IPL 2022: 19ನೇ ವಯಸ್ಸಿನಲ್ಲಿ ಶುರುವಾದ ಕನಸಿಗೆ 15 ವರ್ಷಗಳು..!

| Updated By: ಝಾಹಿರ್ ಯೂಸುಫ್

Updated on: May 28, 2022 | 11:30 AM

Virat Kohli: ಕಳೆದ 15 ಸೀಸನ್​ಗಳಲ್ಲಿ ಆರ್​ಸಿಬಿ ತಂಡ ಮೂರು ಬಾರಿ ಮಾತ್ರ ಫೈನಲ್​ಗೇರಿದೆ. ಈ ಮೂರು ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಆಡಿದ್ದರು ಎಂಬುದು ವಿಶೇಷ.

IPL 2022: 19ನೇ ವಯಸ್ಸಿನಲ್ಲಿ ಶುರುವಾದ ಕನಸಿಗೆ 15 ವರ್ಷಗಳು..!
Virat Kohli
Follow us on

19ನೇ ವಯಸ್ಸಿನಲ್ಲಿ ಐಪಿಎಲ್​ಗೆ ಪದಾರ್ಪಣೆ, ತಂಡದ ಪ್ರಮುಖ ಅಂಗ, 8 ವರ್ಷಗಳ ನಾಯಕತ್ವ, ಹಲವು ದಾಖಲೆಗಳು, ಐಪಿಎಲ್​ನ ಕಿಂಗ್…ಹೀಗೆ ಸಾಗುತ್ತೆ ವಿರಾಟ್ ಕೊಹ್ಲಿ (Virat Kohli) ಐಪಿಎಲ್​ ಜರ್ನಿ. ಅದರಲ್ಲೂ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ಪರ ಆಡಿದ ಮತ್ತೊಬ್ಬ ಆಟಗಾರನಿಲ್ಲ. ಕಳೆದ 15 ವರ್ಷಗಳಿಂದ ಆರ್​ಸಿಬಿ ಪರ ಆಡುತ್ತಿರುವ ಕೊಹ್ಲಿಯ ಕನಸು ಈ ಬಾರಿ ಕೂಡ ಕಮರಿದೆ. ಹೊಸ ನಾಯಕ, ಹೊಸ ತಂಡದೊಂದಿಗೆ ಐಪಿಎಲ್​ ಸೀಸನ್ 15 ಆರಂಭಿಸಿದ್ದ ಆರ್​ಸಿಬಿ 2ನೇ ಕ್ವಾಲಿಫೈಯರ್​ನಲ್ಲಿ ಸೋಲುವ ಮೂಲಕ 6 ವರ್ಷಗಳ ಬಳಿಕ ಮತ್ತೆ ಫೈನಲ್​ಗೇರುವ ಅವಕಾಶವನ್ನು ಕೈಚೆಲ್ಲಿಕೊಂಡಿದೆ.

ಇದರೊಂದಿಗೆ 19ನೇ ವಯಸ್ಸಿನಲ್ಲಿ ಶುರುವಾದ ವಿರಾಟ್ ಕೊಹ್ಲಿಯ ಟ್ರೋಫಿ ಗೆಲ್ಲುವ ಕನಸು ಕೂಡ ಮುಂದುವರೆದಿದೆ. ಕಳೆದ 15 ಸೀಸನ್​ಗಳಲ್ಲಿ ಆರ್​ಸಿಬಿ ತಂಡ ಮೂರು ಬಾರಿ ಮಾತ್ರ ಫೈನಲ್​ಗೇರಿದೆ. ಈ ಮೂರು ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಆಡಿದ್ದರು ಎಂಬುದು ವಿಶೇಷ. 2009 ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದ್ದ RCB ತಂಡ ಡೆಕ್ಕನ್ ಚಾರ್ಜರ್ಸ್ (ಈಗಿನ ಎಸ್​ಆರ್​ಹೆಚ್ ತಂಡ​)​ ವಿರುದ್ದದ ಪಂದ್ಯದಲ್ಲಿ ಸೋಲನುಭವಿಸಿತ್ತು. ಅಂದು ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಚಾರ್ಜರ್ಸ್​ ತಂಡವು 6 ವಿಕೆಟ್ ನಷ್ಟಕ್ಕೆ ಕೇವಲ 143 ರನ್​ ಕಲೆಹಾಕಿತು. ಈ ಸಾಧಾರಣ ಗುರಿ ಬೆನ್ನತ್ತಲು ವಿಫಲರಾದ ಆರ್​ಸಿಬಿ ಕೇವಲ 137 ರನ್​ಗಳಿಸಿ 6 ರನ್​ಗಳಿಂದ ಸೋಲೊಪ್ಪಿಕೊಂಡಿತು. ವಿಶೇಷ ಎಂದರೆ ಅಂದು ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿದ್ದ ರೋಹಿತ್ ಶರ್ಮಾ ಚೊಚ್ಚಲ ಬಾರಿ ಐಪಿಎಲ್ ಚಾಂಪಿಯನ್ ತಂಡದ ಭಾಗವಾಗಿದ್ದರು.

