
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ಐಪಿಎಲ್ (IPL 2025) ಚಾಂಪಿಯನ್ ಆಗಿದೆ. ಬರೋಬ್ಬರಿ 17 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡಿರುವ ಆರ್ಸಿಬಿಗೆ ಇಡೀ ಕ್ರಿಕೆಟ್ ಜಗತ್ತೇ ಶುಭಾಶಯಗಳ ಮಳೆಗರೆಯುತ್ತಿದೆ. ಭಾರತ ಮಾತ್ರವಲ್ಲ, ವಿದೇಶಿ ಕ್ರಿಕೆಟಿಗರು ಕೂಡ ಆರ್ಸಿಬಿಗೆ ಶುಭ ಹಾರೈಸಿದ್ದಾರೆ. ಹೀಗಿರುವಾಗ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ (Vijay Mallya) ಅವರಿಂದ ಶುಭಾಶಯ ಬರದಿದ್ದರೆ ಹೇಗೆ? ಎಲ್ಲರ ನಿರೀಕ್ಷೆಯಂತೆ ಮದ್ಯದ ದೊರೆ ಖ್ಯಾತಿಯ ವಿಜಯ ಮಲ್ಯ ತನ್ನ ಮಾಜಿ ತಂಡಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿದ್ದಾರೆ. ಇದೀಗ ವಿಜಯ್ ಮಲ್ಯ ಅವರ ಪೋಸ್ಟ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಮೆಂಟ್ ಮಾಡಿದೆ ಎಂಬ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಒಂದು ಸಮಯದಲ್ಲಿ ಕುಭೇರನಾಗಿ ಮೆರೆಯುತ್ತಿದ್ದ ವಿಜಯ್ ಮಲ್ಯ ವಿಲಾಸಿ ಜೀವನಕ್ಕೆ ಜೋತು ಬಿದ್ದು, ಭಾರತದ ಹಲವಾರು ಬ್ಯಾಂಕುಗಳಿಂದ ಸಾಲ ಪಡೆದು, ಆ ಸಾಲವನ್ನು ಮರು ಪಾವತಿಸದೆ ಎಲ್ಲಾ ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಮಲ್ಯ, SBI ಸೇರಿದಂತೆ ಇತರ ಬ್ಯಾಂಕುಗಳಲ್ಲಿ ಸುಮಾರು 9,000 ಕೋಟಿ ರೂ.ಗಳಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿರುವ ಮಲ್ಯ, ತಮ್ಮ X ನಲ್ಲಿ ಆರ್ಸಿಬಿಗೆ ಶುಭಾಶಯ ತಿಳಿಸಿದ್ದಾರೆ.
‘ಕೊನೆಗೂ, 18 ವರ್ಷಗಳ ನಂತರ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಆಗಿದೆ. 2025 ರ ಟೂರ್ನಮೆಂಟ್‌ನಲ್ಲಿ ಐಪಿಎಲ್ ತಂಡದ ಪ್ರದರ್ಶನ ಬಲಿಷ್ಠವಾಗಿತ್ತು. ಈ ತಂಡವು ಪಂದ್ಯಾವಳಿಯ ಉದ್ದಕ್ಕೂ ಜವಾಬ್ದಾರಿಯುತ ಆಟವನ್ನು ಆಡಿದ್ದು ಕಂಡುಬಂದಿದೆ. ಆಟಗಾರರಲ್ಲಿ ಸರಿಯಾದ ತರಬೇತಿ ಮತ್ತು ಸಮನ್ವಯ ಕಂಡುಬಂದಿದೆ. ಇಡೀ ತಂಡವಾಗಿ ಆಟವನ್ನು ಆಡಿದರು. ಈ ತಂಡಕ್ಕೆ ನನ್ನ ಶುಭಾಶಯಗಳು’ ಎಂದು ವಿಜಯ್ ಮಲ್ಯ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
That’s why I like X pic.twitter.com/hR3QIEwJWV
— Harsh Goenka (@hvgoenka) June 4, 2025
ವಿಜಯ್ ಮಲ್ಯ ಅವರ ಈ ಪೋಸ್ಟ್ ಅನ್ನು ಸುಮಾರು 6 ಲಕ್ಷ ಜನರು ವೀಕ್ಷಿಸಿದ್ದು, ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಮೆಂಟ್ ಮಾಡಿದೆ ಎನ್ನಲಾಗಿರುವ ಫೋಟೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ, ‘ಸರ್, ಭಾರತಕ್ಕೆ ಹಿಂತಿರುಗಿ. ಒಟ್ಟಿಗೆ ಆಚರಿಸೋಣ’ ಎಂದು ಬರೆಯಲಾಗಿದೆ. ಆದರೆ ಈ ವೈರಲ್ ಫೋಟೋದ ಹಿಂದಿರುವ ಸತ್ಯಾಂಶದ ಹಿಂದೆ ಬಿದ್ದಾಗ ತಿಳಿದಿದ್ದು, ಇದು ಕೇವಲ ಎಡಿಟೆಡ್ ಫೋಟೋ ಆಗಿದೆ. ಎಸ್ಬಿಐ ಆ ರೀತಯಾಗಿ ಯಾವುದೇ ಕಾಮೆಂಟ್ ಮಾಡಿರುವುದು ಅಧಿಕೃತವಾಗಿ ತಿಳಿದುಬಂದಿಲ್ಲ. ಇದರರ್ಥ ವೈರಲ್ ಫೋಟೋದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದನ್ನು ಅರಿಯಬಹುದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Thu, 5 June 25