AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಕೊಹ್ಲಿ ರೂಮ್​ ಮೇಟ್, ಆದ್ರೆ ನಂಗೆ ಚಾನ್ಸ್​ ಸಿಗ್ತಿರಲಿಲ್ಲ: ಕಣ್ಣೀರು ಹಾಕಿದ RCB ಆಟಗಾರ

IPL 2024 RCB: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ವಪ್ನಿಲ್ ಸಿಂಗ್ ಅವರನ್ನು 20 ಲಕ್ಷ ರೂ.ಗೆ ಖರೀದಿಸಿತು. ವಿಶೇಷ ಎಂದರೆ ಸ್ವಪ್ನಿಲ್ ಸಿಂಗ್ ಕಣಕ್ಕಿಳಿದ ಕೊನೆಯ ಆರು ಮ್ಯಾಚ್​ಗಳಲ್ಲೂ ಆರ್​ಸಿಬಿ ಗೆಲುವು ದಾಖಲಿಸಿದೆ. ಹೀಗಾಗಿ ಎಡಗೈ ಸ್ಪಿನ್ನರ್ ಆರ್​ಸಿಬಿ ತಂಡದ ಲಕ್ಕಿ ಚಾರ್ಮ್ ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ.

ನಾನು ಕೊಹ್ಲಿ ರೂಮ್​ ಮೇಟ್, ಆದ್ರೆ ನಂಗೆ ಚಾನ್ಸ್​ ಸಿಗ್ತಿರಲಿಲ್ಲ: ಕಣ್ಣೀರು ಹಾಕಿದ RCB ಆಟಗಾರ
Swapnil Singh
ಝಾಹಿರ್ ಯೂಸುಫ್
|

Updated on:May 22, 2024 | 11:45 AM

Share

ಸ್ವಪ್ನಿಲ್ ಸಿಂಗ್… ಈ ಹೆಸರು ಇದೀಗ ಆರ್​ಸಿಬಿ ಅಭಿಮಾನಿಗಳಿಗೆ ಚಿರಪರಿಚಿತ. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಆದರೆ ಯಾವಾಗ ಸ್ವಪ್ನಿಲ್ ಸಿಂಗ್ ಕಣಕ್ಕಿಳಿದರೋ ಅಲ್ಲಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲಿನ ರುಚಿ ನೋಡಿಲ್ಲ. ಹೀಗಾಗಿಯೇ ಸ್ವಪ್ನಿಲ್ ಸಿಂಗ್ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಲಕ್ಕಿ ಚಾರ್ಮ್​ ಆಗಿ ಬದಲಾಗಿದ್ದಾರೆ.

ಆದರೆ ಸ್ವಪ್ನಿಲ್ ಸಿಂಗ್ ಅವರ ಆರ್​ಸಿಬಿ ಎಂಟ್ರಿಯೇ ಬಲು ರೋಚಕ. ಏಕೆಂದರೆ 2008 ರಿಂದ ಐಪಿಎಲ್​ನಲ್ಲಿದ್ದರೂ ಎಡಗೈ ಸ್ಪಿನ್ನರ್ ಈವರೆಗೆ ಆಡಿರುವುದು ಕೇವಲ 13 ಮ್ಯಾಚ್​ಗಳನ್ನು ಮಾತ್ರ.

ವಿಶೇಷ ಎಂದರೆ ಇದೇ ಸ್ವಪ್ನಿಲ್ ಸಿಂಗ್ ವಿರಾಟ್ ಕೊಹ್ಲಿ ಅವರ ರೂಮ್ ಮೇಟ್ ಆಗಿದ್ದರು. ಭಾರತ ತಂಡವು ಅಂಡರ್ 19 ವಿಶ್ವಕಪ್ ಗೆದ್ದಾಗ ಸ್ವಪ್ನಿಲ್ ಕೂಡ ಟೀಮ್ ಇಂಡಿಯಾದ ಭಾಗವಾಗಿದ್ದರು. ಇದಕ್ಕೂ ಮುನ್ನ ಅಂಡರ್ 15 ನಲ್ಲೂ ಕೊಹ್ಲಿ ಜೊತೆ ಸ್ವಪ್ನಿಲ್ ಕೂಡ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ವಿರಾಟ್ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡ ಸ್ವಪ್ನಿಲ್, ತಾನು ವಿರಾಟ್‌ನೊಂದಿಗೆ U15 ಮತ್ತು U19 ಮಟ್ಟದ ಕ್ರಿಕೆಟ್ ಆಡಿದ್ದೇನೆ. ಶ್ರೀಲಂಕಾ ಮತ್ತು ಮಲೇಷ್ಯಾ ಪ್ರವಾಸಗಳಲ್ಲಿ ನಾನು ಮತ್ತು ಅವರು ರೂಮ್‌ಮೇಟ್ ಆಗಿದ್ದೆವು. ಇದೀಗ ಹಲವು ವರ್ಷಗಳ ಬಳಿಕ ಕೊಹ್ಲಿ ಮತ್ತು ನಾನು ಜೊತೆಯಾಗಿ ಆರ್​ಸಿಬಿ ಆಡುತ್ತಿದ್ದೇವೆ. ಈ ವೇಳೆ ನಾವಿಬ್ಬರೂ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದೇವೆ ಎಂದು ತಿಳಿಸಿದ್ದಾರೆ.

