Virat Kohli: 16 ವರ್ಷಗಳ ನಂತರ ಶತಕ ಚಚ್ಚಿದ ಕಿಂಗ್ ಕೊಹ್ಲಿ
Virat Kohli's Vijay Hazare Century: ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ, ವಿಜಯ್ ಹಜಾರೆ ಟ್ರೋಫಿಯಲ್ಲೂ ಶತಕ ಸಿಡಿಸಿದ್ದಾರೆ. ಡೆಲ್ಲಿ ಪರ ಆಂಧ್ರಪ್ರದೇಶ ವಿರುದ್ಧ ಕೇವಲ 83 ಎಸೆತಗಳಲ್ಲಿ 100 ರನ್ ಪೂರೈಸಿದ ಕೊಹ್ಲಿ, 16 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಶತಕ ಬಾರಿಸಿದ್ದಾರೆ. ಈ ಸಾಧನೆ ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಶಕ್ತಿ ತುಂಬಿದೆ. ಸತತ ಅದ್ಭುತ ಫಾರ್ಮ್‌ನಲ್ಲಿರುವ ಕೊಹ್ಲಿಯ ಬ್ಯಾಟ್‌ನಿಂದ ಮತ್ತೊಂದು ಮೈಲಿಗಲ್ಲು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ (Virat Kohli), ಇದೀಗ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲೂ (Vijay Hazare Trophy) ತಮ್ಮ ಶತಕಗಳ ಓಟವನ್ನು ಮುಂದುವರೆಸಿದ್ದಾರೆ. ಬರೋಬ್ಬರಿ 15 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಡೆಲ್ಲಿ ಪರ ಆಡುತ್ತಿರುವ ವಿರಾಟ್, ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 83 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದಾರೆ. ಅಲ್ಲದೆ 16 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊಹ್ಲಿ ಬ್ಯಾಟ್ ಶತಕದ ಇನ್ನಿಂಗ್ಸ್ ಆಡಿದೆ.
16 ವರ್ಷಗಳ ನಂತರ ವಿರಾಟ್ ಶತಕ
ವಿರಾಟ್ ಕೊಹ್ಲಿ ಕೊನೆಯ ಬಾರಿಗೆ 2009 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ ಬಾರಿಸಿದ್ದರು. ಹರಿಯಾಣ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 124 ರನ್ಗಳ ಇನ್ನಿಂಗ್ಸ್ ಆಡಿದ್ದರು. ಮಾತ್ರವಲ್ಲದೆ ಆ ಆವೃತ್ತಿಯಲ್ಲಿ ರನ್ಗಳ ಮಳೆ ಹರಿಸಿದ್ದ ವಿರಾಟ್ ಕೊಹ್ಲಿ ನಾಲ್ಕು ಶತಕಗಳು ಸೇರಿದಂತೆ 534 ರನ್ ಕಲೆಹಾಕಿದ್ದರು. ಈಗ, ಮತ್ತೊಮ್ಮೆ ದೇಶಿ ಅಂಗಳದಲ್ಲಿ ಅಬ್ಬರಿಸಿರುವ ವಿರಾಟ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ತಮ್ಮ ಫಾರ್ಮ್ ಮುಂದುವರೆಸಿರುವುದು ಟೀಂ ಇಂಡಿಯಾಗೆ ಆನೆಬಲ ತಂದಿದೆ.
4 ಏಕದಿನ ಇನ್ನಿಂಗ್ಸ್‌ಗಳಲ್ಲಿ 3ನೇ ಶತಕ
ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿರುವ ಕೊಹ್ಲಿ ತಮ್ಮ ಕೊನೆಯ ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ. ಮೇಲೆ ಹೇಳಿದಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದ ಕೊಹ್ಲಿ, ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 65 ರನ್ ಕಲೆಹಾಕಿದ್ದರು. ಈಗ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಕೊಹ್ಲಿ ಶತಕದ ಇನ್ನಿಂಗ್ಸ್ ಆಡಿದ್ದಾರೆ.
Virat Kohli: ಖಾತೆ ತೆರೆದು ಕ್ರಿಕೆಟ್ ದೇವರ ದಾಖಲೆಯನ್ನು ಪುನರಾವರ್ತಿಸಿದ ಕಿಂಗ್ ಕೊಹ್ಲಿ
ಗೆಲುವಿನತ್ತ ಡೆಲ್ಲಿ
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಂಧ್ರಪ್ರದೇಶ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ತಂಡದ ಪರ ರಿಕಿ ಭುಯಿ 133 ರನ್ಗಳ ಶತಕದ ಇನ್ನಿಂಗ್ ಆಡಿದರು. ಈ ಗುರಿ ಬೆನ್ನಟ್ಟಿರುವ ಡೆಲ್ಲಿ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಮಾತ್ರವಲ್ಲದೆ ಆರಂಭಿಕ ಪ್ರಿಯಾಂಶ್ ಆರ್ಯ ಜೊತೆಗೂಡಿ ಎರಡನೇ ವಿಕೆಟ್ಗೆ 113 ರನ್ಗಳ ಜೊತೆಯಾಟವನ್ನು ನಿರ್ಮಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Wed, 24 December 25
