ಸೋಲಿನ ನೋವಲ್ಲೂ ಓಡಿಬಂದ ಪಾಕ್ ಕ್ರಿಕೆಟಿಗನಿಗೆ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ
Virat Kohli: ಪಾಕಿಸ್ತಾನದಲ್ಲೂ ವಿರಾಟ್ ಕೊಹ್ಲಿಗೆ ಅಪಾರ ಅಭಿಮಾನಿಗಳಿದ್ದು, ಅದರಲ್ಲೂ ಪಾಕ್ ತಂಡದಲ್ಲೇ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿರುವುದು ವಿಶೇಷ.
India vs Pakistan: ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗಲೆಲ್ಲಾ ರಣರೋಚಕ ಪೈಪೋಟಿ ಕಂಡು ಬರುತ್ತದೆ. ಅದರಲ್ಲೂ ಕೆಲವೊಮ್ಮೆ ಈ ಜಿದ್ದಾಜಿದ್ದಿ ಕೈ ಕೈ ಮಿಲಾಯಿಸುವ ಹಂತಕ್ಕೆ ಕೂಡ ಹೋಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಹೋರಾಟದ ಮನೋಭಾವವಿದ್ದರೂ, ಮೈದಾನದ ಹೊರಗೆ ಆತ್ಮೀಯತೆಯಿಂದ ಕಾಣ ಸಿಗುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ವಿರಾಟ್ ಕೊಹ್ಲಿಯ ಒಂದಷ್ಟು ಫೋಟೋಗಳು ವೈರಲ್ ಆಗಿತ್ತು. ಅಷ್ಟೇ ಅಲ್ಲದೆ ಗಾಯಗೊಂಡಿದ್ದ ಶಾಹೀನ್ ಅಫ್ರಿದಿಯನ್ನು ಟೀಮ್ ಇಂಡಿಯಾ ಆಟಗಾರರು ಭೇಟಿಯಾದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದು ಭಾರತ-ಪಾಕ್ ನಡುವಣ ಪಂದ್ಯದ ಬಳಿಕ ನಡೆದ ಸನ್ನಿವೇಶ ಎಂಬುದಷ್ಟೇ ವ್ಯತ್ಯಾಸ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕ್ ವಿರುದ್ದ ರೋಚಕ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಡ್ರೆಸ್ಸಿಂಗ್ ರೂಮ್ನತ್ತ ಹೆಜ್ಜೆ ಹಾಕಿದ್ದರು. ಆದರೆ ಅತ್ತ ಕಡೆಯಿಂದ ಪಾಕ್ ತಂಡದ ವೇಗಿ ಹ್ಯಾರಿಸ್ ರೌಫ್ ವಿರಾಟ್ ಕೊಹ್ಲಿಯ ಬಳಿ ಓಡಿ ಬಂದಿದ್ದಾರೆ. ಅಷ್ಟೇ ಅಲ್ಲದೆ ಕಿಂಗ್ ಕೊಹ್ಲಿಯ ಜೆರ್ಸಿಯನ್ನು ಕೇಳಿದ್ದಾರೆ.
ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಜೆರ್ಸಿಗೆ ಆಟೋಗ್ರಾಫ್ ಹಾಕುವ ಮೂಲಕ ಪಾಕ್ ಕ್ರಿಕೆಟಿಗನಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕೆಲವೊತ್ತು ಕುಶಲೋಪರಿ ಕೂಡ ನಡೆಸಿದರು. ಇದೀಗ ಈ ಆಟಗಾರರ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದಲ್ಲೂ ವಿರಾಟ್ ಕೊಹ್ಲಿಗೆ ಅಪಾರ ಅಭಿಮಾನಿಗಳಿದ್ದು, ಅದರಲ್ಲೂ ಪಾಕ್ ತಂಡದಲ್ಲೇ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿರುವುದು ವಿಶೇಷ. ಇದಕ್ಕೆ ಸಾಕ್ಷಿಯೇ ಪಂದ್ಯ ಸೋತ ನೋವಿನಲ್ಲೂ ಹ್ಯಾರಿಸ್ ರೌಫ್ ಓಡಿ ಬಂದು ವಿರಾಟ್ ಕೊಹ್ಲಿಯ ಸಹಿಯೊಂದಿಗೆ ಜೆರ್ಸಿಯನ್ನು ಪಡೆಯುತ್ತಿರುವುದು. ಇದೀಗ ಈ ವಿಡಿಯೋಗೆ ಹ್ಯಾರಿಸ್ ರೌಫ್ ಅಭಿಮಾನಿಗಳು ಹಾಗೂ ಕಿಂಗ್ ಕೊಹ್ಲಿ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.