RCB vs KKR, IPL 2021 Eliminator: ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಆಡಿದ ಬೇಸರದ ಮಾತು ಕೇಳಿ: ಸೋಲಿಗೆ ಇದುವೇ ಕಾರಣವಂತೆ

Virat Kohli Royal Challengers Bangalore: ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದ ಸೋಲಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಪ್ರತಿ ವರ್ಷವೂ ಆರ್‌ಸಿಬಿಯನ್ನು ಮುನ್ನಡೆಸುವಾಗ ಶೇ. 120ರಷ್ಟು ತೊಡಗಿಸಿಕೊಂಡಿದ್ದೇನೆ. ನಾನು ಐಪಿಎಲ್‌ನಲ್ಲಿ ಆಡುವ ಕೊನೆಯ ಪಂದ್ಯ ಅದು ಆರ್​ಸಿಬಿ ಪರವಾಗಿಯೇ ಇರುತ್ತದೆ ಎಂದು ಹೇಳಿದ್ದಾರೆ.

RCB vs KKR, IPL 2021 Eliminator: ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಆಡಿದ ಬೇಸರದ ಮಾತು ಕೇಳಿ: ಸೋಲಿಗೆ ಇದುವೇ ಕಾರಣವಂತೆ
RCB Virat Kohli IPL 2021
Follow us
TV9 Web
| Updated By: Vinay Bhat

Updated on: Oct 12, 2021 | 9:35 AM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (Indian Premier League) ಈ ಬಾರಿ ಕಪ್ ಗೆಲ್ಲಬೇಕೆಂದು ಕೊನೆಯವರೆಗೆ ಹೋರಾಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡಕ್ಕೆ ಯಶಸ್ಸು ಸಿಗಲಿಲ್ಲ. ಕೆಕೆಆರ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ (IPL 2021 Eliminator, RCB vs KKR) ಸೋಲುವ ಮೂಲಕ ಐಪಿಎಲ್ 2021 ರಲ್ಲಿ (IPL 2021) ಆರ್​ಸಿಬಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು. ಇದರ ಜೊತೆಗೆ ಆರ್​ಸಿಬಿ ತಂಡಕ್ಕೆ ನಾಯಕನಾಗಿ (RCB Captain) ವಿರಾಟ್ ಕೊಹ್ಲಿ ಕೂಡ ತಮ್ಮ ಕೊಡುಗೆಯನ್ನು ಕೊನೆಗೊಳಿಸಿದರು. ಟೂರ್ನಿಯಿದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್​ನಲ್ಲಿ (Playoffs) ಮುಗ್ಗರಿಸಿದ ಬೆಂಗಳೂರು (RCB) ತಂಡದ ಪ್ರದರ್ಶನ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಗುಣಮಟ್ಟದ್ದಾಗಿತ್ತು. ಕೆಕೆಆರ್ (KKR) ವಿರುದ್ಧದ ಸೋಲಿನ ಬಳಿಕ ವಿರಾಟ್ ಕೊಹ್ಲಿ (Virat Kohli) ಮಾತನಾಡಿದ್ದು ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

“ನಾವು ಬ್ಯಾಟಿಂಗ್ ಮಾಡುವಾಗ ಕೆಕೆಆರ್ ಸ್ಪಿನ್ನರ್​ಗಳು ಮಧ್ಯಮ ಓವರ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅವರ ಬೌಲಿಂಗ್ ತುಂಬಾನೆ ಹಿಡಿತದಲ್ಲಿತ್ತು. ನಮಗೆ ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ, ಅವರು ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಸುನಿಲ್ ನರೈನ್ ಓರ್ವ ಅತ್ಯುತ್ತಮ ಗುಣಮಟ್ಟದ ಬೌಲರ್ ಆಗಿದ್ದು ಎಂದಿನಂತೆ ಇಂದಿನ ಪಂದ್ಯದಲ್ಲಿಯೂ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಇದರ ಜೊತೆಗೆ ಶಕೀಬ್, ವರುಣ್ ಚಕ್ರವರ್ತಿ ಕೂಡ ನಮ್ಮ ತಂಡದ ಮೇಲೆ ಒತ್ತಡವನ್ನು ಹೇರಿದರು. ನಮ್ಮ ತಂಡಕ್ಕೆ 15 ರನ್‌ಗಳ ಕೊರತೆಯುಂಟಾಯಿತು” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

