
ಸಚಿನ್ ತೆಂಡೂಲ್ಕರ್ (Sachin Tendulkar).. ಕ್ರಿಕೆಟ್ ಲೋಕದಲ್ಲಿ ಮಾತ್ರವಲ್ಲ ತನ್ನ ಆಟದಿಂದಾಗಿ ಇಡೀ ವಿಶ್ವದ ಮನೆ ಮಾತಾಗಿದ್ದವರು. ಆಡಿದ ಪ್ರತಿಯೊಂದು ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸಿದ್ದ ಕ್ರಿಕೆಟ್ ದೇವರ ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಸಾಮಾನ್ಯ ಆಟಗಾರನಂತೆ ಭಾರತ ಕ್ರಿಕೆಟ್‌ಗೆ ಕಾಲಿಟ್ಟಿದ್ದ ವಿರಾಟ್ ಕೊಹ್ಲಿ (Virat Kohli) ವರ್ಷದಿಂದ ವರ್ಷಕ್ಕೆ ತನ್ನ ಆಟದಲ್ಲಿ ಸುಧಾರಣೆ ತರುವುದರ ಜೊತೆಗೆ ರನ್‌ಗಳ ಶಿಖರ ಕಟ್ಟಿದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಒಂದೊಂದಾಗಿ ಮುರಿಯುವ ಕೆಲಸವನ್ನು ಆರಂಭಿಸಿದ್ದರು. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕ ಹಾಗೂ ಅತ್ಯಧಿಕ ರನ್‌ಗಳ ದಾಖಲೆಯನ್ನು ಮುರಿಯಬಲ್ಲ ಏಕೈಕ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ ಇದೀಗ ಏಕಾಏಕಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದರೊಂದಿಗೆ, ಸಚಿನ್ ಅವರ ಆ 2 ದಾಖಲೆಗಳು ಶಾಶ್ವತವಾಗಿ ಅಮರವಾಗಿವೆ.
ಕೆಲವೇ ದಿನಗಳ ಹಿಂದೆ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ಇಂದು ತೆರೆಬಿದ್ದಿದೆ. ವಿರಾಟ್ ಕೊಹ್ಲಿ ಕೊನೆಗೂ ತಮ್ಮ ನೆಚ್ಚಿನ ಮಾದರಿಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಸ್ವರೂಪದಲ್ಲಿ ರನ್ ಗಳಿಸಲು ಕಷ್ಟಪಡುತ್ತಿರುವ ವಿರಾಟ್, ಈ ಹೋರಾಟವನ್ನು ಇನ್ನು ಮುಂದೆ ಮುಂದುವರಿಸದಿರಲು ನಿರ್ಧರಿಸಿದ್ದಾರೆ. ಮೇ 12, ಸೋಮವಾರ ಅಭಿಮಾನಿಗಳಿಗೆ ನೀಡಿದ ಸಂದೇಶದಲ್ಲಿ, ತಮ್ಮ 123 ಪಂದ್ಯಗಳ ಸುದೀರ್ಘ ಟೆಸ್ಟ್ ವೃತ್ತಿಜೀವನಕ್ಕೆ ಶಾಶ್ವತ ವಿರಾಮ ನೀಡುವುದಾಗಿ ಘೋಷಿಸಿದರು. ಇದರೊಂದಿಗೆ, ಸಚಿನ್ ದಾಖಲೆಯನ್ನು ಮುರಿಯುವ ವಿರಾಟ್ ಕನಸು ಕೂಡ ನನಸಾಗಲಿಲ್ಲ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಆರಂಭವಾಗುವ ಸುಮಾರು 5 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಹೀಗಾಗಿ ವಿರಾಟ್, ಸಚಿನ್ ಅವರ 100 ಶತಕಗಳ ದಾಖಲೆ ಮತ್ತು ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಮುರಿಯುತ್ತಾರೆ ಎಂದು ನಂಬಲಾಗಿತ್ತು. ಇದಕ್ಕೆ ಪೂರಕವಾಗಿ ಕೊಹ್ಲಿ 2023 ರಲ್ಲಿ ಏಕದಿನ ಮಾದರಿಯಲ್ಲಿ 50 ಕ್ಕೂ ಹೆಚ್ಚು ಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಬರೆದರು. ಆದರೆ ಟೆಸ್ಟ್‌ನಲ್ಲಿ ಮಾತ್ರ ಈ ಸಾಧನೆಯನ್ನು ಮಾಡಲು ಕೊಹ್ಲಿಗೆ ಸಾಧ್ಯವಾಗಲಿಲ್ಲ. ಈ ರೀತಿಯಾಗಿ, ಸಚಿನ್ ಅವರ 100 ಅಂತರರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯುವ ಕನಸು ಕೂಡ ನನಸಾಗಲಿಲ್ಲ.
Virat Kohli: ಟೆಸ್ಟ್ ವೃತ್ತಿಜೀವನದಲ್ಲಿ ಕಿಂಗ್ ಕೊಹ್ಲಿ ಮಾಡಿಕೊಂಡ ವಿವಾದಗಳು ಒಂದೆರಡಲ್ಲ; ನೀವೇ ನೋಡಿ
ಸಚಿನ್ 664 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ಶತಕಗಳು ಸೇರಿದಂತೆ 34357 ರನ್ ಗಳಿಸಿದ್ದಾರೆ. ಈ ವಿಚಾರದಲ್ಲಿ ಅವರ ನಂತರ ಅಂದರೆ ಎರಡನೇ ಸ್ಥಾನದಲ್ಲಿರುವ ಕುಮಾರ್ ಸಂಗಕ್ಕಾರ 594 ಪಂದ್ಯಗಳಲ್ಲಿ 64 ಶತಕಗಳೊಂದಿಗೆ 28016 ರನ್ ಗಳಿಸಿ ನಿವೃತ್ತಿ ಘೋಷಿಸಿದ್ದಾರೆ. ಕೊಹ್ಲಿ ಇದುವರೆಗೆ 550 ಪಂದ್ಯಗಳಲ್ಲಿ 82 ಶತಕಗಳು ಸೇರಿದಂತೆ 27599 ರನ್ ಗಳಿಸಿದ್ದಾರೆ. ಇದರರ್ಥ ಕೊಹ್ಲಿ ಪ್ರಸ್ತುತ ಸಚಿನ್‌ಗಿಂತ ಸುಮಾರು 6 ಸಾವಿರ ರನ್‌ಗಳಷ್ಟು ಹಿಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಟೆಸ್ಟ್ ಮತ್ತು ಟಿ20 ಯಿಂದ ನಿವೃತ್ತರಾಗಿರುವ ಕೊಹ್ಲಿಗೆ ಈ ದಾಖಲೆ ಮುರಿಯುವುದು ಅಸಾಧ್ಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