ಟೀಮ್ ಇಂಡಿಯಾದ ಸೋಲಿನ ಬೆನ್ನಲ್ಲೇ ಕೀರ್ತನೆಯಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ
India vs New Zealand: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ 2ನೇ ಮ್ಯಾಚ್ ಅಕ್ಟೋಬರ್ 24 ರಿಂದ ಶುರುವಾಗಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.
ಬೆಂಗಳೂರಿನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಮುಂಬೈಗೆ ತೆರಳಿದ್ದಾರೆ. ಅಲ್ಲದೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಕೃಷ್ಣ ದಾಸ್ ಅವರ ಕೀರ್ತನೆಯಲ್ಲಿ ಭಾಗವಹಿಸಿದ್ದಾರೆ. ಕರ್ವಾ ಚೌತ್ ಪ್ರಯುಕ್ತ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕೃಷ್ಣ ದಾಸ್ ಅವರ ಭಕ್ತಿ ಪ್ರಧಾನ ಕೀರ್ತನೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪಾಲ್ಗೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನು ಕೃಷ್ಣ ದಾಸ್ ಅವರ ಕೀರ್ತನೆಯಲ್ಲಿ ವಿರುಷ್ಕಾ ಜೋಡಿ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಇದೇ ವರ್ಷ ಜುಲೈನಲ್ಲಿ ಲಂಡನ್‌ನಲ್ಲಿ ಕೃಷ್ಣ ದಾಸ್ ಅವರ ಕೀರ್ತನೆಯಲ್ಲಿ ದಂಪತಿಗಳು ಕಾಣಿಸಿಕೊಂಡಿದ್ದರು. ಸದ್ಯ ಮುಂಬೈನಲ್ಲಿರುವ ವಿರಾಟ್ ಕೊಹ್ಲಿ ಅಕ್ಟೋಬರ್ 24 ಕ್ಕೂ ಮುನ್ನ ಪುಣೆಗೆ ಆಗಮಿಸಲಿದ್ದಾರೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಅಕ್ಟೋಬರ್ 24 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಪುಣೆಯ ಎಂ ಸಿ ಎ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಮೂರು ಪಂದ್ಯಗಳ ಸರಣಿಯ ಮೊದಲ ಮ್ಯಾಚ್ನಲ್ಲಿ ಸೋತಿರುವ ಭಾರತ ತಂಡವು 2ನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ಮೂಲಕ ಸರಣಿಯನ್ನು ಸಮಬಲಗೊಳಿಸಬೇಕಿದೆ. ಒಂದು ವೇಳೆ ಎರಡನೇ ಮ್ಯಾಚ್ನಲ್ಲೂ ಸೋತರೆ ಸರಣಿ ನ್ಯೂಝಿಲೆಂಡ್ ಪಾಲಾಗಲಿದೆ. ಹೀಗಾಗಿಯೇ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಲು ಅಥವಾ ಡ್ರಾ ಮಾಡಿಕೊಳ್ಳಲು ಟೀಮ್ ಇಂಡಿಯಾ ಪ್ರಯತ್ನಿಸಲಿದೆ.