“ಯುವ ಆಟಗಾರರಿಗೆ ಉತ್ತಮ ಆಟ ಆಡುವಂಥ ವಾತಾವರಣವನ್ನು ನಿರ್ಮಿಸಲು ನನ್ನಿಂದ ಸಾಧ್ಯವಾದಷ್ಟೂ ಮಟ್ಟಿಗೆ ಪ್ರಯತ್ನಿಸಿದ್ದೇನೆ. ಟೀಮ್ ಇಂಡಿಯಾದಲ್ಲೂ ನಾನು ಇದೇ ಕೆಲಸ ಮಾಡಿದ್ದೇನೆ. ನನ್ನ ಕೈಲಾದಷ್ಟು ಉತ್ತಮವಾದುದನ್ನೇ ಮಾಡಿದ್ದೇನೆ. ಇದಕ್ಕೆ ಬಂದ ಪ್ರತಿಕ್ರಿಯೆ ಹೇಗಿದೆ ಎಂಬುದು ನನಗೆ ತಿಳಿದಿಲ್ಲ. ಪ್ರತಿ ವರ್ಷವೂ ಆರ್‌ಸಿಬಿಯನ್ನು ಮುನ್ನಡೆಸುವಾಗ ಶೇ. 120ರಷ್ಟು ತೊಡಗಿಸಿಕೊಂಡಿದ್ದೇನೆ. ಇನ್ನು ಮುಂದೆ ಆಟಗಾರನಾಗಿಯೂ ಇದನ್ನೇ ಮುಂದುವರಿಸಲಿದ್ದೇನೆ” ಎಂದು ಕೊಹ್ಲಿ ಬೇಸರದಲ್ಲಿ ನುಡಿದರು.

ಇನ್ನು “ಖಂಡಿತವಾಗಿಯೂ ಬೇರೆ ಯಾವುದೇ ತಂಡದ ಪರ ಆಟವಾಡಲು ಬಯಸಿಲ್ಲ. ನನಗೆ ಲೌಕಿಕ ದೃಷ್ಟಿಕೋನಕ್ಕಿಂತಲೂ ನಿಷ್ಠೆಯೇ ಮುಖ್ಯ. ಈ ಫ್ರಾಂಚೈಸಿ ನನ್ನ ಮೇಲೆ ನಂಬಿಕೆ ಇಟ್ಟಿದೆ. ನಾನು ಈಗಾಗಲೇ ಹೇಳಿದಂತೆ, ಐಪಿಎಲ್‌ನಲ್ಲಿ ಆಡುವ ಕೊನೆಯ ದಿನದವರೆಗೂ ಈ ಫ್ರಾಂಚೈಸಿಗೇ ನನ್ನ ಬದ್ಧತೆ” ಎಂದು ಕೊಹ್ಲಿ ಆರ್​ಸಿಬಿ ಮೇಲಿನ ಅಭಿಮಾನವನ್ನು ತೋರ್ಪಡಿಸಿದ್ದಾರೆ.

ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ಮಾತನಾಡಿ, “ಸುನಿಲ್ ನರೈನ್ ನಮಗೆ ಈ ಪಂದ್ಯವನ್ನು ತುಂಬಾನೆ ಸುಲಭ ಮಾಡಿಕೊಟ್ಟರು. ಅವರ ಬೌಲಿಂಗ್ ಬಗ್ಗೆ ಮಾತನಾಡುವಂತಿಲ್ಲ. ನರೈನ್ ಒಬ್ಬ ಟಿ20 ಕ್ರಿಕೆಟ್​ನ ಲಿಜೆಂಡ್ ಆಟಗಾರ” ಎಂದು ಹಾಡಿಹೊಗಳಿದ್ದಾರೆ. ಇನ್ನೂ ಇದೇವೇಳೆ ನರೈನ್ ಮಾತನಾಡಿ, “ಇವತ್ತು ನನ್ನ ದಿನವಾಗಿತ್ತು. ಅದನ್ನು ಚೆನ್ನಾಗಿ ಉಪಯೋಗಿಸಿಕೊಂಡೆ. ಪಂದ್ಯ ಆರಂಭಕ್ಕೂ ಮುನ್ನ ಸಾಕಷ್ಟು ಒತ್ತಡಗಳಿರುತ್ತವೆ. ಆದರೆ, ಪಂದ್ಯದಲ್ಲಿ ಅದನ್ನು ತೋರ್ಪಡಿಸದೆ ಎಂಜಾಯ್ ಮಾಡಬೇಕು” ಎಂಬುದು ಅವರ ಮಾತು.

Virat Kohli: ಎರಡೆರಡು ನೋವು ತುಂಬಿಕೊಂಡು ದುಃಖದಿಂದ ಮೈದಾನದಲ್ಲೇ ಕಣ್ಣೀರಿಟ್ಟ ವಿರಾಟ್ ಕೊಹ್ಲಿ

Harshal Patel: ಪಟ್ಟ ಶ್ರಮಕ್ಕೆ ಸಿಗದ ಫಲ: ಹರ್ಷಲ್ ಪಟೇಲ್ ಐತಿಹಾಸಿಕ ದಾಖಲೆ ನಿರ್ಮಿಸಲು ಕೈಕೊಟ್ಟ ಫೀಲ್ಡರ್​ಗಳು

(Virat Kohli said at the presentation ceremony I have given 120 per cent to Royal Challengers Bangalore)