Virat Kohli: ಹೊಸ ಮೊಬೈಲ್ ಕಳೆದುಕೊಂಡ ವಿರಾಟ್ ಕೊಹ್ಲಿ: ನಿಮಗೆ ಸಿಕ್ಕಿದ್ಯಾ?
India vs Australia 1st Test: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿ ವರ್ಷಗಳೇ ಕಳೆದಿವೆ. 2019 ರಲ್ಲಿ ಬಾಂಗ್ಲಾದೇಶ್ ವಿರುದ್ಧ ಕೊನೆಯ ಬಾರಿ ಸೆಂಚುರಿ ಸಿಡಿಸಿದ್ದ ಕೊಹ್ಲಿ ಇದೀಗ ಭರ್ಜರಿ ಫಾರ್ಮ್ನಲ್ಲಿದ್ದಾರೆ.
India vs Australia 1st Test: ಫೆಬ್ರವರಿ 9 ರಿಂದ ಭಾರತ-ಆಸ್ಟ್ರೇಲಿಯಾ (IND vs AUS) ನಡುವಣ ಟೆಸ್ಟ್ ಸರಣಿಯು ಪ್ರಾರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಉಭಯ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿವೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿರುವುದಾಗಿ ಟ್ವೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ನನ್ನ ಹೊಸ ಫೋನ್ ಕಳೆದುಹೋಗಿದೆ. ಅದನ್ನು ಇದುವರೆಗೂ ಅನ್ ಬಾಕ್ಸ್ ಮಾಡಿಲ್ಲ. ನಿಮಗೆ ಇಂತಹ ಅನುಭವ ಆಗಿದ್ಯಾ ಎಂದು ಟ್ವಿಟರ್ನಲ್ಲಿ ಕೊಹ್ಲಿ ಪ್ರಶ್ನಿಸಿದ್ದಾರೆ.
ಇನ್ನು ಕೂಡ ಓಪನ್ ಮಾಡದ ಹೊಸ ಮೊಬೈಲ್ ಫೋನ್ ಕಳೆದುಕೊಂಡರೆ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ. ನಿಮ್ಮಲ್ಲಿ ಯಾರಿಗಾದರೂ ಹೀಗೆ ಆಗಿದ್ಯಾ? ಎಂದು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದೀಗ ಕಿಂಗ್ ಕೊಹ್ಲಿಯ ಈ ಟ್ವೀಟ್ಗೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಕೆಲವರು ತಮ್ಮ ಗೆಳೆಯರನ್ನು ಟ್ಯಾಗ್ ಮಾಡಿ ನಿಮಗೆ ವಿರಾಟ್ ಕೊಹ್ಲಿ ಮೊಬೈಲ್ ಸಿಕ್ಕಿದ್ಯಾ? ಎಂದು ಕಿಚಾಯಿಸಿದರೆ, ಮತ್ತೆ ಕೆಲವರು ನಾವು ಮೊಬೈಲ್ ಕೊಡಿಸ್ತೀನಿ, ಚಿಂತೆ ಮಾಡಬೇಡಿ ಎಂದಿದ್ದಾರೆ.
Nothing beats the sad feeling of losing your new phone without even unboxing it ☹️ Has anyone seen it?
— Virat Kohli (@imVkohli) February 7, 2023
ಇನ್ನು ಕೆಲವರು ಇದು ಯಾವುದೋ ಜಾಹೀರಾತಿನ ಪ್ರಚಾರದ ಮುನ್ನುಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಕಿಂಗ್ ಕೊಹ್ಲಿಯ ಒಂದು ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದರ ಜೊತೆಗೆ ಮೊಬೈಲ್ ನಿಮಗೆ ಸಿಕ್ಕಿದ್ಯಾ ಎಂಬ ಪ್ರಶ್ನೆಗಳನ್ನು ಕೂಡ ತೇಲಿ ಬಿಡಲಾಗುತ್ತಿರುವುದು ವಿಶೇಷ.
ಶತಕದ ನಿರೀಕ್ಷೆಯಲ್ಲಿ ಕಿಂಗ್ ಕೊಹ್ಲಿ:
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿ ವರ್ಷಗಳೇ ಕಳೆದಿವೆ. 2019 ರಲ್ಲಿ ಬಾಂಗ್ಲಾದೇಶ್ ವಿರುದ್ಧ ಕೊನೆಯ ಬಾರಿ ಸೆಂಚುರಿ ಸಿಡಿಸಿದ್ದ ಕೊಹ್ಲಿ ಇದೀಗ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇದಕ್ಕೆ ಸಾಕ್ಷಿಯೇ ಇತ್ತೀಚಿನ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸಿರುವುದು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ನಿಂದ ಶತಕವನ್ನು ನಿರೀಕ್ಷಿಸಲಾಗುತ್ತಿದೆ.
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:
- ಫೆಬ್ರವರಿ 9 ರಿಂದ 13- ಮೊದಲ ಟೆಸ್ಟ್ ಪಂದ್ಯ (ವಿದರ್ಭ ಕ್ರಿಕೆಟ್ ಸ್ಟೇಡಿಯಂ)
- ಫೆಬ್ರವರಿ 17 ರಿಂದ 21- ಎರಡನೇ ಟೆಸ್ಟ್ ಪಂದ್ಯ (ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ, ದೆಹಲಿ)
- ಮಾರ್ಚ್ 1 ರಿಂದ 5- ಮೂರನೇ ಟೆಸ್ಟ್ ಪಂದ್ಯ (ಧರ್ಮಶಾಲ ಕ್ರಿಕೆಟ್ ಸ್ಟೇಡಿಯಂ, ಹಿಮಾಚಲ್ ಪ್ರದೇಶ್)
- ಮಾರ್ಚ್ 9 ರಿಂದ 13- ನಾಲ್ಕನೇ ಟೆಸ್ಟ್ ಪಂದ್ಯ (ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್)
ಮೊದಲೆರಡು ಟೆಸ್ಟ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.