ಇಂಗ್ಲೆಂಡ್ ತಂಡವು ಇತ್ತೀಚೆಗೆ 50 ಓವರ್ಗಳಲ್ಲಿ 498 ರನ್ ಬಾರಿಸಿ ಏಕದಿನ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿತ್ತು. ಆದರೆ ಈ ಬ್ಯಾಟಿಂಗ್ ಅಬ್ಬರ ಏನೂ ಅಲ್ಲ ಎಂಬಂತಹ ಮತ್ತೊಂದು ಇನಿಂಗ್ಸ್ ಮೂಡಿಬಂದಿದೆ. ಅದು ಕೂಡ ಟಿ20 ಕ್ರಿಕೆಟ್ನಲ್ಲಿ ಎಂಬುದು ವಿಶೇಷ. ಅಂದರೆ ಈ ಪಂದ್ಯದಲ್ಲಿ ಕೇವಲ 38.5 ಓವರ್ಗಳಲ್ಲಿ ಮೂಡಿಬಂದ ಒಟ್ಟು ಸ್ಕೋರ್ ಬರೋಬ್ಬರಿ 424 ರನ್ಗಳು. ಇಂತಹದೊಂದು ಸ್ಪೋಟಕ ಬ್ಯಾಟಿಂಗ್ಗೆ ಸಾಕ್ಷಿಯಾಗಿದ್ದು ಇಂಗ್ಲೆಂಡ್ನ ಟಿ20 ಬ್ಲಾಸ್ಟ್ ಲೀಗ್. ಈ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್ ಮತ್ತು ವಾರ್ವಿಕ್‌ಷೈರ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ನಾರ್ಥಾಂಪ್ಟನ್‌ಶೈರ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ರಿಸ್ ಲಿನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಲಿನ್ 59 ರನ್ ಬಾರಿಸಿದರೆ, ಮತ್ತೊಂದೆಡೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೈಫ್ ಝೈಬ್ ಕೇವಲ 32 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್ನೊಂದಿಗೆ 74 ರನ್ ಸಿಡಿಸಿದರು. ಪರಿಣಾಮ ನಾರ್ಥಾಂಪ್ಟನ್‌ಶೈರ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್ ಕಲೆಹಾಕಿತು. ಇತ್ತ ಬೃಹತ್ ಮೊತ್ತ ಕಲೆಹಾಕಿದ್ದ ಕಾರಣ ಗೆಲುವು ನಾರ್ಥಾಂಪ್ಟನ್‌ಶೈರ್ ತಂಡದ್ದೇ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಬೃಹತ್ ಗುರಿಯನ್ನು ಬೆನ್ನತ್ತುವ ಆತ್ಮವಿಶ್ವಾಸದಿಂದಲೇ ವಾರ್ವಿಕ್‌ಷೈರ್ ಕೂಡ ಕಣಕ್ಕಿಳಿಯಿತು.
ವಾರ್ವಿಕ್‌ಷೈರ್ ತಂಡವು ಮೊದಲ 4 ಓವರ್ಗಳಲ್ಲಿ 44 ರನ್ ಬಾರಿಸಿದರೂ, 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಆ್ಯಡಂ ಹೋಸ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅಲೆಕ್ಸ್ ಡೇವಿಸ್ ತಂಡಕ್ಕೆ ಆಸರೆಯಾಗಿ ನಿಂತರು. ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ 10ನೇ ಓವರ್ ಮುಕ್ತಾಯದ ವೇಳೆ ತಂಡದ ಮೊತ್ತವನ್ನು 110 ರನ್ಗಳ ಗಡಿದಾಟಿಸಿದರು.
ಈ ಹಂತದಲ್ಲಿ 18 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 44 ರನ್ ಬಾರಿಸಿದ್ದ ಅಲೆಕ್ಸ್ ಡೇವಿಸ್ ಔಟಾದರು. ಬಳಿಕ ಬಂದ ಕ್ರಿಸ್ ಬೆಂಜಮಿನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆ್ಯಡಂ ಹೋಸ್ ಜೊತೆಗೂಡಿ ನಾರ್ಥಾಂಪ್ಟನ್‌ಶೈರ್ ಬೌಲರ್ಗಳ ಬೆಂಡೆತ್ತಿದ ಬೆಂಜಮಿನ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಪರಿಣಾಮ 18.5 ಓವರ್ಗಳಲ್ಲಿ ವಾರ್ವಿಕ್‌ಷೈರ್ ತಂಡವು 213 ರನ್ಗಳಿಸುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ವಾರ್ವಿಕ್‌ಷೈರ್ ಪರ ಆ್ಯಡಂ ಹೋಸ್ 44 ಎಸೆತಗಳಲ್ಲಿ 4 ಸಿಕ್ಸ್ , 3 ಫೋರ್ನೊಂದಿಗೆ ಅಜೇಯ 63 ರನ್ ಬಾರಿಸಿದರೆ, ಕ್ರಿಸ್ ಬೆಂಜಮಿನ್ ಕೇವಲ 31 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 4 ಫೋರ್ ಬಾರಿಸಿ ಅಜೇಯ 58 ರನ್ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ವಿಶೇಷ ಎಂದರೆ ಈ ಪಂದ್ಯಗಳಲ್ಲಿ ಎರಡೂ ತಂಡಗಳಿಂದ ಮೂಡಿಬಂದ ಒಟ್ಟು ಸ್ಕೋರ್ 424 ರನ್ಗಳು. ಅದು ಕೂಡ 38.5 ಓವರ್ಗಳಲ್ಲಿ ಎಂಬುದು ವಿಶೇಷ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.