
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನೋದು ಒಂದೇ ನಾಣ್ಯದ ಎರಡು ಮುಖಗಳಿದಂತೆ. ಇದರಿಂದ ಅನುಕೂಲಗಳು ಎಷ್ಟಿವಿಯೋ ಅಷ್ಟೇ ಅನಾನುಕೂಲಗಳು ಇವೆ. ಇತ್ತೀಚಿನ ದಿನಗಳಲ್ಲಿ ಈ ಟೆಕ್ನಾಲಜಿಯನ್ನು ಸಮಾಜದ ಒಳಿತಿಗೆ ಬಳಸಿದಕ್ಕಿಂತ ಹೆಚ್ಚಾಗಿ ಕೆಡುಕಿಗೆ ಬಳಸಿದ್ದು ಹೆಚ್ಚು. ಇದರಿಂದಾಗಿ ದೇಶದ/ ವಿಶ್ವದ ಗಣ್ಯರ ಮಾನ ಹಾನಿಯಾಗುತ್ತಿರುವುದನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಇದೀಗ ಮತ್ತೊಮ್ಮೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಮಾನಹಾನಿ ಮಾಡುವಂತಹ ಕೆಲಸವೊಂದನ್ನು ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ಮಾಡಲಾಗಿದೆ.
ವಾಸ್ತವವಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27 ರಿಂದ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೊದಲ್ಲಿ, ಈ ಇಬ್ಬರು ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದಾಗಿದೆ. ಇದೀಗ ಈ ವಿಡಿಯೋ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದರೆ ಈ ವೈರಲ್ ವಿಡಿಯೋದ ಅಸಲಿಯತ್ತನ್ನು ಹುಡುಕಿ ಹೊರಟಾಗ ಸಿಕ್ಕಿದ್ದು, ಅದೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಮನುಕುಲದ ಮಾರಿ.
ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡಿದರೆ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅಭ್ಯಾಸ ಸಮಯದಲ್ಲಿ ಪರಸ್ಪರ ಚುಂಬಿಸುತ್ತಿರುವುದು ಕಂಡುಬರುತ್ತದೆ. ಆದರೆ ಈ ವಿಡಿಯೋ ನಿಜವಲ್ಲ. ವಾಸ್ತವವಾಗಿ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಫೋಟೋವನ್ನು ಟ್ಯಾಂಪರ್ ಮಾಡಲಾಗಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಈ ಇಬ್ಬರು ಚುಂಬಿಸುತ್ತಿರುವಂತೆ ವಿಡಿಯೋ ಸೃಷ್ಟಿಸಲಾಗಿದೆ.
Delhi Bois Bhaichara 🔥 pic.twitter.com/mHzAOyaX5q
— Abhishek (@be_mewadi) September 25, 2024
ವಾಸ್ತವವಾಗಿ, ಕಾನ್ಪುರದಲ್ಲಿ ನಡೆಯಲ್ಲಿರುವ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಅದರಂತೆ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಆಟದ ಬಗ್ಗೆ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಈ ವೇಳೆ ಗಂಭೀರ್, ಕೊಹ್ಲಿಯ ಗಡ್ಡವನ್ನು ಮುಟ್ಟಿದ್ದರು. ಬಹುಶಃ ವಿರಾಟ್ ಗಡ್ಡಕ್ಕೆ ಅಂಟಿಕೊಂಡಿದ್ದ ಧೂಳನ್ನು ಗಂಭೀರ್ ಒರೆಸಿರಬಹುದು ಎಂಬುದನ್ನು ನಾವು ಫೋಟೋ ನೋಡಿ ಊಹಿಸಿಕೊಳ್ಳಬಹುದು. ಈ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಈ ಫೋಟೋ ಬಳಸಿ ಈ ವಿಡಿಯೋ ಮಾಡಲಾಗಿದೆ.
Virat Kohli with Gautam Gambhir in the practice session. 😂❤️ pic.twitter.com/O2Qcd4pTbe
— Mufaddal Vohra (@mufaddal_vohra) September 25, 2024
ವಿರಾಟ್ ಡೀಪ್‌ಫೇಕ್ ವಿಡಿಯೋಗೆ ಬಲಿಯಾಗಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಕೂಡ, ಅವರ ವೀಡಿಯೊವೊಂದು ವೈರಲ್ ಆಗಿತ್ತು. ಅದರಲ್ಲಿ ಅವರು ಶುಭ್ಮನ್ ಗಿಲ್ ಅವರನ್ನು ತೀವ್ರವಾಗಿ ಟೀಕಿಸಿರುವಂತೆ ನಕಲು ಮಾಡಲಾಗಿತ್ತು. ಆದರೆ ಆ ವಿಡಿಯೋ ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಮಾಡಲಾಗಿತ್ತು. ವಿರಾಟ್ ಅಲ್ಲದೆ, ಸಚಿನ್ ತೆಂಡೂಲ್ಕರ್ ಅವರ ಡೀಪ್‌ಫೇಕ್ ವಿಡಿಯೋ ಕೂಡ ವೈರಲ್ ಆಗಿತ್ತು. ಇವರಲ್ಲದೆ, ಅನೇಕ ಸೆಲೆಬ್ರಿಟಿಗಳು ಕೂಡ ಈ ಡೀಪ್‌ಫೇಕ್ ವಿಡಿಯೋಗೆ ಬಲಿಪಶುಗಳಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Thu, 26 September 24