Virat Kohli: ಕೋಪಂ ತಾಪಂ… ಔಟಾದ ಬಳಿಕ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ

|

Updated on: Oct 27, 2024 | 8:56 AM

India vs New Zealand: ಬೆಂಗಳೂರಿನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಸೋಲನುಭವಿಸಿದ್ದ ಭಾರತ ತಂಡವು ಇದೀಗ, ಪುಣೆ ಟೆಸ್ಟ್​ನಲ್ಲಿ 113 ರನ್​ಗಳಿಂದ ಪರಾಜಯಗೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ನ್ಯೂಝಿಲೆಂಡ್ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

Virat Kohli: ಕೋಪಂ ತಾಪಂ... ಔಟಾದ ಬಳಿಕ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
ವಿರಾಟ್ ಕೊಹ್ಲಿ
Follow us on

ಪುಣೆಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಈ ಸೋಲಿನ ನಡುವೆ ವಿರಾಟ್ ಕೊಹ್ಲಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ಕೂಡ ಔಟಾದ ಬಳಿಕ ಆಕ್ರೋಶಭರಿತರಾಗಿ ಡ್ರೆಸ್ಸಿಂಗ್ ರೂಮ್​ಗೆ ತೆರಳುತ್ತಿರುವ ವಿಡಿಯೋ. ಎಂಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 259 ರನ್​ ಕಲೆಹಾಕಿದರೆ, ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 156 ರನ್​ಗಳಿಗೆ ಆಲೌಟ್ ಆಗಿತ್ತು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಝಿಲೆಂಡ್ 255 ರನ್ ಹಾಕಿ, ಟೀಮ್ ಇಂಡಿಯಾಗೆ ಗೆಲ್ಲಲು 359 ರನ್​ಗಳ ಟಾರ್ಗೆಟ್ ನೀಡಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ (77) ಉತ್ತಮ ಆರಂಭ ಒದಗಿಸಿದ್ದರು. ಮತ್ತೊಂದೆಡೆ ರೋಹಿತ್ ಶರ್ಮಾ (8) ಹಾಗೂ ಶುಭ್​​ಮನ್ ಗಿಲ್ (23) ಬೇಗನೆ ಔಟ್ ಆಗಿದ್ದರಿಂದ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಸ್ಯಾಂಟ್ನರ್ ಎಸೆದ 30ನೇ ಓವರ್​ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಎಲ್​ಬಿಡಬ್ಲ್ಯೂ ಆದರು.

ಈ ತೀರ್ಪಿನ ವಿರುದ್ಧ ವಿರಾಟ್ ಕೊಹ್ಲಿ ಡಿಆರ್​ಎಸ್ ತೆಗೆದುಕೊಂಡರೂ, ಫೀಲ್ಡ್ ಅಂಪೈರ್ ಕಾಲ್ ಔಟ್ ಆಗಿದ್ದರಿಂದ ಮೂರನೇ ಅಂಪೈರ್ ಸಹ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಕೋಪಗೊಂಡ ವಿರಾಟ್ ಕೊಹ್ಲಿ ಭಾರದ ಹೆಜ್ಜೆಯೊಂದಿಗೆ ಪೆವಿಲಿಯನ್​ಗೆ ಮರಳಿದ್ದರು.

ಪೆವಿಲಿಯನ್‌ಗೆ ಹಿಂತಿರುಗುವ ಸಮಯದಲ್ಲಿ ತಮ್ಮ ಶಾಂತತೆಯನ್ನು ಕಳೆದುಕೊಂಡ ವಿರಾಟ್ ಕೊಹ್ಲಿ ಐಸ್ ಕಂಟೇನರ್‌ಗೆ ತಮ್ಮ ಬ್ಯಾಟ್​ನಿಂದ ಹೊಡೆದಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಈ ಆಕ್ರೋಶಭರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ವಿಡಿಯೋ:

ಇನ್ನು ಈ ಪಂದ್ಯದಲ್ಲಿ 359 ರನ್​ಗಳನ್ನು ಬೆನ್ನತ್ತಿದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 245 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ ತಂಡವು 113 ರನ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ರಿಷರ್ಭ ಪಂತ್ (ವಿಕೆಟ್ ಕೀಪರ್), ಸರ್ಫರಾಝ್ ಖಾನ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಆಕಾಶ್ ದೀಪ್.

ಇದನ್ನೂ ಓದಿ: 4 ಓವರ್​ಗಳಲ್ಲಿ 93 ರನ್​ಗಳು… 7 ರನ್​ಗಳಿಂದ ಬೌಲರ್​ಗೆ ಶತಕ ಮಿಸ್..!

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನರ್, ಅಜಾಝ್ ಪಟೇಲ್, ವಿಲಿಯಂ ಒರೋಕ್.

Published On - 8:53 am, Sun, 27 October 24