ಅಂದು 2011 ಐಸಿಸಿ ಏಕದಿನ ವಿಶ್ವಕಪ್ ಭಾರತ ಗೆದ್ದಾಗ ವಿರಾಟ್ ಕೊಹ್ಲಿ (Virat Kohli) ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ತಮ್ಮ ಹೆಗಲು ಮೇಲೆ ಹೊತ್ತು ಮೈದಾನದಲ್ಲಿ ಸುತ್ತು ಹಾಕಿದ್ದನ್ನು ಯಾವೊಬ್ಬ ಕ್ರಿಕೆಟ್ ಅಭಿಮಾನಿ ಮರೆಯಲು ಸಾಧ್ಯವಿಲ್ಲ. ಅದು ವಿರಾಟ್ ಕೊಹ್ಲಿ ಅವರಿಗೆ ಮೊದಲ ವಿಶ್ವಕಪ್ ಆಗಿದ್ದರೆ, ಸಚಿನ್ ತೆಂಡೂಲ್ಕರ್ಗೆ ಕೊನೇ ವಿಶ್ವಕಪ್ ಆಗಿತ್ತು. ಇದೇ ಕಾರಣಕ್ಕೆ ಟೀಮ್ ಇಂಡಿಯಾದ (Team India) ಯಂಗ್ ಸ್ಟಾರ್ಸ್ ತಮ್ಮ ಆರಾಧ್ಯ ದೈವ ಸಚಿನ್ ಅವರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಎತ್ತಿಕೊಂಡು ಸುತ್ತಾಡಿದರು. ಅದೊಂದು ಭಾವನಾತ್ಮಕ ಕ್ಷಣವಾಗಿತ್ತು. “ಸಚಿನ್ ಅವರು 23 ವರ್ಷಗಳ ಕಾಲ ರಾಷ್ಟ್ರದ ಭಾರವನ್ನು ಹೊತ್ತಿದ್ದಾರೆ. ಈಗ ನಾವು ಅವರನ್ನು ನಮ್ಮ ಹೆಗಲ ಮೇಲೆ ಹೊತ್ತುವ ಸಮಯ ಬಂದಿದೆ,” ಎಂದು ವಿರಾಟ್ ಕೊಹ್ಲಿ ಅಂದು ಹೇಳಿದ ಮಾತು ಇಂದಿಗೂ ಕಾಡುತ್ತದೆ.
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿ 9 ವರ್ಷಗಳು ಕಳೆದಿವೆ. ವಿರಾಟ್ ಕೊಹ್ಲಿ ಇಂದು ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಇಂದುಕೂಡ ಕೊಹ್ಲಿ ಮತ್ತು ಸಚಿನ್ರಲ್ಲಿ ಯಾರು ಶ್ರೇಷ್ಠರು ಎಂಬ ಚರ್ಚೆ ನಡೆಯುತ್ತಲೇ ಇದೆ, ನಡೆಯುತ್ತಲೇ ಇರುತ್ತದೆ. ಆದರೆ, ಈ ಇಬ್ಬರು ದಿಗ್ಗಜ ಆಟಗಾರರಿಗೆ ಒಬ್ಬರ ಮೇಲೆ ಮತ್ತೊಬ್ಬರ ಮೇಲೆ ಅಪಾರವಾದ ಗೌರವವಿದೆ. ಕೊಹ್ಲಿ ಮತ್ತು ಸಚಿನ್ ನಡುವೆ ಅನೇಕ ಕಥೆಗಳಿವೆ. ಈ ಪೈಕಿ 2013 ರಲ್ಲಿ ಮುಂಬೈನಲ್ಲಿ ತೆಂಡೂಲ್ಕರ್ ವಿದಾಯದ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಇಬ್ಬರ ನಡುವೆ ನಡೆದ ಒಂದು ವಿಚಾರವನ್ನು ಇಂದಿಗೂ ಸಚಿನ್ ನೆನಪಿಸಿಕೊಳ್ಳುತ್ತಾರಂತೆ.
ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿರುವ ಸಚಿನ್, “ನನಗೆ ಆ ಘಟನೆ ಈಗಲೂ ನೆನಪಿದೆ. ನಾನು ಆಗ ಡ್ರೆಸ್ಸಿಂಗ್ ರೂಮ್ಗೆ ಮರಳಿದ್ದೆ ಮತ್ತು ಕಣ್ಣಲ್ಲಿ ಪೂರ್ತಿ ನೀರು ತುಂಬಿತ್ತು. ಯಾಕಂದ್ರೆ ಅದು ನನ್ನ ಕೊನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಇನ್ನು ನಾನು ಭಾರತ ತಂಡದ ಆಟಗಾರನಾಗಿ ಮೈದಾನಕ್ಕೆ ಇಳಿಯುವುದಿಲ್ಲ ಎಂಬ ಸತ್ಯ ಅರಿತಿದ್ದೆ. ಒಂದು ಮೂಲೆಯಲ್ಲಿ ಒಬ್ಬಂಟಿಯಾಗಿ ಕೂತು ಟವಲ್ ಅನ್ನು ತಲೆಯ ಮೇಲೆ ಹಾಕಿಕೊಂಡು ಕಣ್ಣೀರು ವರೆಸುತ್ತಿದ್ದೆ. ನಾನು ಆಗ ತುಂಬಾ ಭಾವನಾತ್ಮಕವಾಗಿದ್ದೆ ಮತ್ತು ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ.”
