IPL 2025: ಟಿ20 ಕ್ರಿಕೆಟ್​ನಲ್ಲಿ ನೂರನೇ ಅರ್ಧಶತಕ ಸಿಡಿಸಿದ ಕಿಂಗ್ ಕೊಹ್ಲಿ

|

Updated on: Apr 13, 2025 | 7:09 PM

Virat Kohli's 100th T20 Half-Century: ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2025 ರ 28ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಟಿ20 ಕ್ರಿಕೆಟ್‌ನಲ್ಲಿ 100ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಕೊಹ್ಲಿಗಿಂತ ಮೊದಲು ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದರು.

IPL 2025: ಟಿ20 ಕ್ರಿಕೆಟ್​ನಲ್ಲಿ ನೂರನೇ ಅರ್ಧಶತಕ ಸಿಡಿಸಿದ ಕಿಂಗ್ ಕೊಹ್ಲಿ
Virat Kohli
Follow us on

ಐಪಿಎಲ್ 2025  (IPL 2025)ರ 28 ನೇ ಪಂದ್ಯವು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ 173 ರನ್ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ (Virat Kohli) ಹಾಗೂ ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಈ ವೇಳೆ ಸಾಲ್ಟ್ ಅರ್ಧಶತಕ ಸಿಡಿಸಿ ಔಟಾದರೆ, ವಿರಾಟ್ ಕೊಹ್ಲಿ ಕೂಡ 40 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿ 100 ಅರ್ಧಶತಕಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದರು.

ಮೊದಲ ಏಷ್ಯನ್ ಕ್ರಿಕೆಟಿಗ

ರಾಜಸ್ಥಾನ್ ವಿರುದ್ಧ ಅಜೇಯ 62 ರನ್​ಗಳ ಇನ್ನಿಂಗ್ಸ್ ಆಡಿದ ಕೊಹ್ಲಿ ಈ ಅರ್ಧಶತಕದೊಂದಿಗೆ ಈ ಸಾಧನೆ ಮಾಡಿದ ಮೊದಲ ಏಷ್ಯಾದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿಗಿಂತ ಮೊದಲು, ಇಲ್ಲಿಯವರೆಗೆ ಯಾವುದೇ ಏಷ್ಯಾದ ಆಟಗಾರನಿಗೂ ಚುಟುಕು ಮಾದರಿಯಲ್ಲಿ 100 ಅರ್ಧಶತಕಗಳನ್ನು ಬಾರಿಸಲು ಸಾಧ್ಯವಾಗಿಲ್ಲ. ಇದರರ್ಥ ವಿರಾಟ್ ಕೊಹ್ಲಿ ತಮ್ಮ ಟಿ20 ವೃತ್ತಿಜೀವನದ 100ನೇ ಅರ್ಧಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಅಜೇಯ ಅರ್ಧಶತಕ ಸಿಡಿಸಿದ ಕೊಹ್ಲಿ

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿ ಆರಂಭದಿಂದಲೂ ತಾಳ್ಮೆಯ ಆಟಕ್ಕೆ ಮುಂದಾದರು. ಒಂದೆಡೆ ಸಾಲ್ಟ್ ಹೊಡಿಬಡಿ ಆಟದ ಮೂಲಕ ಸ್ಕೋರ್ ಬೋರ್ಡ್​ ಹೆಚ್ಚಿಸಿದರೆ, ಕೊಹ್ಲಿ ಮಾತ್ರ ತಾಳ್ಮೆಯ ಆಟವನ್ನಾಡಿ 14.3 ಓವರ್‌ಗಳಲ್ಲಿ ಐಪಿಎಲ್ 2025 ರಲ್ಲಿ ತಮ್ಮ ಎರಡನೇ ಅರ್ಧಶತಕ ದಾಖಲಿಸಿದರು. ಇದಕ್ಕೂ ಮೊದಲು, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಅಜೇಯ ಅರ್ಧಶತಕ ಗಳಿಸಿದ್ದರು. ಈ ಪಂದ್ಯದಲ್ಲಿ 45 ಎಸೆತಗಳನ್ನು ಎದುರಿಸಿದ ಕೊಹ್ಲಿ 137.78 ಸ್ಟ್ರೈಕ್ ರೇಟ್​ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ ಅಜೇಯ 62 ರನ್ ಗಳಿಸಿದರು.

ಟಿ20ಯಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರು

ಟಿ20ಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಮೊದಲ ಆಟಗಾರ ಡೇವಿಡ್ ವಾರ್ನರ್. ಅವರು ಇಲ್ಲಿಯವರೆಗೆ 108 ಅರ್ಧಶತಕಗಳನ್ನು ಗಳಿಸಿದ್ದಾರೆ. ಇವರಲ್ಲದೆ, ವಿರಾಟ್ ಕೊಹ್ಲಿ ಈಗ 100 ಅರ್ಧಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಬಾಬರ್ ಆಝಂ ಇದ್ದು, ಅವರು ಇಲ್ಲಿಯವರೆಗೆ 90 ಅರ್ಧಶತಕಗಳನ್ನು ಗಳಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಜೋಸ್ ಬಟ್ಲರ್ ಅವರ ಹೆಸರಿನಲ್ಲಿ 86 ಅರ್ಧಶತಕಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Sun, 13 April 25