IPL 2025 Final: ನನ್ನ ಹೃದಯ, ನನ್ನ ಆತ್ಮ…; ಆರ್​​ಸಿಬಿ ಗೆದ್ದ ಬಳಿಕ ಭಾವುಕರಾದ ಕೊಹ್ಲಿ ಹೇಳಿದ್ದೇನು?

RCB Wins IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17 ವರ್ಷಗಳ ಟ್ರೋಫಿ ಬರವನ್ನು ನೀಗಿಸಿಕೊಂಡಿದೆ. ಐಪಿಎಲ್ 2025 ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಈ ಗೆಲುವು ನನಗೆ ಮತ್ತು ಅಭಿಮಾನಿಗಳಿಗೆ ಅತ್ಯಂತ ಭಾವುಕ ಕ್ಷಣವಾಗಿತ್ತು. ತಂಡದ ಗೆಲುವಿಗೆ ಎಬಿ ಡಿವಿಲಿಯರ್ಸ್ ಅವರ ಕೊಡುಗೆಯೂ ಇದೆ ಎಂದು ಕೊಹ್ಲಿ ಹೇಳಿದರು.

IPL 2025 Final: ನನ್ನ ಹೃದಯ, ನನ್ನ ಆತ್ಮ...; ಆರ್​​ಸಿಬಿ ಗೆದ್ದ ಬಳಿಕ ಭಾವುಕರಾದ ಕೊಹ್ಲಿ ಹೇಳಿದ್ದೇನು?
Virat Kohli

Updated on: Jun 04, 2025 | 12:18 AM

17 ವರ್ಷಗಳಿಂದ ಐಪಿಎಲ್ (IPL 2025) ಟ್ರೋಫಿಯ ಬರ ಎದುರಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ತನ್ನ ಬರವನ್ನು ನೀಗಿಸಿಕೊಂಡಿದೆ. ಮೇ 3 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂತಿಮವಾಗಿ ಐಪಿಎಲ್‌ಗೆ ಹೊಸ ಚಾಂಪಿಯನ್ ಸಿಕ್ಕಿತು. ಪಂಜಾಬ್ ಕಿಂಗ್ಸ್ ಕೂಡ ಉತ್ತಮವಾಗಿ ಆಡಿದರೂ ಆರ್‌ಸಿಬಿ ಸಾಂಘೀಕ ದಾಳಿಯ ಮುಂದೆ ಮಂಡಿಯೂರಿತು. 17 ವರ್ಷಗಳ ಟ್ರೋಫಿ ಬರವನ್ನು ನೀಗಿಸಿಕೊಂಡ ಬಳಿಕ ಭಾವುಕರಾದ ವಿರಾಟ್ ಕೊಹ್ಲಿ (Virat Kohli) ಈ ಗೆಲುವನ್ನು ಅದ್ಭುತ ಎಂದು ಬಣ್ಣಿಸಿದರು.

ವಿರಾಟ್ ಕೊಹ್ಲಿ ಹೇಳಿದ್ದೇನು?

ಕರ್ನಾಟಕದ ದತ್ತು ಪುತ್ರ ವಿರಾಟ್ ಕೊಹ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಅಂದರೆ ಕಳೆದ 18 ವರ್ಷಗಳಿಂದ ಆರ್‌ಸಿಬಿಯ ಭಾಗವಾಗಿದ್ದಾರೆ. ಆದರೆ ಇಲ್ಲಿಯವರೆಗೆ ಅವರು ಈ ತಂಡಕ್ಕಾಗಿ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ, 2025 ರ ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿಯ ಕಾಯುವಿಕೆಗೆ ತೆರೆ ಬಿದ್ದಿದೆ. ಈ ಗೆಲುವಿನ ನಂತರ ಭಾವುಕರಾಗಿ ಮಾತನಾಡಿದ ವಿರಾಟ್, ‘ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವಾಗಿತ್ತೋ, ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. ನಾನು ನನ್ನ ಯೌವನ, ನನ್ನ ಅತ್ಯುತ್ತಮ ಮತ್ತು ನನ್ನ ಅನುಭವವನ್ನು ಈ ತಂಡಕ್ಕೆ ನೀಡಿದ್ದೇನೆ. ಪ್ರತಿ ಸೀಸನ್‌ನಲ್ಲಿ ಟ್ರೋಫಿ ಗೆಲ್ಲಲು ಪ್ರಯತ್ನಿಸಿದೆ, ನನ್ನ ಅತ್ಯುತ್ತಮವನ್ನು ನೀಡಿದೆ.

IPL 2025 Final: ಈ ಸಲ ಕಪ್ ನಮ್ದೇ….! ಫಲಿಸಿತು ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳ ಪ್ರಾರ್ಥನೆ

ಈ ದಿನ ಬರುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ, ಗೆದ್ದ ನಂತರ ನಾನು ಭಾವುಕನಾದೆ. ಎಬಿ ಡಿವಿಲಿಯರ್ಸ್ ಫ್ರಾಂಚೈಸಿಗಾಗಿ ಮಾಡಿದ್ದು ಅದ್ಭುತವಾಗಿದೆ. ಹೀಗಾಗಿ ನಾನು ಅವರಿಗೆ ಈ ಕಪ್ ನಮ್ಮದ್ದು ಮಾತ್ರವಲ್ಲ ಬದಲಿಗೆ ನಿಮ್ಮದೂ ಕೂಡ ಎಂದು ಹೇಳಿದೆ. ನಾಲ್ಕು ವರ್ಷಗಳ ಹಿಂದೆಯೇ ಡಿವಿಲಿಯರ್ಸ್ ಐಪಿಎಲ್​ನಿಂದ ನಿವೃತ್ತರಾಗಿದ್ದರೂ, ಅವರು ಫ್ರಾಂಚೈಸಿಯಲ್ಲಿ ಹೆಚ್ಚಿನ ಬಾರಿ ಪಿಒಟಿಎಂ ಆಗಿದ್ದಾರೆ. ಅವರು ವೇದಿಕೆಯ ಮೇಲೆ ಇದ್ದು ಕಪ್ ಎತ್ತಲು ಅರ್ಹರು. ಈ ಗೆಲುವು ಅವರಿಗೆ ದೊಡ್ಡ ಗೆಲುವು. ನನ್ನ ಹೃದಯ ಬೆಂಗಳೂರಿನೊಂದಿಗೆ ಇದೆ, ನನ್ನ ಆತ್ಮ ಬೆಂಗಳೂರಿನೊಂದಿಗೆ ಇದೆ. ನಾನು ದೊಡ್ಡ ಪಂದ್ಯಾವಳಿಗಳು ಮತ್ತು ಕ್ಷಣಗಳನ್ನು ಗೆಲ್ಲಲು ಬಯಸುತ್ತೇನೆ. ಈ ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:08 am, Wed, 4 June 25