“ಈ ಸಂದರ್ಭ ಅಲ್ಲಿಗೆ ವಿರಾಟ್ ಕೊಹ್ಲಿ ಬಂದರು. ಕೊಹ್ಲಿಗೆ ಅವರ ತಂದೆ ನೀಡಿದ್ದ ಪವಿತ್ರ ದಾರವನ್ನು ನನಗೆ ನೀಡಿದರು. ನಾನು ಅದನ್ನು ಸ್ವಲ್ಪ ಸಮಯ ಕೈಯಲ್ಲಿ ಹಿಡುದುಕೊಂಡಿದ್ದೆ. ಆದರೆ, ಅದು ಕೊಹ್ಲಿಗೆ ಅತ್ಯಮೂಲ್ಯವಾಗಿದ್ದು ಎಂಬುದು ತಿಳಿದಿತ್ತು. ಹೀಗಾಗಿ ಅವರಿಗೆ ಮತ್ತೆ ಅದನ್ನು ಹಿಂತಿರುಗಿಸಿದೆ. ಇದು ನಿನ್ನ ಬಳಿಯೇ ಇರಬೇಕು. ಇದು ನಿನಗೆ ಸೇರಿದ್ದು ಬೇರೆ ಯಾರಿಗೂ ಅಲ್ಲ. ಇದನ್ನು ನೀನು ನಿನ್ನ ಕೊನೇ ಉಸಿರು ಇರುವವರೆಗೆ ಇಟ್ಟುಕೊಳ್ಳಬೇಕು. ಹೀಗೆ ನಾನು ಕೊಹ್ಲಿಗೆ ಮರಳಿಕೊಟ್ಟೆ. ಇದು ಅಂದು ನಡೆದ ಅತ್ಯಂತ ಭಾವನಾತ್ಮಕ ಘಟನೆ ಆಗಿತ್ತು,” ಎಂದು ಸಚಿನ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರೊಂದಿಗೆ ಡ್ರೆಸ್ಸಿಂಗ್ ಕೊಠಡಿಯಲ್ಲಿನ ವಿಶೇಷ ನೆನಪುಗಳನ್ನು ಎರಡು ವರ್ಷಗಳ ಹಿಂದೆ ಕೊಹ್ಲಿ ಕೂಡ ಮೆಲುಕು ಹಾಕಿದ್ದರು. “ನಾವು ಯಾವಾಗಲು ಕೈಗೆ ದಾರವನ್ನು ಕಟ್ಟಿಕೊಳ್ಳುತ್ತೇವೆ. ಭಾರತದಲ್ಲಿ ಇದನ್ನು ಸಾಕಷ್ಟು ಜನ ಅನುಸರಿಸುತ್ತಾರೆ. ಹಾಗಾಗಿ ನನ್ನ ತಂದೆ ಈ ಹಿಂದೆ ನನಗೆ ಇದನ್ನು ಕೊಟ್ಟಿದ್ದರು. ಹಾಗಾಗಿ ದಾರ ಯಾವಾಗಲೂ ನನ್ನ ಬ್ಯಾಗ್‌ನಲ್ಲಿ ಇದ್ದೇ ಇರುತ್ತದೆ. ಸಚಿನ್ ನಿವೃತ್ತಿಯ ಸಂದರ್ಭ ನನ್ನ ತಂದೆ ಕೊಟ್ಟಿದ್ದ ದಾರವನ್ನು ಅವರಿಗೆ ಸಣ್ಣ ಕೊಡುಗೆ ನೀಡಲು ನಿರ್ಧರಿಸಿದ್ದೆ,” ಎಂದು ವಿರಾಟ್ ಕೊಹ್ಲಿ ಹಿಂದಿನ ಘಟನೆಯನ್ನ ನೆನೆದಿದ್ದರು.
Rohit Sharma: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ರೆಡಿಯಾದ ರೋಹಿತ್ ಶರ್ಮಾ: ಏನದು ಗೊತ್ತೇ?
Ranji Trophy 2021-22: ಸೀನಿಯರ್ ರಹಾನೆ, ಜೂನಿಯರ್ ಯಶ್ ಶತಕದ ಮೂಲಕ 2 ವರ್ಷಗಳ ಬಳಿಕ ರಣಜಿ ಟ್ರೋಫಿಗೆ ಚಾಲನೆ