿ ನಿಂತಿರುವುದು ಎಂಬುದನ್ನು ಪ್ರತಿ ಹೊಡೆತದಲ್ಲೂ ಸಾಭೀತು ಪಡಿಸಿದವರಂತೆ ಬ್ಯಾಟ್ ಬೀಸಿದ ವೈಭವ್ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಈ ಅರ್ಧಶತಕದ ಇನ್ನಿಂಗ್ಸ್ನಲ್ಲಿ ವೈಭವ್ ಬಾರಿಸಿದ ಸಿಕ್ಸರ್ಗಳು ಬರೋಬ್ಬರಿ 8. ಇದರ ಜೊತೆಗೆ 1 ಬೌಂಡರಿಯೂ ಸೇರಿತ್ತು. ಅಂದರೆ ವೈಭವ್ ಬರಿ ಬೌಂಡರಿ ಹಾಗೂ ಸಿಕ್ಸರ್ಗಳಿಂದಲೇ ತಮ್ಮ ಅರ್ಧಶತಕ ಪೂರೈಸಿದರು. ಈ ಮೂಲಕ ವೈಭವ್, ಪ್ಲೇಆಫ್ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರನೆಂಬ ದಾಖಲೆಯನ್ನು ನಿರ್ಮಿಸಿದರು. ಅರ್ಧಶತಕದ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ವೈಭವ್ ಕೇವಲ 28 ಎಸೆತಗಳಲ್ಲಿ 97 ರನ್ ಕಲೆಹಾಕಿದರು. ಅಂದರೆ ವೈಭವ್ ತಮ್ಮ ಅರ್ಧಶತಕದಿಂದ 97 ರನ್ ಬಾರಿಸಲು ಕೇವಲ 12 ಎಸೆತಗಳನ್ನಷ್ಟೇ ತೆಗೆದುಕೊಂಡರು. ವೈಭವ್ ಅವರ ಈ ಅಬ್ಬರದಿಂದಾಗಿ ರಾಜಸ್ಥಾನ್ ಕೇವಲ 8 ಓವರ್ಗಳಲ್ಲಿ 125 ರನ್ಗಳ ಗಡಿ ದಾಟಿತು.
ಅಂದರೆ ರಾಜಸ್ಥಾನ್ ದಾಖಲಿಸಿದ 125 ರನ್ಗಳಲ್ಲಿ ವೈಭವ್ ಒಬ್ಬರೇ 97 ರನ್ ಕಲೆಹಾಕಿದರು. ವೈಭವ್ ಔಟಾದ 8ನೇ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ವೈಭವ್ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಎಲ್ಲರೂ ಕಾದು ಕುಳಿತಿದ್ದರು. ಆದರೆ ಓವರ್ನ ಕೊನೆಯ ಎಸೆತದಲ್ಲಿ ವೈಭವ್ ಮಾಡಿದ ತಪ್ಪು ಅವರನ್ನು ಶತಕ ವಂಚಿತರನ್ನಾಗಿಸಿತು. ವೈಭವ್ ಶತಕವನ್ನು ಕಣ್ತುಂಬಿಕೊಳ್ಳಲು ಖುಷಿಯಿಂದ ಕಾಯುತ್ತಿದ್ದ ಅಭಿಮಾನಿಗಳು ಅವರು ಔಟಾಗುತ್ತಿದ್ದಂತೆ ಒಂದು ಕ್ಷಣ ಆಘಾತಕ್ಕೊಳಗಾದರು. ಎಲ್ಲೆಲ್ಲೂ ನೀರವ ಮೌನ ಆವರಿಸಿತು.
IPL 2026 Eliminator SRH vs RR Live: ರಾಜಸ್ಥಾನ್ 200 ರನ್ ಪೂರ್ಣ
ಸ್ವತಃ ವೈಭವ್ ಅವರೇ ಅಯ್ಯೋ ಎಂತಾ ಕೆಲಸ ಮಾಡಿದೆ ಎಂದು ತಲೆಯ ಮೇಲೆ ಕೈ ಇಟ್ಟುಕೊಂಡರು. ಇತ್ತ ಎದುರಾಳಿ ತಂಡದ ಆಟಗಾರರು ವೈಭವ್ ಅವರ ಆಟಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ವೈಭವ್ ಬೇಸರದಿಂದ ಪೆವಿಲಿಯನ್ತ್ತ ಹೆಜ್ಜೆ ಹಾಕುತ್ತಿದ್ದರೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ 15 ವರ್ಷದ ಪೋರನ ಆಟಕ್ಕೆ ಶಹಬ್ಬಾಸ್ ಗಿರಿ ಹೇಳುತ್ತಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 pm, Wed, 27 May 26