Virat Kohli: ವಿರಾಟ್ ಕೊಹ್ಲಿಯ ಬಂಧನಕ್ಕೆ ಟ್ವಿಟರ್ನಲ್ಲಿ ಆಗ್ರಹ..!
Virat Kohli vs Rohit Sharma: ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ತಂಡವನ್ನು ಅಪಹಾಸ್ಯ ಮಾಡಿದ್ದರು. ಇದರಿಂದ ಕುಪಿತಗೊಂಡ ಆರ್ಸಿಬಿ ಅಭಿಮಾನಿ ಧರ್ಮರಾಜ್ ಗೆಳೆಯನ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ.
ಟೀಮ್ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು (Virat Kohli) ಬಂಧಿಸಬೇಕೆಂದು ಟ್ವಿಟರ್ನಲ್ಲಿ ಕೆಲವರು ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ #ArrestKohli ಎಂಬ ಹ್ಯಾಶ್ಟ್ಯಾಗ್ ಸೃಷ್ಟಿಸಲಾಗಿದ್ದು, ಈ ಮೂಲಕ ಕೊಹ್ಲಿಯ ಬಂಧವನ್ನು ಆಗ್ರಹಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅಷ್ಟಕ್ಕೂ ಕೊಹ್ಲಿ ಬಂಧನದ ಹ್ಯಾಶ್ಟ್ಯಾಗ್ ವೈರಲ್ ಆಗಲು ಮುಖ್ಯ ಕಾರಣ ತಮಿಳುನಾಡಿನಲ್ಲಿ ನಡೆದಿರುವ ಒಂದು ಕೊಲೆ. ಕುಡಿದ ಅಮಲಿನಲ್ಲಿ ತಮಿಳುನಾಡಿನ ಅರಿಯಾಲೂರು ಜಿಲ್ಲೆಯ ಪೊಯ್ಯೂರು ಗ್ರಾಮದಲ್ಲಿ ಕೊಲೆ ನಡೆದಿತ್ತು. ಇದಕ್ಕೂ ಕೊಹ್ಲಿಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮಗೂ ಕಾಡಬಹುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ…
ಪೊಯ್ಯೂರು ಗ್ರಾಮದ ವಿಘ್ನೇಶ್ ಹಾಗೂ ಧರ್ಮರಾಜ್ ಇಬ್ಬರೂ ಅಪ್ಪಟ ಕ್ರಿಕೆಟ್ ಪ್ರೇಮಿಗಳಾಗಿದ್ದರು. ಅದರಲ್ಲೂ ಧರ್ಮರಾಜ್ ಆರ್ಸಿಬಿ ತಂಡದ ಪಕ್ಕಾ ಅಭಿಮಾನಿ. ಮತ್ತೊಂದೆಡೆ ವಿಘ್ನೇಶ್ ಹಿಟ್ಮ್ಯಾನ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಇಷ್ಟಪಡುತ್ತಿದ್ದರು.
ಈ ಇಬ್ಬರು ಸ್ನೇಹಿತರು ಮಂಗಳವಾರ ರಾತ್ರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್ ಪ್ರದೇಶದಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದರು. ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಯಾರು ಉತ್ತಮ ಆಟಗಾರ ಎಂಬ ಚರ್ಚೆ ಶುರುವಾಗಿದೆ. ಈ ತರ್ಕವು ವಿಪರೀತ ಹಂತಕ್ಕೆ ಹೋಗಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ.
ಇದೇ ವೇಳೆ ವಿಘ್ನೇಶ್, ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ತಂಡವನ್ನು ಅಪಹಾಸ್ಯ ಮಾಡಿದ್ದರು. ಇದರಿಂದ ಕುಪಿತಗೊಂಡ ಆರ್ಸಿಬಿ ಅಭಿಮಾನಿ ಧರ್ಮರಾಜ್ ಗೆಳೆಯನ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಬ್ಯಾಟ್ನಿಂದ ತಲೆಗೆ ಹೊಡೆದಿದ್ದ. ಇದರಿಂದ ಗಂಭೀರ ಗಾಯಗೊಂಡ ವಿಘ್ನೇಶ್ ಮೃತಪಟ್ಟಿದ್ದಾರೆ. ಈ ಘಟನೆ ಬಳಿಕ ಪರಾರಿಯಾಗಿದ್ದ ಧರ್ಮರಾಜ್ರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯ ಸಂಬಂಧ ವಿರಾಟ್ ಕೊಹ್ಲಿಯನ್ನು ಸಹ ಬಂಧಿಸುವಂತೆ ಕೆಲ ಟ್ವಿಟಿಗರು #ArrestKohli ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳ ಅತಿರೇಕಕ್ಕೆ ವಿರಾಟ್ ಕೊಹ್ಲಿ ಹೇಗೆ ಹೊಣೆಯಾಗುತ್ತಾರೆ ಎಂಬ ಪ್ರಶ್ನೆಗಳನ್ನು ಕೂಡ ಅನೇಕರು ಈ ವೇಳೆ ಮುಂದಿಟ್ಟಿದ್ದಾರೆ.