ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಬಹುನಿರೀಕ್ಷಿತ ಏಷ್ಯಾಕಪ್ 2022 (Asia cup 2022) ಟೂರ್ನಿ ಆರಂಭಕ್ಕೆ ಇನ್ನೇನು ಕೇವಲ ಎರಡು ದಿನಗಳಷ್ಟೆ ಬಾಕಿಯಿದೆ. ಆಗಸ್ಟ್ 27ಕ್ಕೆ ಚಾಲನೆ ಸಿಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಲಿದೆ. ಭಾರತ ಆ. 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆದರೆ, ಇದಕ್ಕೂ ಮುನ್ನವೇ ಭಾರತಕ್ಕೆ ಆಘಾತ ಉಂಟಾಯಿತು. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತು. ಇದೀಗ ದ್ರಾವಿಡ್ ಭಾರತ ತಂಡದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿಲ್ಲ. ಅವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ.
ದ್ರಾವಿಡ್ ಅಲಭ್ಯತೆಯಿರುವ ಕಾರಣ ತಂಡಕ್ಕೆ ಇದೀಗ ಹೊಸ ಕೋಚ್ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ”ಇತ್ತೀಚೆಗಷ್ಟೆ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಆಡಿದ ಭಾರತ ತಂಡಕ್ಕೂ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ತೆರಳಿದ್ದರು. ಇದೀಗ ದ್ರಾವಿಡ್ ಅವರು ಕೋವಿಡ್ ನಿಂದಾಗಿ ತಂಡದೊಂದಿಗೆ ಏಷ್ಯಾಕಪ್ಗೆ ತೆರಳುತ್ತಿಲ್ಲ. ಹೀಗಾಗಿ ಲಕ್ಷ್ಮಣ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಕ ಮಾಡಲಾಗಿದೆ,” ಎಂದು ಶಾ ಹೇಳಿದ್ದಾರೆ.
ಇತ್ತ ಬಿಸಿಸಿಐ ವೈದ್ಯಕೀಯ ಸಮಿತಿ, ”ದ್ರಾವಿಡ್ ಅವರು ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ಹಾಗೂ ನೆಗೆಟಿವ್ ವರದಿ ಬಂದ ನಂತರ ದುಬೈಗೆ ತೆರಳಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ,” ಎಂದು ತಿಳಿಸಿದೆ. ಏಷ್ಯಾಕಪ್ಗಾಗಿ ಈಗಾಗಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಇತರೆ ಆಟಗಾರರು ದುಬೈಗೆ ತಲುಪಿದ್ದಾರೆ. ಕೆಲ ಆಟಗಾರರು ಜಿಂಬಾಬ್ವೆ ಪ್ರವಾಸದಿಂದಲೇ ನೇರವಾಗಿ ಯುಎಇಗೆ ಶಿಫ್ಟ್ ಆಗಿದ್ದಾರೆ.
ಈ ಬಾರಿ ಏಷ್ಯಾಕಪ್ ಟೂರ್ನಿಗಿಂತ ಹೆಚ್ಚು ಕ್ರೇಜ್ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕಿದೆ. ಆಗಸ್ಟ್ 28ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಕದನ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳಂತು ಬಹಳ ಕಾತುರದಿಂದ ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಕೊಹ್ಲಿ ಕೂಡ ಈಗಾಗಲೇ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಜಿಮ್ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ 100ನೇ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಕೂಡ ಆಡಿದ ಸಾಧನೆ ಮಾಡುವರು. ಜೊತೆಗೆ ಈ ರೆಕಾರ್ಡ್ ನಿರ್ಮಿಸುವ ಎರಡನೇ ಭಾರತೀಯ ಆಟಗಾರನಾಗಲಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್‌ಬೈ: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.