ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಡೀಪ್ ಫೇಕ್ ವಿಡಿಯೋಗೆ ಗುರಿಯಾಗಿದ್ದಾರೆ. AI ಮೂಲಕ ರಚಿಸಲಾದ ವೀಡಿಯೊದಲ್ಲಿ, ಕೊಹ್ಲಿ ಭಾರತದ ಸಹ ಆಟಗಾರ ಶುಭಮನ್ ಗಿಲ್ ಅವರನ್ನು ಗುರಿಯಾಗಿಸಿ ಮಾತನಾಡುತ್ತಿರುವುದನ್ನು ಚಿತ್ರಿಸಲಾಗಿದೆ. ಸಂದರ್ಶನವೊಂದರ ತುಣುಕುಗಳನ್ನು ಬಳಸಿ ರಚಿಸಲಾದ ಈ ಡೀಪ್ ಫೇಕ್ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತನ್ನೊಂದಿಗೆ ಶುಭ್ಮನ್ ಗಿಲ್ ಅವರನ್ನು ಹೋಲಿಸುತ್ತಿರುವುದರ ಬಗ್ಗೆ ಮನಬಿಚ್ಚಿ ಮಾತನಾಡಿರುವುದನ್ನು ತೋರಿಸಲಾಗಿದೆ.
“ನಾನು ಗಿಲ್ ಅವರನ್ನು ತುಂಬಾ ಹತ್ತಿರದಿಂದ ನೋಡುತ್ತಿದ್ದೇನೆ. ನಿಸ್ಸಂದೇಹವಾಗಿ ಅವರು ಪ್ರತಿಭಾವಂತ ಆಟಗಾರ. ಆದರೆ ಅವರು ಲೆಜೆಂಡ್ ಆಟಗಾರನಾಗಲು ತುಂಬಾ ಅಂತರವಿದೆ. ಗಿಲ್ ಅವರ ಬ್ಯಾಟಿಂಗ್ ತಂತ್ರವು ಅದ್ಭುತವಾಗಿದೆ. ಇದಾಗ್ಯೂ ಆತ ನನಗಿಂತ ಮುಂದೆ ಹೋಗಲಾರ. ತುಂಬಾ ಮಂದಿ ಶುಭ್ಮನ್ ಗಿಲ್ ಅವರನ್ನು ಮುಂದಿನ ವಿರಾಟ್ ಕೊಹ್ಲಿ ಎಂದು ಮಾತನಾಡುತ್ತಾರೆ. ಆದರೆ ವಿರಾಟ್ ಕೊಹ್ಲಿ ಯಾವತ್ತೂ ಒಬ್ಬನೇ… ಅದು ನಾನೇ ಎಂಬಾರ್ಥದಲ್ಲಿ ಮಾತನಾಡಿರುವುದನ್ನು ಡೀಪ್ ಫೇಕ್ ವಿಡಿಯೋದಲ್ಲಿ ತೋರಿಸಲಾಗಿದೆ.
AI is Dangerous pic.twitter.com/njUvwiwc4t
— Cricketopia (@CricketopiaCom) August 27, 2024
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅದರಲ್ಲೂ ಕೆಲವರು ಡೀಪ್ ಫೇಕ್ ವಿಡಿಯೋ ಎಂದು ತಿಳಿಯದೇ ಕಿಂಗ್ ಕೊಹ್ಲಿ ವಿರುದ್ಧ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ. ಇನ್ನು ಕೆಲವರು AI ದುರ್ಬಳಕೆ ಮತ್ತು ಅದು ಎಷ್ಟು ಅಪಾಯಕಾರಿ ಎಂಬುದರ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ವಿರಾಟ್ ಕೊಹ್ಲಿಯ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದು, ಇದರ ಬೆನ್ನಲ್ಲೇ ಡೀಪ್ ಫೇಕ್ ವಿಡಿಯೋಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಮುಂಬರುವ ದುಲೀಪ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಟೆಸ್ಟ್ ತಂಡದ ಆಟಗಾರರು ಪಾಲ್ಗೊಳ್ಳುವಂತೆ ಬಿಸಿಸಿಐ ಸೂಚಿಸಿದೆ. ಇದಾಗ್ಯೂ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ಅವರಿಗೆ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: IPL 2025: LSG ನಾಯಕತ್ವದಿಂದ ಕೆಎಲ್ ರಾಹುಲ್ ಕಿಕ್ ಔಟ್?
ಹೀಗಾಗಿ ವಿರಾಟ್ ಕೊಹ್ಲಿ ಮುಂಬರುವ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 19 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಈ ಸರಣಿಯ ಮೂಲಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವ ವಿಶ್ವಾಸದಲ್ಲಿದೆ.