IPL 2022: RCB ಪರ ಸಿರಾಜ್ ಒಬ್ಬರೇ 500 ರನ್, ಕೊಹ್ಲಿ, ಮ್ಯಾಕ್ಸಿಗೂ ಸಾಧ್ಯವಾಗಿಲ್ಲ..!
IPL 2022 RR vs RCB: ಈ ಸಾಧಾರಣ ಸವಾಲು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದರು. ಪವರ್ಪ್ಲೇನಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಈ ಜೋಡಿ 6 ಓವರ್ಗಳಲ್ಲಿ 67 ರನ್ ಚಚ್ಚಿದ್ದರು.
IPL 2022 ರಲ್ಲಿ ಹೊಸ ತಂಡ, ಹೊಸ ನಾಯಕನೊಂದಿಗೆ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಿರೀಕ್ಷೆಗಳು ಈ ಬಾರಿ ಹುಸಿಯಾಗಿದೆ. ಬಲಿಷ್ಠ ಪಡೆ ಎಂಬ ಟ್ಯಾಗ್ ಲೈನ್ನೊಂದಿಗೆ ಕಾಣಿಸಿಕೊಂಡ ಆರ್ಸಿಬಿ ತಂಡವು ನಿರ್ಣಾಯಕ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ 6 ವರ್ಷಗಳ ಬಳಿಕ ಮತ್ತೆ ಫೈನಲ್ ಆಡುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ತಂಡವು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಆರಂಭದಲ್ಲೇ ವಿರಾಟ್ ಕೊಹ್ಲಿ (7) ಔಟಾದರೆ, ಇತ್ತ 27 ಎಸೆತಗಳಲ್ಲಿ 25 ರನ್ ಬಾರಿಸಿ ಡುಪ್ಲೆಸಿಸ್ ಸಹ ವಿಕೆಟ್ ಒಪ್ಪಿಸಿದರು. ಇನ್ನು ರಜತ್ ಪಾಟಿದಾರ್ (58) ಅವರ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು.
ಈ ಸಾಧಾರಣ ಸವಾಲು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದರು. ಪವರ್ಪ್ಲೇನಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಈ ಜೋಡಿ 6 ಓವರ್ಗಳಲ್ಲಿ 67 ರನ್ ಚಚ್ಚಿದ್ದರು. ಅದರಲ್ಲೂ ಸಿರಾಜ್ ಅವರ ಎರಡು ಓವರ್ಗಳಲ್ಲಿ ಆರ್ಆರ್ ಬ್ಯಾಟ್ಸ್ಮನ್ಗಳು ಕಲೆಹಾಕಿದ್ದು ಬರೋಬ್ಬರಿ 31 ರನ್ಗಳು. ಈ ಮೂಲಕ ಉತ್ತಮ ಆರಂಭ ಪಡೆದ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಶತಕದ ನೆರವಿನಿಂದ 18.1 ಓವರ್ಗಳಲ್ಲೇ 158 ರನ್ಗಳನ್ನು ಚೇಸ್ ಮಾಡಿ ಫೈನಲ್ ಪ್ರವೇಶಿಸಿತು.
ಇದರೊಂದಿಗೆ ಆರ್ಸಿಬಿ ತಂಡದ ಐಪಿಎಲ್ ಸೀಸನ್ 15 ಅಭಿಯಾನ ಕೂಡ ಅಂತ್ಯಗೊಂಡಿದೆ. ಈ ಬಾರಿ 16 ಪಂದ್ಯಗಳನ್ನು ಆಡಿದ ಆರ್ಸಿಬಿ ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬೌಲರ್ ಎಂದರೆ ಮೊಹಮ್ಮದ್ ಸಿರಾಜ್. ಏಕೆಂದರೆ ಸಿರಾಜ್ ಈ ಬಾರಿ 15 ಮ್ಯಾಚ್ ಆಡಿದ್ದಾರೆ. ಈ ವೇಳೆ ಬೌಲಿಂಗ್ನಲ್ಲಿ ನೀಡಿದ್ದು ಬರೋಬ್ಬರಿ 514 ರನ್ಗಳು. ಇದು ಸಿರಾಜ್ ಅವರ ಕೆರಿಯರ್ನಲ್ಲೇ ಅತ್ಯಂತ ಕಳಪೆ ದಾಖಲೆಯಾಗಿದೆ.
