U19 World Cup: ಫೈನಲ್​ನಲ್ಲಿ ಸಿಡಿಲಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್

Vaibhav Suryavanshi: ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 55 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಪ್ರತಿಭೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.

U19 World Cup: ಫೈನಲ್​ನಲ್ಲಿ ಸಿಡಿಲಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್
Vaibhav Suryavanshi

Updated on: Feb 06, 2026 | 3:21 PM

ವೈಭವ್ ಸೂರ್ಯವಂಶಿ ( Vaibhav Suryavanshi).. ವಯಸ್ಸು ಕೇವಲ 14 ವರ್ಷವಾಗಿದ್ದರೂ, ನನ್ನಲ್ಲಿರುವ ಪ್ರತಿಭೆ ಸಾಗರದಷ್ಟು ಆಳವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಕಳೆದ ಐಪಿಎಲ್​ನಲ್ಲಿ ಘಟಾನುಘಟಿ ಬೌಲರ್​ಗಳನ್ನೇ ಬೆಂಡೆತ್ತಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ವಿಶ್ವಕಪ್​ನಲ್ಲೂ (U19 World Cup) ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಹರಾರೆಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವೈಭವ್ ಅಂಡರ್ 19 ವಿಶ್ವಕಪ್​ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

32 ಎಸೆತಗಳಲ್ಲಿ ಅರ್ಧಶತಕ

ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಕಳಪೆ ಆರಂಭ ಪಡೆಯಿತು. ಕಳೆದ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ್ದ ಆರಂಭಿಕ ಆರನ್ ಜಾರ್ಜ್ ಈ ಪಂದ್ಯದಲ್ಲಿ ಕೇವಲ 9 ರನ್‌ಗಳಿಗೆ ಔಟಾದರು. ಆದರೆ ಆ ಬಳಿಕ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಎಂದಿನಂತೆ ಬೌಂಡರಿ ಸಿಕ್ಸರ್​ಗಳ ಮಳೆಗರೆದ ಸೂರ್ಯವಂಶಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

80 ಎಸೆತಗಳಲ್ಲಿ 175 ರನ್

ಅರ್ಧಶತಕದ ಬಳಿಕ ಮತ್ತಷ್ಟು ಕೆರಳಿದ ವೈಭವ್ ಮುಂದಿನ 23 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಅಂದರೆ ವೈಭವ್ ಕೇವಲ 55 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಶತಕದ ಇನ್ನಿಂಗ್ಸ್​ನಲ್ಲಿ ವೈಭವ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 80 ರನ್ ಕಲೆಹಾಕಿದರು. ಶತಕದ ಬಳಿಕವೂ ಸ್ಫೋಟಕ ಆಟ ಮುಂದುವರೆಸಿದ ಸೂರ್ಯವಂಶಿ 71 ಎಸೆತಗಳಲ್ಲಿ 150 ರನ್​ಗಳ ಗಡಿ ದಾಟಿದ್ದಾರೆ. ಆದರೆ ದ್ವಿಶತಕದತ್ತ ಸಾಗುತ್ತಿದ್ದ ವೈಭವ್ 175 ರನ್ ಕಲೆಹಾಕಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 80 ಎಸೆತಗಳನ್ನು ಎದುರಿಸಿದ ವೈಭವ್ 15 ಬೌಂಡರಿ ಹಾಗೂ 15 ಸಿಕ್ಸರ್ ಕೂಡ ಬಾರಿಸಿದರು.

26 ಓವರ್​ಗಳಲ್ಲಿ 251 ರನ್

ವೈಭವ್ ಸೂರ್ಯವಂಶಿ ವಿಕೆಟ್ ಒಪ್ಪಿಸುವುದಕ್ಕೂ ಮುನ್ನ ಟೀಂ ಇಂಡಿಯಾವನ್ನು ಸುಭದ್ರ ಸ್ಥಿತಿಗೆ ತಂದು ನಿಲ್ಲಿಸಿದರು. ವೈಭವ್ ವಿಕೆಟ್ ಒಪ್ಪಿಸಿದಾತ ಭಾರತ ತಂಡದ ಸ್ಕೋರ್ ಕೇವಲ 26 ಓವರ್​ಗಳಲ್ಲಿ 251 ರನ್ ಆಗಿತ್ತು. ಇದು ಮಾತ್ರವಲ್ಲದೆ ವೈಭವ್, ನಾಯಕ ಆಯುಷ್ ಮ್ಹಾತ್ರೆ ಜೊತೆ ಕೇವಲ 90 ಎಸೆತಗಳಲ್ಲಿ 142 ರನ್‌ಗಳ ಜೊತೆಯಾಟವಾಡಿದರು. ಇತ್ತ ನಾಯಕ ಆಯುಷ್ ಕೂಡ ಅರ್ಧಶತಕ ಸಿಡಿಸಿದರು. ಆದರೆ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಆಯುಷ್ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Fri, 6 February 26