
ಬೆಂಗಳೂರಿನಲ್ಲಿರುವ ಬಿಸಿಸಿಐ (BCCI) ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಮುಂಬೈ ಹಾಗೂ ಕರ್ನಾಟಕ (Karnataka vs Mumbai) ನಡುವಿನ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದಡಿಯಲ್ಲಿ 55 ರನ್‌ಗಳಿಂದ ಗೆದ್ದು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 8 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಮೊದಲ ವಿಕೆಟ್‌ಗೆ ಆರಂಭಿಕರಾದ ಅಂಗ್‌ಕ್ರಿಶ್ ರಘುವಂಶಿ ಮತ್ತು ಇಶಾನ್ 36 ರನ್ಗಳ ಜೊತೆಯಾಟ ನೀಡಿದರು. ಇಶಾನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆ ನಂತರ ಬಂದ ಮುಶೀರ್ ಖಾನ್ ಕೂಡ 9 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಾಯಕ ಸಿದ್ದೇಶ್ 38 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕ್ವಾರ್ಟರ್ ಫೈನಲ್ಗೂ ಮುನ್ನ ಅದ್ಭುತ ಫಾರ್ಮ್ನಲ್ಲಿದ್ದ ಸರ್ಫರಾಜ್ ಖಾನ್ ಇಂಜುರಿಗೊಳಗಾಗಿದ್ದು ತಂಡಕ್ಕೆ ದೊಡ್ಡ ಹೊಡೆತು ನೀಡಿತು. ಇದರ ಜೊತೆಗೆ ನಾಯಕ ಶ್ರೇಯಸ್ ಇಲ್ಲದಿರುವುದು ಕೂಡ ಮುಂಬೈ ತಂಡವನ್ನು ಹಿನ್ನಡೆಗೆ ತಳ್ಳಿತು.
ಕೊನೆಯಲ್ಲಿ ತಂಡದ ಪರ ಏಕಾಂಗಿ ಹೋರಾಟ ನೀಡಿದ ಶಮ್ಸ್ ಮುಲಾನಿ ಅತ್ಯಧಿಕ 86 ರನ್ಗಳ ಇನ್ನಿಂಗ್ಸ್ ಆಡಿದರೆ, ಸಾಯಿರಾಜ್ ಪಾಟೀಲ್ ಕೂಡ 33 ರನ್ಗಳ ಕಾಣಿಕೆ ನೀಡಿದರು. ಇತ್ತ ಕರ್ನಾಟಕ ಪರ ಬೌಲಿಂಗ್ನಲ್ಲಿ ಮಿಂಚಿದ ವಿದ್ಯಾದರ್ ಪಾಟೀಲ್ 3 ವಿಕೆಟ್ ಪಡೆದರೆ, ವಿದ್ವತ್ ಹಾಗೂ ಅಭಿಲಾಶ್ ತಲಾ 2 ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೂ ಸಾಧಾರಣ ಆರಂಭ ಸಿಕ್ಕಿತು. ನಾಯಕ ಮಯಾಂಕ್ ಅಗರ್ವಾಲ್ 12 ರನ್ ಗಳಿಸಿ ಔಟಾಗುವುದರೊಂದಿಗೆ ಮೊದಲ ವಿಕೆಟ್ ಪತನವಾಯಿತು. ಇದಾದ ಬಳಿಕ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಅಜೇಯ ಶತಕದ ಜೊತೆಯಾಟವನ್ನಾಡಿದರು. ಈ ಟೂರ್ನಿಯಲ್ಲಿ ಇದುವರೆಗೆ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಅನುಭವಿ ಕರುಣ್ ಅವಶ್ಯಕ ಸಮಯದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದರು. ಉಳಿದಂತೆ ದೇವದತ್ ತನ್ನ ಉತ್ತಮ ಫಾರ್ಮ್ ಮುಂದುವರೆಸಿ ಈ ಆವೃತ್ತಿಯಲ್ಲಿ 6ನೇ 50 ಪ್ಲಸ್ ಸ್ಕೋರ್ ಕಲೆಹಾಕಿದರು.
ಅನುಭವಿ ಕರುಣ್ ನಾಯರ್ ಕೂಡ ಪಡಿಕ್ಕಲ್ ಜೊತೆಗೆ ಅವಶ್ಯಕ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ತಲಾ ಅರ್ಧಶತಕ ಬಾರಿಸಿದರು. ಮಳೆ ಬಂದು ಪಂದ್ಯ ನಿಲ್ಲುವುದಕ್ಕೂ ಮುನ್ನ ದೇವದತ್ ಪಡಿಕ್ಕಲ್ 95 ಎಸೆತಗಳಲ್ಲಿ 11 ಬೌಂಡರಿ ಸಹಿತ ಅಜೇಯ 81 ರನ್ ಬಾರಿಸಿದರೆ, ಇತ್ತ ಕರುಣ್ ನಾಯರ್ 80 ಎಸೆತಗಳಲ್ಲಿ 11 ಬೌಂಡರಿ ಸಹಿತ ಅಜೇಯ 75 ರನ್ ಬಾರಿಸಿದ್ದರು. ಇವರಿಬ್ಬರ ಜೊತೆಯಾಟದಿಂದಾಗಿ 254 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 33 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತ್ತು. ಆದರೆ ಈ ಹಂತದಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಆ ಬಳಿಕ ವಿಜೆಡಿ ನಿಯಮದಡಿಯಲ್ಲಿ ಕರ್ನಾಟಕ ತಂಡವನ್ನು 55 ರನ್‌ಗಳಿಂದ ವಿಜಯಿ ಎಂದು ಘೋಷಿಸಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Mon, 12 January 26