IND VS WI: ಪಾಂಡ್ಯಗೆ ಬಾಗಿಲು ಬಂದ್: ಅಯ್ಯರ್ ಹೊಸ ಫಿನಿಶರ್..!
Venkatesh Iyer: ವೆಂಕಟೇಶ್ ಅಯ್ಯರ್ ವೆಸ್ಟ್ ಇಂಡೀಸ್ ಸರಣಿಯ ಮೂಲಕ ಫಿನಿಶರ್ ಎಂದು ಸಾಬೀತುಪಡಿಸಿದ್ದಾರೆ. T20 ಸರಣಿಯಲ್ಲಿ, ಅಯ್ಯರ್ 15 ನೇ ಓವರ್‌ನ ನಂತರವೇ ಬ್ಯಾಟ್ ಬೀಸಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯಲ್ಲಿ ಟೀಮ್ ಇಂಡಿಯಾ (India vs West Indies, 3rd T20I) ಅದ್ಭುತ ಪ್ರದರ್ಶನ ನೀಡಿದೆ. ODI ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ರೋಹಿತ್ ಪಡೆ T20 ಸರಣಿಯಲ್ಲೂ ವೆಸ್ಟ್ ಇಂಡೀಸ್ ತಂಡವನ್ನು ವೈಟ್ ವಾಶ್ ಮಾಡಿದೆ. ಈ ಭರ್ಜರಿ ಗೆಲುವಿನ ಬಳಿಕ ಟೀಮ್ ಇಂಡಿಯಾ 6 ವರ್ಷಗಳ ನಂತರ ಟಿ20ಯಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದೆ. ಟಿ20ಯ ಅತ್ಯಂತ ಅಪಾಯಕಾರಿ ತಂಡವೆಂದು ಪರಿಗಣಿಸಲ್ಪಟ್ಟಿರುವ ವೆಸ್ಟ್ ಇಂಡೀಸ್‌ನಂತಹ ತಂಡವನ್ನು ಸೋಲಿಸಿ ಟೀಮ್ ಇಂಡಿಯಾ ನಂಬರ್ 1 ತಂಡವಾಗಿ ಹೊರಹೊಮ್ಮಿರುವುದು ವಿಶೇಷ. ಅಲ್ಲದೆ, ಭಾರತ ತಂಡವು ಪ್ರತಿಕೂಲ ಪರಿಸ್ಥಿತಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದಿದೆ. ಮೊದಲ ಟಿ20ಯಲ್ಲಿ ಟೀಮ್ ಇಂಡಿಯಾ ಚೇಸಿಂಗ್ ಮೂಲಕ ಗೆಲುವು ಸಾಧಿಸಿದೆ. ಆದರೆ ಉಳಿದ ಎರಡು ಪಂದ್ಯಗಳನ್ನು ಬೌಲಿಂಗ್ ಮೂಲಕ ಜಯ ಸಾಧಿಸಿದೆ. ಅದರಲ್ಲೂ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕೊನೆಯ ಐದು ಓವರ್ಗಳಲ್ಲಿ ಪಂದ್ಯದ ಚಿತ್ರಣ ಬದಲಿಸಿತ್ತು. ಹೀಗಾಗಿ ಟೀಮ್ ಇಂಡಿಯಾದ ಈ ಗೆಲುವಿನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ವೆಂಕಟೇಶ್ ಅಯ್ಯರ್ಗೆ ಹೆಚ್ಚಿನ ಶ್ರೇಯಸ್ಸು ಸಲ್ಲಬೇಕು.
ಅದರಲ್ಲೂ ಯುವ ಆಟಗಾರ ವೆಂಕಟೇಶ್ ಅಯ್ಯರ್ ಕಠಿಣ ಪರಿಸ್ಥಿತಿಯಲ್ಲಿ ರನ್ ಗಳಿಸಿದರು. ವಿಂಡೀಸ್ ದೈತ್ಯರ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದರು. ಈ ಸರಣಿಯಲ್ಲಿನ ವೆಂಕಿ ಅಂಕಿಅಂಶಗಳ ಗಮನಿಸಿದರೆ, ಮೂರು ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿರುವುದು ಸ್ಪಷ್ಟ. ಹೌದು, ವೆಂಕಟೇಶ್ ಅಯ್ಯರ್ T20 ಸರಣಿಯಲ್ಲಿ 92 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಈ ಮೂಲಕ T20 ವಿಶ್ವಕಪ್ 2022 ಗಾಗಿ ಆಲ್ ರೌಂಡರ್ ಮತ್ತು ಫಿನಿಶರ್ ಆಗಿ ತಮ್ಮನ್ನು ಸಜ್ಜುಗೊಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯಗೆ ಕಠಿಣ ಸವಾಲೊಡ್ಡು ಸೂಚನೆ ನೀಡಿದ್ದಾರೆ ವೆಂಕಟೇಶ್ ಅಯ್ಯರ್.
