IND vs ENG: ರವಿ ಶಾಸ್ತ್ರಿ ಶಾಂಪೇನ್ ಬೇಕಾ ಶಾಂಪೇನ್?- ವಿರಾಟ್ ಕೊಹ್ಲಿ
India vs England 3rd Odi: ಇಂಗ್ಲೆಂಡ್ ವಿರುದ್ದದ 3ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದಿದೆ. ಈ ಗೆಲುವಿನ ರೂವಾರಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್.

ಇಂಗ್ಲೆಂಡ್ (India vs England) ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) 2-1 ಅಂತರದಿಂದ ಸರಣಿ ಗೆದ್ದಿದೆ. ಈ ಸರಣಿ ಗೆಲುವಿನ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೆದ್ದ ತಂಡಕ್ಕೆ ಶಾಂಪೇನ್ ಬಾಟಲ್ ಹಂಚಲಾಗಿತ್ತು. ಅಲ್ಲದೆ ಶಾಂಪೇನ್ ಅನ್ನು ಚಿಮ್ಮಿಸುತ್ತಾ ಟೀಮ್ ಇಂಡಿಯಾ ಆಟಗಾರರು ಸಂಭ್ರಮಿಸಿದರು. ಇದರ ನಡುವೆ ವಿರಾಟ್ ಕೊಹ್ಲಿ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಅವರಿಗೆ ಶಾಂಪೇನ್ ಬೇಕಾ ಎಂದು ಕೇಳುತ್ತಿರುವುದು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರವಿ ಶಾಸ್ತ್ರಿ ಅವರು ಈ ಸರಣಿಯಲ್ಲಿ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಸರಣಿ ಸಮಾರೋಪ ಸಮಾರಂಭದ ವೇಳೆಯೂ ಟೀಮ್ ಇಂಡಿಯಾದ ಮಾಜಿ ಕೋಚ್ ಮೈದಾನದಲ್ಲಿದ್ದರು. ಅತ್ತ ಶಾಂಪೇನ್ ಸಂಭ್ರಮದಲ್ಲಿದ್ದ ಟೀಮ್ ಇಂಡಿಯಾವನ್ನು ಶಾಸ್ತ್ರಿ ವೀಕ್ಷಿಸುತ್ತಿದ್ದರು. ಇದನ್ನು ನೋಡಿದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಶಾಂಪೇನ್ ಬೇಕಾ ಎಂದು ಕೇಳಿದ್ದಾರೆ. ಇತ್ತ ರವಿ ಶಾಸ್ತ್ರಿ ಕೂಡ ಸನ್ನೆಯ ಮೂಲಕ ಕೊಹ್ಲಿಗೆ ಅದೇನೋ ಮೆಸೇಜ್ ಕೂಡ ನೀಡಿದರು.

ರವಿ ಶಾಸ್ತ್ರಿ-ವಿರಾಟ್ ಕೊಹ್ಲಿ
ವಿಶೇಷ ಎಂದರೆ ಕೊನೆಗೂ ರವಿ ಶಾಸ್ತ್ರಿಗೂ ಶಾಂಪೇನ್ ಸಿಕ್ಕಿದೆ. ಹೌದು, ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದ ರಿಷಭ್ ಪಂತ್ಗೆ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿದೆ. ಅದರಂತೆ ಪ್ರಶಸ್ತಿ ಮೊತ್ತದೊಂದಿಗೆ ಶಾಂಪೇನ್ ಕೂಡ ನೀಡಲಾಗಿತ್ತು. ಈ ಶಾಂಪೇನ್ ಬಾಟಲ್ ಅನ್ನು ರಿಷಭ್ ಪಂತ್ ರವಿ ಶಾಸ್ತ್ರಿಗೆ ನೀಡಿದ್ದಾರೆ. ಇದೀಗ ರಿಷಭ್ ಪಂತ್ ಶಾಸ್ತ್ರಿಗೆ ಶಾಂಪೇನ್ ಬಾಟಲ್ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ಗೆ ಇಳಿಯಿತು. ನಾಯಕ ಜೋಸ್ ಬಟ್ಲರ್ ಅರ್ಧಶತಕ ಗಳಿಸಿ 60 ರನ್ ಬಾರಿಸಿದ್ದು ಬಿಟ್ಟರೆ ಜೇಸನ್ ರಾಯ್ 41 ರನ್ ಗಳಿಸಿದ್ದೇ ಹೆಚ್ಚು. ಉಳಿದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ಇಂಗ್ಲೆಂಡ್ 259 ರನ್ಗೆ ಆಲೌಟ್ ಆಯಿತು. ಭಾರತ ಪರ ಹಾರ್ದಿಕ್ 4 ವಿಕೆಟ್ ಕಿತ್ತರೆ ಚಹಲ್ 3 ವಿಕೆಟ್ ಪಡೆದರು. 260 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ಮುಖ್ಯ ವಿಕೆಟ್ಗಳನ್ನು ಕಳೆದುಕೊಂಡಿತು. ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಿಲಿಲ್ಲ.
ಈ ಸಂದರ್ಭ ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ರಿಷಭ್ ಪಂತ್. ಇವರಿಗೆ ಸಾಥ್ ನೀಡಿದ್ದು ಹಾರ್ದಿಕ್ ಪಾಂಡ್ಯ. ಟಾಪ್ ಆರ್ಡರ್ ಬ್ಯಾಟರ್ಗಳನ್ನು ಕೆಡವಿ ಸಂಭ್ರಮದಲ್ಲಿದ್ದ ಇಂಗ್ಲೆಂಡ್ಗೆ ಪಂತ್ ಪಂಚ್ ಮೇಲೆ ಪಂಚ್ ಕೊಟ್ಟರು. ಪಂತ್-ಹಾರ್ದಿಕ್ ಕಡೆಯಿಂದ ಮೂಡಿಬಂದಿದ್ದು ಬರೋಬ್ಬರಿ 133 ರನ್ಗಳ ಜೊತೆಯಾಟ. ತಂಡದ ಗೆಲುವು ಖಚಿತವಾಗುತ್ತಿದ್ದಂತೆ ಹಾರ್ದಿಕ್ ನಿರ್ಗಮಿಸಿದರು. 55 ಎಸೆತಗಳಲ್ಲಿ 10 ಫೋರ್ ಬಾರಿಸಿ 71 ರನ್ಗೆ ಔಟಾದರು. ಬಳಿಕ ಪಂತ್ ಸ್ಫೋಟಕ ಆಟವಾಡಿದ 42.1 ಓವರ್ನಲ್ಲೇ 261 ರನ್ ಗಳಿಸಿ ಗೆಲುವು ಸಾಧಿಸುವಂತೆ ಮಾಡಿದರು. ರಿಷಭ್ ಪಂತ್ 113 ಎಸೆತಗಳನ್ನು 16 ಫೋರ್ ಹಾಗೂ 2 ಸಿಕ್ಸರ್ ಬಾರಿಸಿ ಅಜೇಯ 125 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.




