ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 50 ರನ್ಗಳ ಅಮೋಘ ಗೆಲುವು ಕಂಡಿದ್ದ ಭಾರತ (India vs England) ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು (ಜು. 9) ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ ಮೈದಾನದಲ್ಲಿ ಎರಡನೇ ಟಿ20 ಪಂದ್ಯ ಆಯೋಜಿಸಲಾಗಿದ್ದು ಟೀಮ್ ಇಂಡಿಯಾ (Team India) ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಆಂಗ್ಲರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಭಾರತ ಗೆದ್ದಿದ್ದರೂ ಇಂದಿನ ಮ್ಯಾಚ್ಗೆ ಮುಖ್ಯ ಬದಲಾವಣೆ ಆಗುವುದು ಖಚಿತ. ಆದರೆ, ಯಾರು ಯಾರ ಸ್ಥಾನವನ್ನು ಆಕ್ರಮಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಕಳೆದ ಐದು ತಿಂಗಳ ಅವಧಿಯಲ್ಲಿ ಕೊಹ್ಲಿ ಐಪಿಎಲ್ ಬಿಟ್ಟರೆ ಇತರೆ ಯಾವುದೇ ಟಿ20 ಪಂದ್ಯವನ್ನು ಆಡಿಲ್ಲ. ಹೀಗಾಗಿ ಕೊಹ್ಲಿ ಜಾಗದಲ್ಲಿ ದೀಪಕ್ ಹೂಡ ಕಣಕ್ಕಿಳಿದಿದ್ದರು. ಹೂಡ ಪ್ರತಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೀನ ಕೊಹ್ಲಿ ಬಂದ ಕಾರಣ ಅನಿವಾರ್ಯವಾಗಿ ಹೂಡ ಹಿಂದೆ ಸರಿಯಬೇಕಿದೆ. ಅಲ್ಲದೆ ಇಂಗ್ಲೆಂಡ್ ವಿರುದ್ಧ ಈ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳು ವಿರಾಟ್ ಕೊಹ್ಲಿಗೆ ನಿರ್ಣಾಯಕವಾಗಿದೆ. ಒಂದು ವೇಳೆ ವೈಫಲ್ಯ ಅನುಭವಿಸಿದರೆ, ಅವರ ಸ್ಥಾನಕ್ಕೆ ಕಂಟಕ ಎದುರಾಗಹುದು. ಏಕೆಂದರೆ ದೀಪಕ್ ಹೂಡ ಅವರಂಥ ಯುವ ಆಟಗಾರರು ಟಿ20 ಸ್ವರೂಪದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಏಷ್ಯಾಕಪ್ಗೂ ಮುನ್ನ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ
ರವೀಂದ್ರ ಜಡೇಜಾ ಕಮ್ಬ್ಯಾಕ್ ಮಾಡಿರುವ ಕಾರಣ ಅಕ್ಷರ್ ಪಟೇಲ್ ಹೊರಗುಳಿಯುವುದು ಖಚಿತ. ಅಂತೆಯೆ ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದ ರಿಷಭ್ ಪಂತ್ ಪ್ಲೇಯಿಂಗ್ ಇಲೆವೆನ್ಗೆ ಮರಳಲಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ಎರಡನೇ ಪಂದ್ಯದಲ್ಲಿ ಬೆಂಚ್ ಕಾಯುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾ ಕೂಡ ಆಡುವ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.
ಇತ್ತ ಇಂಗ್ಲೆಂಡ್ ತಂಡ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಇರುವುದರಿಂದ ಮಾಸ್ಟರ್ ಪ್ಲಾನ್ನೊಂದಿಗೆ ಕಣಕ್ಕಿಳಿಯುವುದು ಖಚಿತ. ತಂಡದಲ್ಲಿ ಬದಲಾವಣೆ ಅನುಮಾನ. ನೂತನ ನಾಯಕ ಜೋಸ್ ಬಟ್ಲರ್ ಮೇಲೆ ನಿರೀಕ್ಷೆಗಳಿದ್ದು ಫಾರ್ಮ್ಗೆ ಮರಳಬೇಕಿದೆ. ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಬಟ್ಲರ್ ಇಂದು ಯಾವರೀತಿ ತಿರುಗಿ ಬೀಳುತ್ತಾರೆ ಎಂದು ನೋಡಬೇಕಿದೆ. ಮೊಯಿನ್ ಆಲಿ ಆಲ್ರೌಂಡ್ ಆಟ ತಂಡಕ್ಕೆ ನೆರವಾಗುತ್ತಿದೆ. ಹ್ಯಾರಿಬ್ರೋಕ್ ಕೂಡ ರನ್ ಗಳಿಸುತ್ತಿದ್ದಾರೆ. ಆದರೆ, ಇತರೆ ಬ್ಯಾಟರ್ಗಳು ಸಾಥ್ ನೀಡಬೇಕಷ್ಟೆ. ಲಿವಿಂಗ್ ಸ್ಟೋನ್ ಕೂಡ ಅಪಾಯಕಾರಿ ಬ್ಯಾಟರ್.
ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ ಪಿಚ್ ಬ್ಯಾಟ್ಸ್ಮನ್ಗಳಿಗೆ ಹೆಚ್ಚಾಗಿ ಸಹಕರಿಸಲಿದ್ದು, ಬೌಲರ್ಗಳಿಗೆ ತಲೆನೋವಾಗಲಿದೆ. ಕ್ರೀಡಾಂಗಣದ ಸ್ಟ್ರೈಟ್ ಮತ್ತು ಸೈಡ್ ಬೌಂಡರಿಗಳು 59-60 ಮೀಟರ್ ಉದ್ದದಷ್ಟು ಇರಲಿದ್ದು, ಸ್ಕ್ವೇರ್ ಬೌಂಡರಿ 50 ಮೀಟರ್ಗಿಂತ ಕಡಿಮೆ ಇದೆ ಹಾಗೂ ಇದು ಅಂತರರಾಷ್ಟ್ರೀಯ ಕ್ರಿಕೆಟ್ನ ಅತ್ಯಂತ ಕಡಿಮೆ ಉದ್ದದ ಬೌಂಡರಿಗಳಲ್ಲಿ ಒಂದಾಗಿದ್ದು, ಬ್ಯಾಟ್ಸ್ಮನ್ಗಳು ಈ ಭಾಗದಲ್ಲಿಯೇ ಹೆಚ್ಚಿನ ಸಿಕ್ಸರ್ ಬಾರಿಸಲಿದ್ದು, ರನ್ ಹೊಳೆ ಹರಿಯಲಿದೆ.
ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಸೋನಿ ನೆಟ್ವರ್ಕ್ ಚಾನೆಲ್ ಹಾಗೂ ಸೋನಿ ಲೀವ್ ಅಪ್ಲಿಕೇಶನ್ನಲ್ಲಿ ಲೈವ್ ವೀಕ್ಷಿಸಬಹುದು.
Ravindra Jadeja: ಸಿಎಸ್ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ ಜಡೇಜಾ
Published On - 7:35 am, Sat, 9 July 22