Rohit Sharma: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ರೆಡಿಯಾದ ರೋಹಿತ್ ಶರ್ಮಾ: ಏನದು ಗೊತ್ತೇ?
IND vs WI T20: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ20 ಪಂದ್ಯ ಇಂದು ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅದು ಒಂದಲ್ಲ, ಎರಡು ದಾಖಲೆ ಪುಡಿ ಮಾಡಲು ಸಜ್ಜಾಗಿದ್ದಾರೆ.
ಭಾರೀ ಕುತೂಹಲ ಕೆರಳಿಸಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ (IND vs WI T20) ನಡುವಣ ಎರಡನೇ ಟಿ20 ಪಂದ್ಯ ಇಂದು ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದ್ದು, ಉಭಯ ತಂಡಗಳು ಗೆಲುವಿಗೆ ಹೋರಾಟ ನಡೆಸಲಿದೆ. ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ್ದ ರೋಹಿತ್ ಶರ್ಮಾ (Rohit Sharma) ಪಡೆ, 3 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಇತ್ತ ಕೀರೊನ್ ಪೊಲಾರ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಚೊಚ್ಚಲ ಗೆಲುವನ್ನು ಎದುರುನೋಡುತ್ತಿದೆ. ಇದರ ನಡುವೆ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅದು ಒಂದಲ್ಲ, ಎರಡು ದಾಖಲೆ ಪುಡಿ ಮಾಡಲು ಸಜ್ಜಾಗಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 3 ಸಿಕ್ಸರ್ ಸಿಡಿಸಿ ಕೇವಲ 19 ಎಸೆತಗಳಲ್ಲಿ 40 ರನ್ ಚಚ್ಚಿದ್ದರು. ಇಂದಿನ ಪಂದ್ಯದಲ್ಲಿ ಹಿಟ್ಮ್ಯಾನ್ 3 ಸಿಕ್ಸರ್ ಬಾರಿಸಿದರೆ ಒಂದು ತಂಡದ ವಿರುದ್ಧ ಅತಿ ಹೆಚ್ಚು ಸಿಡಿಸಿದ ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಮತ್ತು ಅಫ್ಘಾನಿಸ್ತಾನ ತಂಡದ ಹಜ್ರತುಲ್ಲ ಜಜಾಯ್ ಅವರ ದಾಖಲೆ ಹಿಂದಿಕ್ಕಲಿದ್ದಾರೆ. ಸದ್ಯ ಫಿಂಚ್ ಇಂಗ್ಲೆಂಡ್ ವಿರುದ್ಧ ಮತ್ತು ಜಜಾಯ್ ಐರ್ಲೆಂಡ್ ವಿರುದ್ಧ 34 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಖಾತೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 32 ಸಿಕ್ಸರ್ಗಳಿವೆ. ಹೀಗಾಗಿ ಇನ್ನು 3 ಸಿಕ್ಸ್ ಬಂದರೆ ಹಿಟ್ಮ್ಯಾನ್ ಹೊಸ ದಾಖಲೆ ನಿರ್ಮಿಸಲಿದ್ದಾರೆ.
ಇದರ ಜೊತೆಗೆ ರೋಹಿತ್ ಅವರು ಆ್ಯರೋನ್ ಫಿಂಚ್ ಅವರ ಮತ್ತೊಂದು ದಾಖಲೆ ಪುಡಿ ಮಾಡಲಿದ್ದಾರೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಳ್ಳಲು ರೋಹಿತ್ಗೆ ಇನ್ನು ಕೇವಲ 36 ರನ್ಗಳ ಅವಶ್ಯಕತೆಯಿದೆ. ಫಿಂಚ್ ಇಂಗ್ಲೆಂಡ್ ವಿರುದ್ಧ 594 ರನ್ ಗಳಿಸಿದ್ದರೆ, ರೋಹಿತ್ ವೆಸ್ಟ್ ಇಂಡೀಸ್ ವಿರುದ್ಧ 559 ರನ್ ಬಾರಿಸಿದ್ದಾರೆ.
2ನೇ ಟಿ20ಗೆ ಭಾರತದಲ್ಲಿ ಬದಲಾವಣೆ?:
ಎರಡನೇ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಲಾಗಿದೆ. ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವ ಓಪನರ್ ಇಶಾನ್ ಕಿಶನ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಹೀಗಾಗಿ ಕಣಕ್ಕಿಳಿಯಲು ತುದಿಗಾಲಿನಲ್ಲಿ ನಿಂತಿರುವ ರುತುರಾಜ್ ಗಾಯಕ್ವಾಡ್ಗೆ ಇಂದಾದರೂ ಅವಕಾಶ ಸಿಗುತ್ತಾ ಎಂಬುದು ಕುತೂಹಲ ಕೆರಳಿಸಿದೆ. ವೆಂಕಟೇಶ್ ಅಯ್ಯರ್ ಕೂಡ ಮೊದಲ ಟಿ20 ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರ ಜಾಗದಲ್ಲಿ ದೀಪಕ್ ಹೂಡಾಗೆ ಅವಕಾಶ ನೀಡ್ತಾರ ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಮ್ಯಾನೇಜ್ಮೆಂಟ್ ತೀರ್ಮಾನ ಕೈಗೊಳ್ಳಲಿದೆ.
ಇನ್ನು ವೇಗಿ ದೀಪಕ್ ಚಹರ್ ಕೂಡ ಮೊದಲ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬಲಗೈಗೆ ಗಾಯಮಾಡಿಕೊಂಡಿದ್ದಾರೆ. ಹೀಗಾಗಿ ಇವರು ಇಂದಿನ ಪಂದ್ಯಕ್ಕೆ ಅನುಮಾನ ಎನ್ನಲಾಗಿದೆ. ಹೀಗಾಗಿ ಅವಕಾಶಕ್ಕಾಗಿ ಕಾಯುತ್ತಿರುವ ಐಪಿಎಲ್ನ ಸ್ಟಾರ್ ವೇಗಿ ಆವೇಶ್ ಖಾನ್ ಸ್ಥಾನ ಪಡೆಯಬಹುದು. ಹೀಗಾದಲ್ಲಿ ಮತ್ತೊಬ್ಬ ಆಟಗಾರ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ.
Ranji Trophy 2021-22: ಸೀನಿಯರ್ ರಹಾನೆ, ಜೂನಿಯರ್ ಯಶ್ ಶತಕದ ಮೂಲಕ 2 ವರ್ಷಗಳ ಬಳಿಕ ರಣಜಿ ಟ್ರೋಫಿಗೆ ಚಾಲನೆ
Simon Katich: ಸನ್ರೈಸರ್ಸ್ ತಂಡದಲ್ಲಿ ಸಂಚಲನ: ಹರಾಜಿನ ಬೆನ್ನಲ್ಲೇ ಕೊಚ್ ಹುದ್ದೆ ತ್ಯಜಿಸಿ ಹೊರ ನಡೆದ ಕ್ಯಾಟಿಚ್