ಐಪಿಎಲ್ ಕೆರಿಯರ್:

2008 ರಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿಗೆ ಆಯ್ಕೆಯಾದರೆ, ಸ್ವಪ್ನಿಲ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದಾದ ಬಳಿಕ ಐಪಿಎಲ್​ನಿಂದ ಹೊರಬಿದ್ದ ಸ್ವಪ್ನಿಲ್ ಸಿಂಗ್ ಮೊದಲ ಪಂದ್ಯವಾಡಿದ್ದು 2017 ರಲ್ಲಿ. ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದ ಸ್ವಪ್ನಿಲ್ ಮೊದಲ ಮ್ಯಾಚ್​ನಲ್ಲೇ ಮಹೇಂದ್ರ ಸಿಂಗ್ ಧೋನಿಯ ಅವರ ವಿಕೆಟ್ ಪಡೆದಿದ್ದರು.

ಈ ನೆನಪುಗಳನ್ನು ಮೆಲುಕು ಹಾಕಿರುವ ಸ್ವಪ್ನಿಲ್, 2008 ರಲ್ಲಿ ಮುಂಬೈ ಇಂಡಿಯನ್ಸ್‌ಗೆ ನನ್ನನ್ನು ಆಯ್ಕೆ ಮಾಡಲಾಯಿತು. ಸಚಿನ್ ನಮಗೆಲ್ಲ ದೇವರಂತೆ. ನಾನು ಅವರನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಮೊದಲ ಬಾರಿಗೆ ಸಂವಾದ ನಡೆಸಿದಾಗ, ಅದ್ಭುತವೆನಿಸಿತು.

ಇನ್ನು ನಾನು ಮೊದಲ ಐಪಿಎಲ್ ಪಂದ್ಯವಾಡಿದ್ದು ಗ್ಲೆನ್ ಮ್ಯಾಕ್ಸ್​ವೆಲ್ ನಾಯಕತ್ವದಲ್ಲಿ. 2017 ರಲ್ಲಿ ಮ್ಯಾಕ್ಸ್​ವೆಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದಾಗ ನಾನು ಮೊದಲ ಪಂದ್ಯವಾಡಿದ್ದೆ. ಈ ಪಂದ್ಯದಲ್ಲಿ ನಾನು ಧೋನಿ ವಿಕೆಟ್ ಕಬಳಿಸಿದ್ದೆ ಎಂದು ಸ್ವಪ್ನಿಲ್ ಹೇಳಿದ್ದಾರೆ.

ಇದಾಗ್ಯೂ ದೇಶೀಯ ಅಂಗಳಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲ. 2019 ರಲ್ಲಿ ಅತ್ಯುತ್ತಮ ಆಲ್​ರೌಂಡರ್ ಪ್ರದರ್ಶನ ನೀಡಿದರೂ, 2020 ರಲ್ಲಿ ಬರೋಡಾ ತಂಡದಿಂದ ನನ್ನನ್ನು ತೆಗೆದು ಹಾಕಿದ್ದರು. ಇದರಿಂದ ಮುಂದೇನು ಮಾಡಬೇಕೆಂಬುದೇ ತೋಚಿರಲಿಲ್ಲ.

ನೆರವಿಗೆ ನಿಂತ ಇರ್ಫಾನ್ ಪಠಾಣ್:

ಬರೋಡಾ ತಂಡದಿಂದ ನನ್ನನ್ನು ಕೈ ಬಿಟ್ಟಾಗ ನೆರವಿಗೆ ನಿಂತದ್ದು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್. ಇರ್ಫಾನ್ ಅವರು ನನ್ನ ವೃತ್ತಿಜೀವನವನ್ನು ಮುಂದುವರಿಸಲು ಸಹಾಯ ಮಾಡಿದರು. ಅಲ್ಲದೆ ಉತ್ತರಾಖಂಡ ತಂಡದಲ್ಲಿ ಅವಕಾಶ ಕಲ್ಪಿಸಿಕೊಡುವಲ್ಲಿ ನೆರವಾದರು.