ಇದಾದ ಬಳಿಕ ಆರ್​ಸಿಬಿ ಮತ್ತೆ ಫೈನಲ್​ಗೆ ಎಂಟ್ರಿ ಕೊಟ್ಟಿದ್ದು 2011 ರಲ್ಲಿ. ಎಬಿಡಿ, ಕೊಹ್ಲಿ, ಗೇಲ್​ರಂತಹ ಬಲಿಷ್ಠ ಆಟಗಾರರನ್ನು ಒಳಗೊಂಡ ಆರ್​ಸಿಬಿ ಈ ಸಲ ಕಪ್​ ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಡೇನಿಯಲ್ ವೆಟ್ಟೋರಿ ನೇತೃತ್ವದಲ್ಲಿ ಕಣಕ್ಕಿಳಿದಿದ್ದ ಆರ್​ಸಿಬಿ ತಂಡವು ಅಂದು ಸಿಎಸ್​ಕೆ ವಿರುದ್ದ ಫೈನಲ್​ ಆಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ 5 ವಿಕೆಟ್​ ನಷ್ಟಕ್ಕೆ 205 ರನ್​ ಕಲೆಹಾಕಿದರೆ, ಈ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಆರ್​ಸಿಬಿ 147 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 58 ರನ್​ಗಳಿಂದ ಹೀನಾಯವಾಗಿ ಸೋಲನುಭವಿಸಿತು.

ಇದನ್ನೂ ಓದಿ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಆನಂತರ 2013 ರಲ್ಲಿ ಆರ್​ಸಿಬಿ ತಂಡದ ಸಾರಥ್ಯವನ್ನು ವಿರಾಟ್ ಕೊಹ್ಲಿಗೆ ವಹಿಸಲಾಯಿತು. ಯುವ ನಾಯಕನೊಂದಿಗೆ ಕಣಕ್ಕಿಳಿದಿದ್ದ ಆರ್​ಸಿಬಿ ತಂಡ ಫೈನಲ್​ ಪ್ರವೇಶಿಸಿದ್ದು ಮಾತ್ರ 2016 ರಲ್ಲಿ. ಅಂದು ಕೂಡ ತಂಡದ ಪ್ರಮುಖ ಅಂಗವಾಗಿ ಎಬಿಡಿ, ಕ್ರಿಸ್ ಗೇಲ್, ಕೆಎಲ್ ರಾಹುಲ್ ವಿರಾಟ್ ಕೊಹ್ಲಿಯೊಂದಿಗೆ ಕೈಜೋಡಿಸಿದ್ದರು. ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಆರ್​ಸಿಬಿ ಫೈನಲ್​ನಲ್ಲಿ ಎಸ್​ಆರ್​ಹೆಚ್​ ತಂಡವನ್ನು ಎದುರಿಸಿತ್ತು.

ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್​ ತಂಡವು 7 ವಿಕೆಟ್ ನಷ್ಟಕ್ಕೆ 208 ರನ್​​ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಆರ್​ಸಿಬಿ ಭರ್ಜರಿಯಾಗಿ ಚೇಸ್ ಮಾಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್​ಮನ್​ಗಳು ಕೈಕೊಟ್ಟಿದ್ದರಿಂದ ಆರ್​ಸಿಬಿ ಹೋರಾಟ 200 ರನ್​ಗೆ ಅಂತ್ಯಗೊಂಡಿತು. ಸುಲಭವಾಗಿ ಗೆಲ್ಲಬಹುದಾಗಿದ್ದ ಆ ಪಂದ್ಯದಲ್ಲಿ ಆರ್​ಸಿಬಿ ತಂಡವು 8 ರನ್​ಗಳಿಂದ ಸೋಲನುಭವಿಸಿತು. ಇದರೊಂದಿಗೆ ಮೂರು ಬಾರಿ ಫೈನಲ್​ ಆಡಿದರೂ ಕಪ್ ಗೆಲ್ಲುವ ವಿರಾಟ್ ಕೊಹ್ಲಿ ಕನಸು ಕೂಡ ಕೈತಪ್ಪಿತು.

ಇದಾದ ಬಳಿಕ ಆರ್​ಸಿಬಿ ತಂಡದ ಫೈನಲ್​ಗೆ ತಲುಪಿಲ್ಲ. ತಂಡಕ್ಕೆ ಅತಿರಥ ಮಹಾರಥ ಆಟಗಾರರು ಬಂದರೂ ಅಂತಿಮ ಹಣಾಹಣಿಗೆ ಪ್ರವೇಶಿಸುವಲ್ಲಿ ವಿಫಲವಾಗುತ್ತಾ ಬಂದಿದೆ. ಇದಾಗ್ಯೂ ಈ ಬಾರಿ ಹೊಸ ನಾಯಕ ಫಾಫ್ ಡುಪ್ಲೆಸಿಸ್​ ನೇತೃತ್ವದಲ್ಲಿ ಕಣಕ್ಕಿಳಿದಿದ್ದ ಆರ್​ಸಿಬಿ ಮೇಲೆ ನಿರೀಕ್ಷೆಗಳಿತ್ತು. ಇತ್ತ ವಿರಾಟ್ ಕೊಹ್ಲಿ ಕೂಡ ಮೊದಲ ಬಾರಿಗೆ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋತು ಫೈನಲ್​ಗೇರುವ ಅವಕಾಶವನ್ನು ಕೈಚೆಲ್ಲಿಕೊಂಡಿದೆ.

ಇದರೊಂದಿಗೆ 19ನೇ ವಯಸ್ಸಿನಲ್ಲಿ ಶುರುವಾದ ಆರ್​ಸಿಬಿಯೊಂದಿಗೆ ಕಪ್ ಗೆಲ್ಲುವ ವಿರಾಟ್ ಕೊಹ್ಲಿ ಅವರ ಕನಸು ಮುಂದುವರೆದಿದೆ. ವಿಶೇಷ ಎಂದರೆ ಕೊಹ್ಲಿಯ ಯೌವ್ವನದಲ್ಲಿ ಶುರುವಾದ ಈ ಕನಸಿಗೆ ಇದೀಗ 15 ವರ್ಷಗಳು ತುಂಬಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.