ವೆಂಕಟೇಶ್ ಅಯ್ಯರ್ ವೆಸ್ಟ್ ಇಂಡೀಸ್ ಸರಣಿಯ ಮೂಲಕ ಫಿನಿಶರ್ ಎಂದು ಸಾಬೀತುಪಡಿಸಿದ್ದಾರೆ. T20 ಸರಣಿಯಲ್ಲಿ, ಅಯ್ಯರ್ 15 ನೇ ಓವರ್‌ನ ನಂತರವೇ ಬ್ಯಾಟ್ ಬೀಸಿದ್ದರು. ಈ ವೇಳೆ ಮೊದಲ ಪಂದ್ಯದಲ್ಲಿ ಅಜೇಯ 24 ರನ್ಗಳಿಸಿದ್ದರು. ಇನ್ನು ಎರಡನೇ ಪಂದ್ಯದಲ್ಲಿ 33 ಮತ್ತು ಕೊನೆಯ ಟಿ20ಯಲ್ಲಿ 35 ರನ್ ಗಳಿಸಿದರು. ಈ ವೇಳೆ ಅಯ್ಯರ್ ಅವರ ಸ್ಟ್ರೈಕ್ ರೇಟ್ 184 ಕ್ಕಿಂತ ಹೆಚ್ಚಿತ್ತು ಎಂಬುದು ವಿಶೇಷ.
ಇನ್ನು ವೆಂಕಟೇಶ್ ಅಯ್ಯರ್ ಅವರು ಇಲ್ಲಿಯವರೆಗೆ ಕೇವಲ 6 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಒತ್ತಡದ ಸಂದರ್ಭಗಳಲ್ಲಿ ಅವರು ಅನುಭವಿ ಬ್ಯಾಟ್ಸ್‌ಮನ್‌ನಂತೆ ಬ್ಯಾಟ್ ಬೀಸಿದ್ದಾರೆ. ಹಾಗೆಯೇ ಈ ಸರಣಿಯಲ್ಲಿ ಕೇವಲ 3.1 ಓವರ್‌ಗಳನ್ನು ನೀಡಲಾಯಿತು. ಆದರೆ ಈ ಸಿಕ್ಕ ಅವಕಾಶದಲ್ಲಿ 2 ವಿಕೆಟ್ ಪಡೆದು ಮಿಂಚಿದ್ದರು. ಅತ್ತ ಹಾರ್ದಿಕ್ ಪಾಂಡ್ಯ ಭುಜದ ನೋವಿನ ಕಾರಣ ಬೌಲಿಂಗ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಅಯ್ಯರ್ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಸಾಮರ್ಥ್ಯವನ್ನು ತೆರೆದಿಡುತ್ತಿದ್ದಾರೆ.
ಟಿ20 ವಿಶ್ವಕಪ್ಗೆ ಇನ್ನು 8 ತಿಂಗಳುಗಳು ಮಾತ್ರ ಉಳಿದಿದ್ದು, ಹೀಗಾಗಿ ಮುಂಬರುವ ಸರಣಿಗಳಲ್ಲೂ ಅಯ್ಯರ್ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಕೂಡ ಮಿಂಚಿದರೆ ಹಾರ್ದಿಕ್ ಪಾಂಡ್ಯರನ್ನು ಟಿ20 ವಿಶ್ವಕಪ್ ಆಯ್ಕೆಗೆ ಪರಿಗಣಿಸುವುದು ಅನುಮಾನ. ಏಕೆಂದರೆ ಹಾರ್ದಿಕ್ ಪಾಂಡ್ಯ 2021 ರ ಟಿ20 ವಿಶ್ವಕಪ್ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ದೇಶೀಯ ಅಂಗಳದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸದಿದ್ದರೆ ತಂಡದ ಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ಈಗಾಗಲೇ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಇದಾಗ್ಯೂ ಪಾಂಡ್ಯ ರಣಜಿ ಕ್ರಿಕೆಟ್ ಆಡದಿರುವುದೇ ಅಚ್ಚರಿ. ಇತ್ತ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ವೆಂಕಟೇಶ್ ಅಯ್ಯರ್ ಮುಂಬರುವ ಸರಣಿಯಲ್ಲಿ ಮಿಂಚಿದರೆ ಟೀಮ್ ಇಂಡಿಯಾದ ಖಾಯಂ ಆಲ್ರೌಂಡರ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್