Asia Cup 2022: ಕೊಹ್ಲಿಯ ಶತಕಗಳ ಬರ ಅಂತ್ಯ; 1021 ದಿನಗಳ ಬಳಿಕ ಆಗಸ ನೋಡಿದ ವಿರಾಟ್ ಬ್ಯಾಟ್..!
Virat Kohli: ಶತಕ ಬಂದಿಲ್ಲ... ಶತಕ ಬಂದಿಲ್ಲ.... ಕಳೆದ 1021 ದಿನಗಳಿಂದ ಇಡೀ ಕ್ರಿಕೆಟ್ ಜಗತ್ತು ಕೇಳುತ್ತಿದ್ದ ಪ್ರಶ್ನೆಗೆ ಅಂತಿಮವಾಗಿ ಕಿಂಗ್ ಕೊಹ್ಲಿ ಉತ್ತರ ನೀಡಿದ್ದಾರೆ.
ಶತಕ ಬಂದಿಲ್ಲ… ಶತಕ ಬಂದಿಲ್ಲ…. ಕಳೆದ 1021 ದಿನಗಳಿಂದ ಇಡೀ ಕ್ರಿಕೆಟ್ ಜಗತ್ತು ಕೇಳುತ್ತಿದ್ದ ಪ್ರಶ್ನೆಗೆ ಅಂತಿಮವಾಗಿ ಕಿಂಗ್ ಕೊಹ್ಲಿ (Virat Kohli) ಉತ್ತರ ನೀಡಿದ್ದಾರೆ. ಇಡೀ ಏಷ್ಯಾಕಪ್‌ನಲ್ಲಿ (Asia Cup 2022) ಟೀಂ ಇಂಡಿಯಾ ಪರ ಅಬ್ಬರದ ಪ್ರದರ್ಶನ ನೀಡಿದ ಕಿಂಗ್, ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ನೀಡಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಅದರ ಅಭಿಮಾನಿಗಳ, ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳ ಅತಿದೊಡ್ಡ ಕಾಯುವಿಕೆ ಕೊನೆಗೊಂಡಿತು. ವಿರಾಟ್ ಕೊಹ್ಲಿಯ 71 ನೇ ಶತಕ ಕೊನೆಗೂ ಹೊರಬಂದಿದೆ. ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಕೇವಲ 53 ಎಸೆತಗಳಲ್ಲಿ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕ ದಾಖಲಿಸಿದರು.
ಏಷ್ಯಾಕಪ್ ಆರಂಭಕ್ಕೂ ಮುನ್ನ, ಫಾರ್ಮ್ ಬಗ್ಗೆ ಹೆಚ್ಚು ಪ್ರಶ್ನೆಗಳಿಗೆ ಒಳಗಾದ ವಿರಾಟ್ ಕೊಹ್ಲಿ, ಪಂದ್ಯಾವಳಿಯಲ್ಲಿ ಪಂದ್ಯದಿಂದ ಪಂದ್ಯಕ್ಕೆ ಲಯ ಕಂಡುಕೊಂಡು 1021 ದಿನಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕವನ್ನು ಬಾರಿಸಿ, ಕಳೆದುಹೋದ ಫಾರ್ಮ್ ಅನ್ನು ಮರಳಿ ಪಡೆದರು. 2019ರ ನವೆಂಬರ್‌ನಿಂದ ನಡೆಯುತ್ತಿರುವ ಕೊಹ್ಲಿಯ ಶತಕದ ಬರ, ಟೀಂ ಇಂಡಿಯಾ ಪರ ಇದುವರೆಗೂ ಶತಕ ಬಾರಿಸದ ಸ್ವರೂಪದಲ್ಲಿ ಅಂತ್ಯಗೊಂಡಿದೆ.
ಬಾಂಗ್ಲಾ ವಿರುದ್ಧ ಶತಕ
ನವೆಂಬರ್ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ತಮ್ಮ ಕೊನೆಯ ಅಂದರೆ 70 ನೇ ಶತಕವನ್ನು ಬಾರಿಸಿದ್ದರು, ಆದರೆ ಅಂದಿನಿಂದ ಅವರು ಶತಕಕ್ಕಾಗಿ ಹಂಬಲಿಸುತ್ತಿದ್ದರು. ನಂತರ ಕಳೆದ ಸುಮಾರು ಒಂದು ವರ್ಷದಿಂದ ಅವರ ಬ್ಯಾಟ್‌ನಿಂದ ರನ್ ಬರುವುದು ನಿಂತಿತ್ತು. ಇಂತಹ ಪರಿಸ್ಥಿತಿಯಲ್ಲಿ, ಏಷ್ಯಾಕಪ್ ಮತ್ತು ನಂತರ ವಿಶ್ವಕಪ್‌ನಲ್ಲಿ ಅವರ ಆಯ್ಕೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ ಕೊಹ್ಲಿ ಪಂದ್ಯಾವಳಿಯ ಆರಂಭದಲ್ಲಿ ಎರಡು ಅರ್ಧ ಶತಕಗಳೊಂದಿಗೆ ಫಾರ್ಮ್ಗೆ ಭರ್ಜರಿ ಪುನರಾಗಮನ ಮಾಡಿದರು.
ನಂತರ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ, ಆರಂಭದಿಂದಲೇ ಅಬ್ಬರಿಸಿದರು. ಅಂತಿಮವಾಗಿ 19 ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 1021 ದಿನಗಳ ಕಾಯುವಿಕೆಯನ್ನು ಕೊನೆಗೊಳಿಸಿದರು.
Published On - 8:57 pm, Thu, 8 September 22