ಲಕ್ನೋ ತಂಡಕ್ಕೆ ನೆಟ್ ಬೌಲರ್:

ನಾನು ದೇಶೀಯ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಐಪಿಎಲ್​ನಲ್ಲಿ ಚಾನ್ಸ್ ಸಿಗುತ್ತಿರಲಿಲ್ಲ. ಆದರೆ ಕಳೆದ ವರ್ಷ ಬರೋಡಾದ ಆಲ್‌ರೌಂಡರ್ ದೀಪಕ್ ಹೂಡಾ ನನಗೆ ಕರೆ ಮಾಡಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನೆಟ್ ಬೌಲರ್ ಆಗ್ತೀಯಾ ಎಂದು ಕೇಳಿದ್ದರು. ನಾನು ಸರಿಯಾಗಿಯೇ ಬೈದೆ. ಇದಾದ ಬಳಿಕ ಮತ್ತೊಮ್ಮೆ ಕರೆ ಮಾಡಿದ ಹೂಡಾ ಇನ್ನೊಮ್ಮೆ ಯೋಚಿಸಿ ನಿರ್ಧಾರ ತಿಳಿಸುವಂತೆ ಹೇಳಿದರು.

ಈ ವೇಳೆ ನಾನು ಮತ್ತೆ ಇರ್ಫಾನ್ ಪಠಾಣ್​ಗೆ ಕರೆ ಮಾಡಿದೆ. ಅವರು ನೆಟ್ ಬೌಲರ್ ಆಗಿ ಹೋಗುವಂತೆ ಸೂಚಿಸಿದರು. ಅದರಂತೆ ನಾನು ಒಲ್ಲದ ಮನಸ್ಸಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡೆ.

ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿ ಆ್ಯಂಡಿ ಫ್ಲವರ್ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಎಲ್​ಎಸ್​ಜಿ ತಂಡದ ಸ್ಪಿನ್ ಕೋಚ್ ಆಗಿದ್ದ ನರೇಂದ್ರ ಹಿರ್ವಾನಿ ಅವರು ನನ್ನ ಬೌಲಿಂಗ್‌ನಿಂದ ಪ್ರಭಾವಿತರಾದರು. ಅವರ ಗರಡಿಯಲ್ಲಿ ಒಂದಷ್ಟು ಕಲಿತೆ.

ಇತ್ತ ಆ್ಯಂಡಿ ಫ್ಲವರ್ ಕೂಡ ನನ್ನ ಬೌಲಿಂಗ್​ ಅನ್ನು ಮೆಚ್ಚಿಕೊಂಡಿದ್ದರು. ಹೀಗಾಗಿ ನಾನು ಬ್ಯಾಟಿಂಗ್ ಕೂಡ ಮಾಡಬಲ್ಲೆ ಎಂದು ಅವರಿಗೆ ತಿಳಿಸಿದ್ದೆ. ಅಲ್ಲದೆ ನನ್ನ ಬ್ಯಾಟಿಂಗ್ ಅನ್ನು ನೋಡುವಂತೆ ಆ್ಯಂಡಿ ಅವರಲ್ಲಿ ಮನವಿ ಮಾಡಿದೆ. ಅವರು ನನಗೆ ಅವಕಾಶ ಕಲ್ಪಿಸಿದರು.

ಆ್ಯಂಡಿ ಫ್ಲವರ್ ಅವರಂತಹ ಒಬ್ಬ ಕೋಚ್ ಮಾತ್ರ ಒಬ್ಬ ನೆಟ್ ಬೌಲರ್​ಗೆ ತನ್ನ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶ ಕೊಡುತ್ತಾರೆ ಎಂಬುದು ನನ್ನ ಭಾವನೆ. ಬೇರೆ ಯಾರೂ ಕೂಡ ಇಂತಹ ಕೆಲಸ ಮಾಡಲ್ಲ. ಹೀಗಾಗಿಯೇ ನಾನು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯುವಾಗ ನನಗೆ ಐಪಿಎಲ್​ನಲ್ಲಿ ಒಂದೇ ಒಂದು ಚಾನ್ಸ್ ನೀಡುವಂತೆ ಅವರಲ್ಲಿ ಮನವಿ ಮಾಡಿದ್ದೆ. ಅವರು ನೋಡೋಣ ಎಂದಷ್ಟೇ ಉತ್ತರಿಸಿದ್ದರು.