ಇನ್ನು ಈ ವೇಳೆ ಬರೋಬ್ಬರಿ ಸಿರಾಜ್ ಹೊಡೆಸಿಕೊಂಡ ಸಿಕ್ಸ್ಗಳ ಸಂಖ್ಯೆ 31. ಅಂದರೆ ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಬೌಲರ್ ಎಂಬ ಕೆಟ್ಟ ದಾಖಲೆ ಇದೀಗ ಸಿರಾಜ್ ಪಾಲಾಗಿದೆ. ಇದಕ್ಕೂ ಮುನ್ನ 2018 ರಲ್ಲಿ ಸಿಎಸ್ಕೆ ತಂಡದ ಡ್ವೇನ್ ಬ್ರಾವೊ 29 ಸಿಕ್ಸ್ ಹೊಡೆಸಿಕೊಂಡಿದ್ದು ಹೀನಾಯ ದಾಖಲೆಯಾಗಿತ್ತು. ಇದೀಗ ಸಿರಾಜ್ 31 ಸಿಕ್ಸ್ ಚಚ್ಚಿಸಿಕೊಳ್ಳುವ ಮೂಲಕ ಐಪಿಎಲ್ನ ಅತ್ಯಂತ ಕೆಟ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ 30 ಸಿಕ್ಸ್ ಹೊಡೆಸಿಕೊಂಡಿರುವ ಆರ್ಸಿಬಿ ತಂಡದ ಸ್ಪಿನ್ನರ್ ವನಿಂದು ಹಸರಂಗ 2ನೇ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷ.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ನಲ್ಲಿ 51 ಓವರ್ ಬೌಲಿಂಗ್ ಮಾಡಿದ್ದ ಸಿರಾಜ್ 514 ರನ್ ನೀಡುವ ಮೂಲಕ ಆರ್ಸಿಬಿ ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಇತ್ತ ಸಿರಾಜ್ ಒಬ್ಬರೇ 500 ಕ್ಕೂ ಅಧಿಕ ರನ್ ನೀಡಿದರೂ, ಆರ್ಸಿಬಿ ಪರ ಯಾವುದೇ ಬ್ಯಾಟ್ಸ್ಮನ್ 500 ರನ್ಗಳ ಗಡಿದಾಟಿಲ್ಲ ಎಂಬುದು ವಿಶೇಷ.
ಅಂದರೆ ಈ ಸಲ ಆರ್ಸಿಬಿ ಪರ ಅತೀ ಹೆಚ್ಚು ರನ್ ಕಲೆಹಾಕಿದ್ದು ನಾಯಕ ಫಾಫ್ ಡುಪ್ಲೆಸಿಸ್. ಫಾಫ್ ಡಿ ಈ ಬಾರಿ 468 ರನ್ಗಳಿಸಿದ್ದಾರೆ. ಆರ್ಸಿಬಿ ನಾಯಕನನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ 400 ರನ್ಗಳ ಗಡಿದಾಟಿಲ್ಲ. ಈ ಬಾರಿ ವಿರಾಟ್ ಕೊಹ್ಲಿ 341 ರನ್ ಕಲೆಹಾಕಿದರೆ, ಗ್ಲೆನ್ ಮ್ಯಾಕ್ಸ್ವೆಲ್ 301 ರನ್ ಮಾತ್ರ ಗಳಿಸಿದ್ದಾರೆ. ಇನ್ನು 500 ರನ್ಗಳ ಗಡಿದಾಟಿದ್ದು ಮೊಹಮ್ಮದ್ ಸಿರಾಜ್ ಮಾತ್ರ. ಆದರೆ ಅದು ಬೌಲಿಂಗ್ ಮೂಲಕ ಎಂಬುದಷ್ಟೇ ವ್ಯತ್ಯಾಸ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.