ಹೀಗಾಗಿ ಈ ಬಾರಿಯ ಐಪಿಎಲ್​ಗೂ ಮುನ್ನ ಆ್ಯಂಡಿ ಫ್ಲವರ್ ನನ್ನನ್ನು ಆರ್​ಸಿಬಿ ಕ್ಯಾಂಪ್​ಗೆ ಕರೆಸಿಕೊಂಡಿದ್ದರು. ಇದಾಗ್ಯೂ ನನಗೆ ತಂಡದಲ್ಲಿ ಚಾನ್ಸ್ ಸಿಗುತ್ತದೆ ಎಂಬ ಭರವಸೆ ಇರಲಿಲ್ಲ. ಏಕೆಂದರೆ ಕ್ಯಾಂಪ್​ನಲ್ಲಿ ನಾನೇನು ಅತ್ಯುತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಕೆಟ್ಟ ಪ್ರದರ್ಶನವನ್ನೂ ಮುಂದಿಟ್ಟಿರಲಿಲ್ಲ.

ಇದಾದ ಬಳಿಕ ನಾನು ರಣಜಿ ಟ್ರೋಫಿ ಆಡಲು ತೆರಳಿದ್ದೆ. ಐಪಿಎಲ್ ಹರಾಜು ನಡೆಯುವಾಗ ರಣಜಿ ಪಂದ್ಯಕ್ಕಾಗಿ ಡೆಹ್ರಾಡೂನ್​ಗೆ ಹೋಗುತ್ತಿದ್ದೆ. ಆದರೆ ಮೊದಲ ಸುತ್ತುಗಳಲ್ಲಿ ನನ್ನನ್ನು ಯಾರು ಕೂಡ ಖರೀದಿಸಿರಲಿಲ್ಲ. ಹೀಗಾಗಿ ನನ್ನ ಐಪಿಎಲ್ ಕೆರಿಯರ್ ಖತಂ ಎಂದೇ ಭಾವಿಸಿದ್ದೆ.

ಅಲ್ಲದೆ ಈ ಸಲದ ರಣಜಿ ಟೂರ್ನಿಯೊಂದಿಗೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಬೇಕೆಂದು ನಿರ್ಧರಿಸಿದ್ದೆ. ಏಕೆಂದರೆ ಕ್ರಿಕೆಟ್​ನಿಂದ ಜೀವನ ಕಟ್ಟಲಾಗುತ್ತಿಲ್ಲ ಎಂದಾದರೆ, ಬೇರೆ ದಾರಿ ನೋಡಲೇಬೇಕಾಗುತ್ತದೆ. ಹೀಗಾಗಿ ಈ ವರ್ಷ ಅಥವಾ ಮುಂದಿನ ವರ್ಷ ಕ್ರಿಕೆಟ್​ಗೆ ವಿದಾಯ ಹೇಳಬೇಕೆಂದು ನಿರ್ಧರಿಸಿದೆ.

ಆದರೆ ಸಡನ್ ಆಗಿ ಕುಟುಂಬಸ್ಥರಿಂದ ಫೋನ್ ಬಂತು. ಕೊನೆಯ ಸುತ್ತಿನಲ್ಲಿ ಆರ್​ಸಿಬಿ ನನ್ನನ್ನು ಖರೀದಿಸಿದ್ದಾರೆ ಎಂದು ತಿಳಿಸಿದರು. ನಿಜವಾಗಲೂ ಇದನ್ನು ಕೇಳಿ ನನಗೆ ಕಣ್ಣೀರು ಬಂತು…ನನ್ನ ಈ ಎಲ್ಲಾ ಹಾದಿಗಳನ್ನು ನೆನಪಿಸಿಕೊಂಡರೆ ಈಗಲೂ ತುಂಬಾ ಭಾವುಕನಾಗುತ್ತೇನೆ ಎಂದು ಇದೇ ವೇಳೆ ಸ್ವಪ್ನಿಲ್ ಸಿಂಗ್ ಕಣ್ಣೀರು ಹಾಕಿದರು.

ಇದನ್ನೂ ಓದಿ: IPL 2024: ಈ ಸಲ RCB ಕಪ್ ಗೆದ್ದೇ ಗೆಲ್ಲುತ್ತೆ ಎಂದ ವಿಜಯ ಮಲ್ಯ..!

ಈ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತಿರುವ ಸ್ವಪ್ನಿಲ್ ಸಿಂಗ್ ಈ ಬಾರಿಯ ಐಪಿಎಲ್​ನಲ್ಲಿ 6 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪಾಲಿನ ಲಕ್ಕಿ ಚಾರ್ಮ್ ಆಗಿ ಬದಲಾಗಿದ್ದಾರೆ. ಈ ಲಕ್ಕಿ ಚಾರ್ಮ್​ನೊಂದಿಗೆ ಈ ಬಾರಿ ಆರ್​ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದು ಕೊಡುವ ವಿಶ್ವಾಸದಲ್ಲಿದ್ದಾರೆ.

Published On - 11:45 am, Wed, 22 May 24